ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮಗಳ ಕುರಿತು ಜುಲೈ 2 ರಂದು ವಿಡಿಯೋ ಸಾಕ್ಷ್ಯ ಬಿಡುಗಡೆ ಮಾಡಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಜುಲೈ-3ರಂದು ಶುಕ್ರವಾರ ಮತ್ತೊಂದು ಆಘಾತಕಾರಿ ವಿಡಿಯೋ ರಿಲೀಸ್ ಮಾಡಿದ್ದಾರೆ.
ಜೆಡಿಎಸ್ ಪಕ್ಷದ ಪ್ರಧಾನ ಕಚೇರಿ ಜೆ.ಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ವಿಡಿಯೋ ಬಹಿರಂಗಪಡಿಸಿದ ಅವರು, ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಎಲ್‌ಒಗಳು (ಬೂತ್ ಮಟ್ಟದ ಅಧಿಕಾರಿಗಳು) ಆಡಳಿತ ಪಕ್ಷದ ಬೆಂಬಲಿತ ಶಾಸಕ ಎಸ್.ಟಿ. ಸೋಮಶೇಖರ್ ಅವರ ಭಾವಚಿತ್ರವಿರುವ ಪುಸ್ತಕಗಳನ್ನು ಹಿಡಿದುಕೊಂಡು ಅಕ್ರಮ ಪ್ರಕ್ರಿಯೆಯಲ್ಲಿ ತೊಡಗಿರುವುದನ್ನು ಸಾಕ್ಷ್ಯ ಸಮೇತ ತೋರಿಸಿದ್ದಾರೆ.
ಮತದಾರರ ಹುಂಡಿಯನ್ನೇ ಲೂಟಿ ಮಾಡಲು ಸರ್ಕಾರ ಹೊರಟಿದೆ!:
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಹೆಚ್‌ಡಿಕೆ, "ಅಧಿಕಾರಿಗಳು ಸರ್ಕಾರದ ಗುಲಾಮರಾಗಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ. ಕೆಪಿಸಿಸಿಯ ಹೊಸ ಅಧ್ಯಕ್ಷರು ರಾಮಮಂದಿರದ ಬಗ್ಗೆ ಮಾತನಾಡುತ್ತಾರೆ, ಆದರೆ ಇಲ್ಲಿ ನೋಡಿದರೆ ಇಡೀ ಮತದಾರರ ಹುಂಡಿಯನ್ನೇ ಲೂಟಿ ಮಾಡಲು ಸರ್ಕಾರ ಹೊರಟಿದೆ. ಆ ಮೂಲಕ ದೇಶದ ಸಂವಿಧಾನವನ್ನೇ ಬುಡಮೇಲು ಮಾಡುವ ಕೆಲಸ ನಡೆಯುತ್ತಿದೆ" ಎಂದು ಗಂಭೀರವಾಗಿ ಆರೋಪಿಸಿದರು.
ಈ ಹಗರಣದ ವ್ಯಾಪ್ತಿ ದೊಡ್ಡದಾಗಿದ್ದು, ತಮಗೆ ರಾಜ್ಯದ ಹಲವು ಭಾಗಗಳಿಂದ ಸಾರ್ವಜನಿಕರು ಕರೆ ಮಾಡಿ ಅಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಸಿಇಒ ಅನ್ಬುಕುಮಾರ್ ವಿರುದ್ಧ ಕುಮಾರಸ್ವಾಮಿ ಅಸಮಾಧಾನ:
ಇಸಿಐ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು ಹೊರಡಿಸಿರುವ ಖಡಕ್ ಆದೇಶದ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, "ಅನ್ಬುಕುಮಾರ್ ಅವರು ಕೇವಲ ಎಸಿ ಕಚೇರಿಯಲ್ಲಿ ಕುಳಿತು ಆದೇಶಿಸಿದರೆ ಸಾಕಾ? ನೆಲಮಟ್ಟದಲ್ಲಿ ಏನು ಕ್ರಮ ಕೈಗೊಳ್ಳಲಾಗಿದೆ? ನಾವು ಈಗಾಗಲೇ ನೀಡಿರುವ ದೂರಿನ ಬಗ್ಗೆ ಏನು ಕ್ರಮ ಆಗಿದೆ? ಬೆಳಿಗ್ಗೆಯಿಂದ ಮುಖ್ಯ ಚುನಾವಣಾಧಿಕಾರಿಗಳು ಕಚೇರಿಗೇ ಬಂದಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಚುನಾವಣಾ ಆಯೋಗದ ಮೆಟ್ಟಿಲೇರಲು ಜೆಡಿಎಸ್ ಮುಂದು:
ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಲೆಯಾಗುತ್ತಿರುವ ಈ ಅಕ್ರಮದ ವಿರುದ್ಧ ಜೆಡಿಎಸ್ ನಿಯೋಗವು ಇಂದು ರಾಜ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ ಅಧಿಕೃತ ದೂರು ನೀಡಲಿದೆ. ಅಷ್ಟೇ ಅಲ್ಲದೆ, ಈ ಬೃಹತ್ ಹಗರಣದ ತನಿಖೆಗಾಗಿ ದೆಹಲಿಗೆ ತೆರಳಿ ಕೇಂದ್ರ ಚುನಾವಣಾ ಆಯುಕ್ತರನ್ನು ಭೇಟಿ ಮಾಡಲು ಸಮಯ ಕೋರಿರುವುದಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.



