ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಅಪಾರ ರಾಜಕೀಯ ಅನುಭವ ಹಾಗೂ ದಶಕಗಳ ಪಕ್ಷ ನಿಷ್ಠೆ ಹೊಂದಿರುವ ಟಿ.ಬಿ. ಜಯಚಂದ್ರ ಅವರ ನಿವಾಸಕ್ಕೆ ರಾಜ್ಯ ಕಾಂಗ್ರೆಸ್ ನಾಯಕ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಖುದ್ದಾಗಿ ಭೇಟಿ ನೀಡಿ ಸುಮಾರು ಎರಡು ಗಂಟೆಗಳ ಕಾಲ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.
ಸಚಿವ ಸಂಪುಟ ರಚನೆ ಮತ್ತು ವಿಸ್ತರಣೆಯ ಬೆನ್ನಲ್ಲೇ ಮೂಡಿದ್ದ ಅಸಮಾಧಾನದ ಬೆಂಕಿಯನ್ನು ಶಮನಗೊಳಿಸಲು ನಾಯಕತ್ವವೇ ಹಿರಿಯ ನಾಯಕನ ಮನೆ ಬಾಗಿಲಿಗೆ ತೆರಳಿರುವುದು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಹಾಗೂ ಮಹತ್ವದ ಬೆಳವಣಿಗೆಯಾಗಿ ಹೊರಹೊಮ್ಮಿದೆ.
ಹಿರಿಯತನಕ್ಕೆ ಸಿಕ್ಕ ಅಭೂತಪೂರ್ವ ಗೌರವ: ಅಧಿಕಾರಕ್ಕಾಗಲಿ ಅಥವಾ ಸ್ಥಾನಮಾನಕ್ಕಾಗಲಿ ಯಾರ ಮುಂದೆಯೂ ಎಂದೂ ತಲೆಬಾಗದ ಹಿರಿಯ ರಾಜಕಾರಣಿ ಟಿ.ಬಿ. ಜಯಚಂದ್ರ ಅವರ ಮನವೊಲಿಸಲು ಪಕ್ಷದ ಪ್ರಮುಖ ನಾಯಕತ್ವವೇ ಸ್ವತಃ ಅವರ ನಿವಾಸಕ್ಕೆ ಆಗಮಿಸಿದ್ದು, ಜಯಚಂದ್ರ ಅವರ ರಾಜಕೀಯ ಪ್ರಭಾವ, ನಿಷ್ಠೆ ಮತ್ತು ತೂಕಕ್ಕೆ ಸಾಕ್ಷಿಯಾಗಿದೆ.
೨ ಗಂಟೆಗಳ ಸುದೀರ್ಘ ಮಾತುಕತೆ: ಭೇಟಿಯ ವೇಳೆ ಉಭಯ ನಾಯಕರು ಪಕ್ಷದ ಒಳಗಿನ ಪ್ರಸ್ತುತ ಬೆಳವಣಿಗೆಗಳು, ಹಿರಿಯ ನಾಯಕರ ಸಮಾಧಾನ, ಮುಂಬರುವ ರಾಜಕೀಯ ಕಾರ್ಯತಂತ್ರ ಹಾಗೂ ಸರಕಾರ-ಪಕ್ಷದ ನಡುವಿನ ಸಮನ್ವಯತೆಯ ಕುರಿತು ಆಳವಾದ ಚರ್ಚೆ ನಡೆಸಿದರು.
ನಿಷ್ಠಾವಂತರಿಗೆ ಗೌರವದ ಸಂದೇಶ: ಪಕ್ಷಕ್ಕಾಗಿ ಶ್ರಮಿಸಿದ ನಿಷ್ಠಾವಂತರನ್ನು ಕಡೆಗಣಿಸಿದರೆ ಸಂಘಟನೆ ದುರ್ಬಲಗೊಳ್ಳುತ್ತದೆ; ಬದಲಿಗೆ ಅವರ ಅನುಭವ ಹಾಗೂ ಸಲಹೆಗಳಿಗೆ ಸೂಕ್ತ ಗೌರವ ನೀಡಿದರೆ ಪಕ್ಷ ಮತ್ತಷ್ಟು ಸಶಕ್ತ ಹಾಗೂ ಬಲಿಷ್ಠವಾಗುತ್ತದೆ ಎಂಬ ಸಂದೇಶ ಈ ನಡೆ ಮೂಲಕ ರವಾನೆಯಾಗಿದೆ.
ಸಂದಿಗ್ಧ ಸ್ಥಿತಿಯಲ್ಲಿಯೂ ಹಿರಿಯ ನಾಯಕರ ಅನುಭವವನ್ನು ಗೌರವಿಸಿ, ರಾಜಕೀಯ ಪರಿಪಕ್ವತೆ ಪ್ರದರ್ಶಿಸಿರುವ ನಾಯಕತ್ವದ ನಡೆಗೆ ಶ್ಲಾಘನೆ ವ್ಯಕ್ತವಾಗಿದ್ದು, ನೂತನವಾಗಿ ಕಾರ್ಯಾಂಗ ಮತ್ತು ಶಾಸಕಾಂಗ ಹೊಣೆ ಹೊತ್ತ ನಾಯಕರಿಗೆ ಹಾಗೂ ನೂತನ ವಿಧಾನಸಭಾ ಸಭಾಧ್ಯಕ್ಷರಿಗೆ ಶುಭಾಶಯಗಳು ಮತ್ತು ಅಭಿನಂದನೆಗಳನ್ನು ಸಲ್ಲಿಸಲಾಗಿದೆ.



