ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ 8 ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಜರುಗಿದ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ. ಒಟ್ಟು 44,073 ಮತದಾರ ಪೈಕಿ, 17,371ಪುರುಷ ಹಾಗೂ 12,038 ಮಹಿಳಾ ಸೇರಿ ಒಟ್ಟು 29,409 ಮತದಾರರು ತಮ್ಮ ಮತದಾನ ಹಕ್ಕು ಚಲಾಯಿಸಿದ್ದಾರೆ. ಜಿಲ್ಲೆಯಲ್ಲಿ ಶೇ.66.73 ರಷ್ಟು ಮತದಾನ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ರಮ್ಯಾ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಸುಸೂತ್ರ ಮತದಾನಕ್ಕಾಗಿ 22 ಮುಖ್ಯ ಮತಗಟ್ಟೆಗಳ ಜೊತೆಗೆ 33 ಪೂರಕ ಮತಗಟ್ಟೆಗಳು ಸೇರಿ ಒಟ್ಟು 55 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮುಂಜಾನೆ 8 ಗಂಟೆಗೆ ಮೊದಲು ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ಹಾಗೂ ಇತರೆ ಮತಗಟ್ಟೆ ಅಧಿಕಾರಿಗಳು ಮತಗಟ್ಟೆಗಳನ್ನು ಮತದಾನಕ್ಕೆ ಸಿದ್ದಗೊಳಿಸಿದರು. ಪದವೀಧರ ಕ್ಷೇತ್ರದ ಚುನಾವಣೆ ಪ್ರಾಶಸ್ತ್ಯ ಆಧಾರಿತ ಮತದಾನ ಪದ್ದತಿ ಅನುಸರಿಸುವುದರಿಂದ, ತಿಳಿ ಗುಲಾಬಿ ಬಣ್ಣ ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆಯಿತು. ಇದಕ್ಕಾಗಿ ಮತಗಟ್ಟೆ ಅಧಿಕಾರಿಗಳು ಬ್ಯಾಲೆಟ್ ಬಾಕ್ಸ್‌ಗಳನ್ನು ಚುನಾವಣೆ ಆಯೋಗದ ನಿರ್ದೇಶನದಂತೆ, ಮತಗಟ್ಟೆ ಏಜಂಟರ್ ಸಮ್ಮುಖದಲ್ಲಿ ಸೀಲ್ ಮಾಡಿ,ಲೇಬಲ್‌ಗಳನ್ನು ಅಂಟಿಸಿ ಸಿದ್ದಗೊಳಿಸಿದರು.ಯಾವುದೇ ಅಡತಡಗಳು ಇಲ್ಲದೆ 55 ಮತಗಟ್ಟೆಗಳಲ್ಲಿ ಬೆಳಿಗ್ಗೆ 8 ಗಂಟೆ ಸರಿಯಾಗಿ ಮತದಾನ ಪ್ರಕ್ರಿಯೆ ಆರಂಭವಾಯಿತು.
ಮತಗಟ್ಟೆ ಬಳಿ ಬಿ.ಎಲ್.ಓ.ಗಳು ಮತದಾರ ವಿವರಗಳು ಉಳ್ಳ ಸ್ಲಿಪ್ ಗಳನ್ನು ವಿತರಿಸಿದರು. ಸ್ಲಿಪ್ ಪಡೆದ ಅರ್ಹ ಮತದಾರರು ಸರಿತಿ ಸಾಲಿನಲ್ಲಿ ನಿಂತು ಮತಚಲಾಯಿಸಿದರು. ಮತದಾನ ಮಾಡಿದವರಿಗೆ ಚುನಾವಣೆ ಸಿಬ್ಬಂದಿ ಕೈ ಬೆರಳುಗಳಿಗೆ ಗುರುತಿನ ಶಾಹಿ ಬಣ್ಣ ಹಚ್ಚಿದರು.
ಆರಂಭದಲ್ಲಿ 2 ಗಂಟೆಗಳ ಕಾಲ ಮತದಾನ ಪ್ರಕ್ರಿಯೆ ಮಂದಗತಿಯಲ್ಲಿ ಇತ್ತು. ಬೆಳಿಗ್ಗೆ 10 ಗಂಟೆ ವೇಳೆಗೆ 939 ಪುರುಷ ಹಾಗೂ 500 ಮಹಿಳೆಯರು ಸೇರಿ 1,439 ಜನರು ಮತಚಲಾಯಿಸಿದರು. ನಂತರ 12 ಗಂಟೆ ವೇಳೆ ಮತದಾನ ಪ್ರಕ್ರಿಯೆ ಸ್ವಲ್ಪ ಚುರುಕುಗೊಂಡಿತು. 3,896 ಪುರುಷ ಹಾಗೂ 2,505 ಮಹಿಳೆಯರು ಸೇರಿ 6,401 ಜನರು ಮತ ಚಲಾಯಿಸಿದರು.ಮಧ್ಯಾಹ್ನ 2 ಗಂಟೆಗೆ 8,963 ಪುರುಷ ಹಾಗೂ 6,409 ಮಹಿಳೆಯರು ಸೇರಿ ಮತದಾನ ಮಾಡಿದವರ ಪ್ರಮಾಣ15,372ಕ್ಕೆ ಏರಿಕೆಯಾಯಿತು. ಅಂತಿಮವಾಗಿ 17,371ಪುರುಷ ಹಾಗೂ 12,038 ಮಹಿಳಾ ಸೇರಿ ಒಟ್ಟು 29,409 ಮತದಾರರು ಜಿಲ್ಲೆ ಮತದಾನ ಮಾಡಿದ್ದಾರೆ.



