ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಕ್ಕೆ ಅನುಗುಣವಾಗಿ ಯುವಜನರಿಗೆ ತರಬೇತಿ ನೀಡಿ, ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಕೌಶಲ್ಯಪೂರ್ಣ ಯುವಪಡೆಯನ್ನು ಸಜ್ಜುಗೊಳಿಸಲು ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯ ಕಾರ್ಯನಿರತವಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.ಆಟೋಮೋಟಿವ್ ಸ್ಕಿಲ್ಸ್ ಡೆವಲಪ್‌ಮೆಂಟ್ ಕೌನ್ಸಿಲ್ ಪ್ರಗತಿ ಹಾಗೂ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ದೆಹಲಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನಿ ಮೋದಿ ಕನಸಿಗೆ ಬಲ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಹಾಗೂ 'ಆತ್ಮನಿರ್ಭರ ಭಾರತ'ದ ಪರಿಕಲ್ಪನೆಯಂತೆ ಭಾರತವು ವೇಗವಾಗಿ ಜಾಗತಿಕ ಉತ್ಪಾದನಾ ಹಬ್ ಆಗಿ ಹೊರಹೊಮ್ಮುತ್ತಿದೆ. ಇದಕ್ಕೆ ಪೂರಕವಾಗಿ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ.
ASDC ಮಹತ್ವದ ಸಾಧನೆ: 2025-26ರ ಹಣಕಾಸು ವರ್ಷದಲ್ಲಿ ASDC ಸಂಸ್ಥೆಯು 5 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ ತಲುಪಿಸಿದ್ದು, 2.89 ಲಕ್ಷಕ್ಕೂ ಅಧಿಕ ಅಪ್ರೆಂಟಿಸ್‌ಶಿಪ್ ಒಪ್ಪಂದಗಳನ್ನು ಯಶಸ್ವಿಯಾಗಿ ನೆರವೇರಿಸಿದೆ.
ಭವಿಷ್ಯದ ತಂತ್ರಜ್ಞಾನ ಆಧಾರಿತ ತರಬೇತಿ: ಬೃಹತ್ ಕೈಗಾರಿಕಾ ಸಚಿವಾಲಯದ ಕ್ಯಾಪಿಟಲ್ ಗೂಡ್ಸ್ ಸ್ಕೀಮ್ - ಫೇಸ್ 2 ಅಡಿಯಲ್ಲಿ ರೋಬೋಟಿಕ್ಸ್, ಆಟೊಮೇಷನ್, ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್, ಇಂಡಸ್ಟ್ರಿ 4.0, ಎಲೆಕ್ಟ್ರಿಕ್ ವೆಹಿಕಲ್ ತಂತ್ರಜ್ಞಾನ ಹಾಗೂ ಆಟೋಮೊಬೈಲ್ ಸುರಕ್ಷತೆ ವಿಷಯಗಳಲ್ಲಿ ವಿಶೇಷ ತರಬೇತಿ ನೀಡಲಾಗುತ್ತಿದೆ.
ಉದ್ಯೋಗಾವಕಾಶಗಳ ವೃದ್ಧಿ: ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಿ, ತಂತ್ರಜ್ಞಾನ ಆಧಾರಿತ ತರಬೇತಿಯ ಮೂಲಕ ಯುವಕರಿಗೆ ಭವಿಷ್ಯದಲ್ಲಿ ಹೆಚ್ಚು ಉದ್ಯೋಗಾವಕಾಶ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದೆ.
"ಆಟೋಮೊಬೈಲ್ ರಂಗವು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದ್ದು, ನಾಳಿನ ಉದ್ಯೋಗಾವಕಾಶಗಳಿಗೆ ನಮ್ಮ ಯುವಜನರನ್ನು ಸಜ್ಜುಗೊಳಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ." ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಬೃಹತ್ ಕೈಗಾರಿಕಾ ಸಚಿವರು.



