ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಳ ಕಾಯ್ದೆಯನ್ನು ಹೈಕೋರ್ಟ್ ರದ್ದುಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರುವಾಗ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು "ಈ ನನ್ ಮಕ್ಕಳು ಕಾಂಗ್ರೆಸ್ನವರು..." ಎಂದು ಏಕವಚನದಲ್ಲಿ ಮಾತನಾಡಿದ್ದರು. ವಿಜಯೇಂದ್ರ ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದ್ದು, ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್, ಮೂರು ದಿನಗಳ ಒಳಗಾಗಿ ವಿಜಯೇಂದ್ರ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು.
ಮತ್ತೊಂದೆಡೆ, ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ವಿಜಯೇಂದ್ರ ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದ ಸುತ್ತಮುತ್ತ “RTGS ಚೋರ್ ಬಿ.ವೈ. ವಿಜಯೇಂದ್ರ” ಸೇರಿದಂತೆ ವಿವಿಧ ಲೇವಡಿಯ ಪೋಸ್ಟರ್ಗಳನ್ನು ಅಂಟಿಸಿ ಆಕ್ರೋಶ ಹೊರಹಾಕಿದ್ದರು.
ವಿವಾದ ಬೆಳೆಯುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಬಿ.ವೈ. ವಿಜಯೇಂದ್ರ, "ದಾವಣಗೆರೆಯಲ್ಲಿ ಮೀಸಲಾತಿ ಹಾಗೂ ಕೆಪಿಎಸ್ಸಿ ವಿಚಾರವಾಗಿ ಮಾತನಾಡುವಾಗ ಆಡುಭಾಷೆಯಲ್ಲಿ ಆ ಪದ ಬಂದಿದೆಯೇ ಹೊರತು ಯಾರನ್ನೂ ಅವಮಾನಿಸುವ ದುರುದ್ದೇಶ ನನಗಿರಲಿಲ್ಲ. ನನ್ನ ಮಾತಿನಿಂದ ಕಾಂಗ್ರೆಸ್ನವರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೇಳುತ್ತೇನೆ" ಎಂದು ತಿಳಿಸಿದ್ದಾರೆ.




