ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರಕ್ಕೆ ಹೊಂದಿಕೊಂಡಿರುವ ಕಸಬಾ ಹೋಬಳಿ ವೀರಭದ್ರನ ಪಾಳ್ಯ ಸರ್ವೇ ನಂಬರ್ 51 ರ ಕೆಮ್ಮಣ್ಣು ಗುಂಡಿ ಸಾರ್ವಜನಿಕ ಸ್ಮಶಾನಕ್ಕೆ ತಡೆ ಗೋಡೆ ನಿರ್ಮಿಸಿ ಸ್ಥಳೀಯರ ಭಾವನೆಗಳಿಗೆ ಉಂಟು ಮಾಡುತ್ತಿರುವವರ ವಿರುದ್ಧ ತಡೆಗೋಡೆ ತೆರವು ಗೊಳಿಸಿ ಅವರ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸ್ಮಶಾನ ಹೋರಾಟ ಸಮಿತಿ ಸದಸ್ಯರು ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಧಿಕಾರಿಗಳಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದ್ದಾರೆ.
ಸ್ಮಶಾನದ ಜಾಗಕ್ಕೆ ಸಂಬಂದಿಸಿದ ದಾಖಲೆಗಳನ್ನು ಸಲ್ಲಿಸಿದ ಹೋರಾಟ ಸಮಿತಿಯ ಮುಖಂಡರಾದ ಸಂಜೀವ್ ನಾಯಕ್ ಮಾತನಾಡಿ ಕೆಮ್ಮಣ್ಣು ಗುಂಡಿ ಸರ್ವೇ ನಂಬರ್ 51ರಲ್ಲಿ ಪರಿಶಿಷ್ಟರು, ಹಿಂದುಳಿದ ವರ್ಗಗಳ ಜನರು ತಲೆಮಾರುಗಳಿಂದ ತಮ್ಮ ಸಂಪ್ರದಾಯದಂತೆ ಈ ಜಾಗವನ್ನು ಅಂತ್ಯ ಸಂಸ್ಕಾರಕ್ಕೆ ಬಳಸುತ್ತಿದ್ದಾರೆ. ಆದರೆ ಇತ್ತೀಚಿಗೆ ವ್ಯಕ್ತಿಯೊಬ್ಬರು ಸದರಿ ಸ್ಮಶಾನದ ಜಾಗ ತಮ್ಮದೆಂದು ಸ್ಮಶಾನದ ರಸ್ತೆಗೆ ತಡೆಗೋಡೆ ನಿರ್ಮಿಸಿ ಸ್ಥಳೀಯರಿಗೆ ತೊಂದರೆ ಕೊಡುತ್ತಿದ್ದಾರೆ. ಸರಿಯಾದ ದಾಖಲೆಗಳಿಲ್ಲದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸ್ಮಶಾನದ ಜಾಗವನ್ನು ಒತ್ತುವರಿ ಮಾಡಿಕೊಂಡು ಅಂತ್ಯ ಸಂಸ್ಕಾರಕ್ಕೆ ಹೋದ ಜನರಿಗೆ ದೌರ್ಜನ್ಯ ಎಸಗುತ್ತಿದ್ದಾರೆ. ಈ ಬಗ್ಗೆ ತಾಲೂಕು ಆಡಳಿತ ಹಾಗೂ ಕಂದಾಯ ವಿಭಾಗಕ್ಕೆ ಹಲವಾರು ಬಾರಿ ಮನವಿ ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಕೆಳದಿನಗಳ ಹಿಂದೆ ಪರಿಶಿಷ್ಟ ಪಂಗಡದ ಮಹಿಳೆಯೊಬ್ಬರು ಮೃತ ಪಟ್ಟಾಗ ಅಂತ್ಯ ಸಂಸ್ಕಾರ ಮಾಡಲು ಬಂದಾಗ ಒತ್ತುವರಿ ಮಾಡಿಕೊಂಡ ವ್ಯಕ್ತಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ಕೊಡದೆ ತೊಂದರೆ ಕೊಟ್ಟಾಗ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ ಅಂತ್ಯ ಸಂಸ್ಕಾರ ಮಾಡಲಾಯಿತು. ಪರಿಶಿಷ್ಟರಿಗೆ ಈ ಗತಿಯಾದರೆ ಇನ್ನು ಬೇರೆ ವರ್ಗಗಳ ಗತಿ ಏನು ಎಂಬುದು ಸಂಬಂಧ ಪಟ್ಟವರು ಅರ್ಥ ಮಾಡಿಕೊಳ್ಳಬೇಕಿದೆ. ಇದು ಒಂದೆರಡು ಬಾರಿಯಲ್ಲ ನಿರಂತರವಾಗಿ ಅಂತ್ಯ ಸಂಸ್ಕಾರಕ್ಕೆ ಬಂದಾಗಲೆಲ್ಲ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಎಷ್ಟು ದಿನ ಇದನ್ನು ಸಹಿಸಲು ಸಾಧ್ಯ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈ ಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ತಾಲೂಕು ಆಡಳಿತ ತೀವ್ರ ಪರಿಣಾಮ ಎದುರಿಸಬೇಕಾದೀತು ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಡಿ. ಪಿ. ಆಂಜನೇಯ ಮಾತನಾಡಿ ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬರು ಸ್ಮಶಾನಕ್ಕೆ ತೆರಳುವ ರಸ್ತೆಗೆ ತಡೆಗೋಡೆ ನಿರ್ಮಿಸಿದ್ದಲ್ಲದೆ ಸ್ಮಶಾನ ದಲ್ಲಿನ ಹಲವಾರು ಸಮಾಧಿಗಳನ್ನು ದ್ವoಸ ಮಾಡಿದ್ದಾರೆ. ಅಂತ್ಯ ಸಂಸ್ಕಾರ ನಡೆಸುವವರು ಪ್ರತಿ ಬಾರಿ ಪೊಲೀಸ್ ರಕ್ಷಣೆಯಲ್ಲಿ ಅಂತ್ಯ ಸಂಸ್ಕಾರ ಮಾಡಬೇಕಾದ ದುಸ್ಥಿತಿ ಬಂದಿದೆ. ಇಷ್ಟೆಲ್ಲಾ ಬೆಳವಣಿಗೆ ನಡೆಯುತ್ತಿದ್ದರೂ ಸ್ಥಳೀಯ ಆಡಳಿತ ಕಣ್ಮುಚ್ಚಿ ಕುಳಿತಿದೆ. ಅಡ್ಡಿ ಪಡಿಸುತ್ತಿರುವ ವ್ಯಕ್ತಿ ಬಳಿ ಸದರಿ ಜಾಗಕ್ಕೆ ಸಂಬಂದಿಸಿದ ಪೂರಕ ದಾಖಲೆಗಳು ಇಲ್ಲದಿದ್ದರೂ ಸ್ಥಳೀಯ ಆಡಳಿತ ಸರಿಯಾಗಿ ಸ್ಥಳ ಪರಿಶೀಲನೆ ನಡೆಸದೆ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಈ ಬಗ್ಗೆ ಏ. 15 ರಂದು ಹೋರಾಟ ಸಮಿತಿಯಿಂದ ಪ್ರತಿಭಟನೆ ಸಹಾ ನಡೆಸಲಾಗಿತ್ತು. ಆಗ ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದು ತಹಸೀಲ್ದಾರ್ ರವರು ಸ್ಥಳ ಪರಿಶೀಲನೆ ಮಾಡಿ ಸರ್ವೇ ಕಾರ್ಯ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ಎರಡು ಬಾರಿ ಸರ್ವೇ ಕಾರ್ಯ ನಡೆದಿದೆ. ಆದರೂ ಯಾವುದೇ ಕ್ರಮವಾಗಿಲ್ಲ.
ಸ್ಮಶಾನದ ಒತ್ತುವರಿ ಜಾಗದ ಜೊತೆಗೆ ಈ ಭಾಗದ ಸುಮಾರು 15 ಎಕರೆಗೂ ಹೆಚ್ಚಿರುವ ಜಮೀನಿನಲ್ಲಿ ಅರ್ಧಕ್ಕೂ ಹೆಚ್ಚು ಸರ್ಕಾರಿ ಜಾಗವಿದೆ. ಕೆಲವು ಪ್ರಭಾವಿ ವ್ಯಕ್ತಿಗಳು ನಕಲಿ ದಾಖಲೆ ಸೃಷ್ಟಿಸಿ ಜಾಗವನ್ನು ಸ್ವಾದಿನ ಪಡಿಸಿಕೊಂಡಿದ್ದಾರೆ. ಕೆಲವರು ತಮಗೆ ಒಂದು ಎಕರೆ ಮಂಜೂರಿಯಾಗಿದೆ ಎನ್ನುತ್ತಾರೆ ಆದರೆ ಎರಡು ಪಟ್ಟು ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗೆ ಒತ್ತುವರಿ ಮಾಡಿಕೊಂಡಿರುವ ಉದಾಹರಣೆಗಳು ಕಣ್ಮುಂದಿವೆ. ಆದರೆ ಇದ್ಯಾವುದು ನಡೆದೇ ಇಲ್ಲವೇನೋ ಎಂಬಂತೆ ಕಂದಾಯ ವಿಭಾಗದ ಕೆಲ ಅಧಿಕಾರಿಗಳು ಒತ್ತುವರಿ ದಾರರ ಬೆಂಬಲಕ್ಕೆ ನಿಂತಿರುವುದು ಜನಜನಿತವಾಗಿದೆ. ಇದನ್ನು ತೆರವು ಗೊಳಿಸಲು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಮನವಿ ಕೊಟ್ಟಿದ್ದೇವೆ. ತಕ್ಷಣವೇ ಸಂಬಂಧ ಪಟ್ಟವರು ಸರ್ಕಾರಿ ಗೋಮಾಳ, ಖರಾಬ್ ಜಾಗಗಳನ್ನು ಸಮರ್ಪಕವಾಗಿ ಗುರ್ತಿಸಿ ಸರ್ಕಾರದ ವಶಕ್ಕೆ ಪಡೆದು ಸ್ಮಶಾನವನ್ನು ರಕ್ಷಿಸಿ ತಡೆಗೋಡೆಯನ್ನು ತೆರವು ಗೊಳಿಸಬೇಕು. ಜೊತೆಗೆ ಸರ್ಕಾರಿ ಜಮೀನನ್ನು ಅಕ್ರಮಿಸಿ ಕೊಂಡಿರುವವರ ವಿರುದ್ಧ ಕಾನೂನು ಕ್ರಮ ಕೈ ಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೆಮ್ಮಣ್ಣು ಗುಂಡಿ ಸಾರ್ವಜನಿಕ ಸ್ಮಶಾನ ಹೋರಾಟ ಸಮಿತಿಯ ಮುಖಂಡರಾದ ರವಿ ಕುಮಾರ್, ನಾರಾಯಣ್ ನವೀನ್, ಅರುಣ್ ಕುಮಾರ್, ಪರಮೇಶ್, ಗಂಗಪ್ಪ, ವೆಂಕಟೇಶ್, ಕಿಟ್ಟಪ್ಪ ಸೇರಿದಂತೆ ಹಿಂದುಳಿದ ಹಾಗೂ ಪರಿಶಿಷ್ಟ ವರ್ಗಗಳ ಮುಖಂಡರು ಹಾಜರಿದ್ದರು.



