ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಗರದಲ್ಲಿ ಇತ್ತೀಚೆಗೆ ವಕೀಲರೊಬ್ಬರ ಕೊಲೆ ಹಾಗೂ ವೃತ್ತಿನಿರತ ವಕೀಲರ ಮೇಲಿನ ದೌರ್ಜನ್ಯ, ಹಲ್ಲೆಗಳನ್ನು ಖಂಡಿಸಿ ಬೆಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಹೈಕೋರ್ಟ್, ಸಿಟಿ ಸಿವಿಲ್ ಕೋರ್ಟ್, ಮ್ಯಾಜಿಸ್ಟ್ರೇಟ್ ಹಾಗೂ ಮೆಯೊ ಹಾಲ್ ಕೋರ್ಟ್‌ಗಳ ಕಲಾಪಗಳನ್ನು ಬಹಿಷ್ಕರಿಸಿದ ನೂರಾರು ವಕೀಲರು, ವೃತ್ತಿನಿರತರಿಗೆ ಸೂಕ್ತ ಭದ್ರತೆ ಮತ್ತು ಕಾನೂನು ರಕ್ಷಣೆ ಒದಗಿಸುವಂತೆ ಒತ್ತಾಯಿಸಿದರು.
ಕಠಿಣ ಶಿಕ್ಷೆಗೆ ಆಗ್ರಹ: ವಕೀಲರ ಮೇಲೆ ಹಲ್ಲೆ ನಡೆಸುವ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಕನಿಷ್ಠ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸುವಂತೆ ಕಾನೂನು ತರಬೇಕು ಮತ್ತು ವಕೀಲರ ರಕ್ಷಣಾ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ವಕೀಲರು ಆಗ್ರಹಿಸಿದರು.
ಪೊಲೀಸ್ ಠಾಣೆಗಳ ವಿರುದ್ಧ ಆರೋಪ: ವಕೀಲರ ಸಂಘದ ಮುಖಂಡ ವಿವೇಕ್ ಸುಬ್ಬಾರೆಡ್ಡಿ ಮಾತನಾಡಿ, "ಪೊಲೀಸ್ ಠಾಣೆಗಳು ಸಿವಿಲ್ ವ್ಯಾಜ್ಯಗಳ ಡೀಲ್ ಕೇಂದ್ರಗಳಾಗಿ ಮಾರ್ಪಟ್ಟಿದ್ದು, ನ್ಯಾಯ ವಿತರಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿವೆ" ಎಂದು ಗಂಭೀರ ಆರೋಪ ಮಾಡಿದರು.
ಸ್ವಯಂಪ್ರೇರಿತ PIL ದಾಖಲು: ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಆರ್. ರಾಜಣ್ಣ ಹಾಗೂ ವಿವೇಕ್ ಸುಬ್ಬಾರೆಡ್ಡಿ ನೇತೃತ್ವದಲ್ಲಿ ವಕೀಲರು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್ ಹಾಗೂ ನ್ಯಾಯಮೂರ್ತಿ ಎಚ್. ಶಾಂತಿಭೂಷಣ್ ಅವರಿದ್ದ ಪೀಠವು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಳ್ಳುವುದಾಗಿ ತಿಳಿಸಿತು.
ನ್ಯಾಯಾಂಗ ನಿಂದನೆ ಪ್ರಕರಣ: ಮತ್ತೊಂದೆಡೆ, ಪ್ರತಿಭಟನೆಗೆ ಕರೆ ನೀಡಿ ಕಲಾಪ ಬಹಿಷ್ಕರಿಸಿದ್ದಕ್ಕಾಗಿ ಕೋರ್ಟ್ ಹಾಲ್ 1ರಲ್ಲಿ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ದ್ವಿಸದಸ್ಯ ನ್ಯಾಯಪೀಠವು ವಕೀಲರ ಸಂಘದ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿಕೊಂಡಿದೆ.
ಈ ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಎಚ್.ವಿ. ಪ್ರವೀಣ್ ಗೌಡ, ಎಂ. ಅರುಣ್ ಶ್ಯಾಮ್, ಎಂ. ದೇವರಾಜ್, ಎಸ್.ಎಫ್. ಗೌತಮ್ ಚಂದ್ ಸೇರಿದಂತೆ ನೂರಾರು ಹಿರಿಯ ಹಾಗೂ ಕಿರಿಯ ವಕೀಲರು ಭಾಗವಹಿಸಿದ್ದರು.




