ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಏಕವಚನದಲ್ಲಿ ನಿಂದಿಸಿರುವ ಹೇಳಿಕೆ ಈಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸ್ವರೂಪದ ಪೋಸ್ಟರ್ ಸಮರಕ್ಕೆ ಕಾರಣವಾಗಿದೆ.
ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಸ್ಸಿ/ಎಸ್ಟಿ ಮೀಸಲಾತಿ ಹಾಗೂ ಹಾಲಿನ ದರ ಏರಿಕೆ ವಿಚಾರವಾಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ, ವಿಜಯೇಂದ್ರ ಅವರು "ಈ ನನ್ ಮಕ್ಕಳು ಕಾಂಗ್ರೆಸ್ನವರು ಇದ್ದಾರಲ್ಲಾ..." ಎಂದು ಏಕವಚನದಲ್ಲಿ ಲೇವಡಿ ಮಾಡಿದ್ದರು. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೋಸ್ಟರ್ನಲ್ಲಿ ಏನಿದೆ?
ವಿಜಯೇಂದ್ರ ಅವರ ಹೇಳಿಕೆಗೆ ತಿರುಗೇಟು ನೀಡಲು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಬೆಂಗಳೂರಿನ ವಿವಿಧೆಡೆ 'ಪೋಸ್ಟರ್ ಚಳವಳಿ' ಆರಂಭಿಸಿದ್ದಾರೆ.
ಅಂಟಿಸಲಾಗಿರುವ ಪೋಸ್ಟರ್ಗಳಲ್ಲಿ "RTGS ಚೋರ್ ಬಿ.ವೈ. ವಿಜಯೇಂದ್ರ" ಹಾಗೂ "ನೀನು ಹೇಡಿ, RTGS ಕೇಡಿ" ಎಂಬ ಕಟು ಪದಗಳೊಂದಿಗೆ ಹಳೆಯ ಭ್ರಷ್ಟಾಚಾರದ ಆರೋಪಗಳನ್ನು ಉಲ್ಲೇಖಿಸಿ ಟೀಕಿಸಲಾಗಿದೆ.
ಪೋಸ್ಟರ್ ಅಂಟಿಸಿದ ಸ್ಥಳಗಳು: ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸ, ವಿಜಯೇಂದ್ರ ಅವರ ಸ್ವಂತ ಮನೆ ಸೇರಿದಂತೆ ರಾಜಾಜಿನಗರ ಮತ್ತು ಮಂಜುನಾಥನಗರದ ಪ್ರಮುಖ ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಈ ಪೋಸ್ಟರ್ಗಳು ಪ್ರತ್ಯಕ್ಷವಾಗಿವೆ.




