ಚಂದ್ರವಳ್ಳಿ ನ್ಯೂಸ್, ಮೈಸೂರು:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ವರ್ಚಸ್ಸಿಗೆ ಕಪ್ಪುಚುಕ್ಕೆ ಇಟ್ಟು, ಅವರನ್ನು ಬ್ಲ್ಯಾಕ್ಮೇಲ್ ಮಾಡುವ ದುರುದ್ದೇಶದಿಂದ ಸ್ಟಿಂಗ್ ಆಪರೇಷನ್ ನಡೆಸಲಾಗಿದ್ದು, ಈ ಷಡ್ಯಂತ್ರದ ಹಿಂದೆ ಸ್ವಪಕ್ಷ ಕಾಂಗ್ರೆಸ್ನವರೇ ಇದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಹಾಗೂ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಫೋಟಕ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು, ಈ ಸಂಪೂರ್ಣ ಬೆಳವಣಿಗೆಯ ಬಗ್ಗೆ ತಂದೆಯವರಿಗೂ (ಸಿದ್ದರಾಮಯ್ಯ) ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ಸಂಸದೀಯ ನೈತಿಕತೆಗೆ ಧಕ್ಕೆ ತರುವ ಯತ್ನ: 40 ವರ್ಷಗಳ ದೀರ್ಘ ರಾಜಕೀಯ ಜೀವನದಲ್ಲಿ ಯಾವುದೇ ಕಳಂಕವಿಲ್ಲದೆ ಸ್ವಚ್ಛ ಆಡಳಿತ ನಡೆಸಿದ ಸಿದ್ದರಾಮಯ್ಯ ಅವರ ಲೆಗಸಿ ಹಾಳುಮಾಡಲು ಮತ್ತು ರಾಜಕೀಯ ತೇಜೋವಧೆ ಮಾಡಲು ಈ ಸ್ಟಿಂಗ್ ಆಪರೇಷನ್ ಅನ್ನು ಮುನ್ನೆಲೆಗೆ ತರಲಾಗಿದೆ. ಸ್ವಪಕ್ಷೀಯರ ಕೈವಾಡ: ಈ ಪ್ರಕರಣದ ವೀಡಿಯೋ ಪರಿಶೀಲಿಸಿದಾಗ ನಮ್ಮ ಪಕ್ಷದವರೇ ಭಾಗಿಯಾಗಿರುವುದು ಮೇಲ್ನೋಟಕ್ಕೆ ತಿಳಿದುಬರುತ್ತಿದೆ. ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆಯೊಬ್ಬರು ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಜೊತೆಗೆ ಮಾಧ್ಯಮ ಸಂಸ್ಥೆಯೊಂದರ ಮುಖ್ಯಸ್ಥರೂ ಹಾಗೂ ಪತ್ರಕರ್ತರೊಬ್ಬರು ಇದರಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗಿದೆ.
ಟಿಕೆಟ್ಗಾಗಿ ಬ್ಲ್ಯಾಕ್ಮೇಲ್ ತಂತ್ರ: ಮುಂಬರುವ ಚುನಾವಣಾ ಟಿಕೆಟ್ ಗಿಟ್ಟಿಸಿಕೊಳ್ಳಲು ಮತ್ತು ರಾಜಕೀಯ ಲಾಭ ಪಡೆಯಲು ಸಿದ್ದರಾಮಯ್ಯ ಅವರನ್ನು ಬ್ಲ್ಯಾಕ್ಮೇಲ್ ಮಾಡಲು ಈ ಕೀಳು ಮಟ್ಟದ ಹಂಚಿಕೆ ರೂಪಿಸಲಾಗಿದೆ.
ನಿಷ್ಪಕ್ಷಪಾತ ತನಿಖೆಗೆ ಸೂಚನೆ: ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಮುಲಾಜಿಲ್ಲದೆ ಬಂಧಿಸಿ ಕ್ರಮ ಕೈಗೊಳ್ಳುವಂತೆ ತಂದೆಯವರೇ ಸ್ಪಷ್ಟ ಸೂಚನೆ ನೀಡಿದ್ದಾರೆ.
ಸದ್ಯ ಸಿಸಿಬಿ ಹಾಗೂ ಪೊಲೀಸರು ನಡೆಸುತ್ತಿರುವ ತನಿಖೆಯ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಆಕಸ್ಮಾತ್ ಈ ತನಿಖೆಯಲ್ಲಿ ಸೂಕ್ತ ಪ್ರಗತಿ ಕಂಡುಬರದಿದ್ದರೆ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಲಾಗುವುದು.
"ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಇಡೀ ಕಾಂಗ್ರೆಸ್ ಪಕ್ಷವನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಈ ಕುತಂತ್ರದಿಂದ ತಂದೆಯವರು ತೀವ್ರ ಮನನೊಂದಿದ್ದಾರೆ. ಆದರೆ ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ" ಎಂದು ಯತೀಂದ್ರ ವಿಶ್ವಾಸ ವ್ಯಕ್ತಪಡಿಸಿದರು.



