ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಬಯಲುಸೀಮೆಯ ಜೀವನಾಡಿಯಾಗಿರುವ ವಾಣಿ ವಿಲಾಸ ಸಾಗರಕ್ಕೆ ಗರಿಷ್ಠ ಮಟ್ಟದ ನೀರು ಹರಿಸುವುದು ಮತ್ತು ಭದ್ರಾ ಮೇಲ್ದಂಡೆ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸುವುದು ಈ ಭಾಗದ ಜನರ ಆಜನ್ಮ ಸಿದ್ಧ ಹಕ್ಕು. ನೀರಿನ ವಿಚಾರದಲ್ಲಿ ರಾಜಕಾರಣಿಗಳು ಜಿಲ್ಲೆಗಳ ನಡುವೆ ಜಗಳ ತಂದಿಡುವ ಕೆಲಸವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ವಿವಿಧ ರೈತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ಒಮ್ಮತದಿಂದ ಆಗ್ರಹಿಸಿವೆ.
ಇಂದು ನಡೆದ 'ಸಮಾನಮನಸ್ಕರ ಸಭೆ'ಯಲ್ಲಿ ಮಾತನಾಡಿದ ಮುಖಂಡರು, ನದಿ ನೀರು ರಾಷ್ಟ್ರೀಯ ಸಂಪತ್ತು ಹಾಗೂ ಸೃಷ್ಟಿಯ ಸಕಲ ಜೀವರಾಶಿಗಳಿಗೂ ಸಮಾನ ಹಕ್ಕಿದೆ. ನೀರು ಕೊಡುವುದಿಲ್ಲವೆಂದು ಹೇಳುವವರು ಸಂವಿಧಾನ ವಿರೋಧಿಗಳು. ಅಂಥವರ ವಿರುದ್ಧ ಶಾಂತಿಭಂಗ ಆರೋಪದಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಸಭೆಯ ಮುಖ್ಯ ಆಗ್ರಹಗಳು ಹಾಗೂ ನಿರ್ಣಯಗಳು:
ಭದ್ರಾ & ಎತ್ತಿನಹೊಳೆ ನೀರು: ಈ ಹಿಂದೆ ವೇದಾವತಿಯ ಉಪನದಿಯಾದ ಜಗಚಿ ನದಿ ನೀರು ಕೈತಪ್ಪಿದ್ದರಿಂದ ವಾಣಿ ವಿಲಾಸ ಸಾಗರ ಡೆಡ್ ಸ್ಟೋರೇಜ್ ಹಂತ ತಲುಪಿತ್ತು. ಹೀಗಾಗಿ ಹೆಚ್ಚುವರಿ ನೀರನ್ನು ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಯಿಂದ ಪೂರೈಸಬೇಕು.
ವ್ಯರ್ಥ ನೀರು ಕೆರೆಗಳಿಗೆ: ಸಮುದ್ರ ಸೇರುತ್ತಿರುವ ತುಂಗಾಭದ್ರಾ ಜಲಾಶಯದ ಹೆಚ್ಚುವರಿ ನೀರನ್ನು ಬಯಲುಸೀಮೆಯ ಕೆರೆಗಳಿಗೆ ತುಂಬಿಸುವ ಯೋಜನೆಯನ್ನು ತಕ್ಷಣ ಜಾರಿಗೆ ತರಬೇಕು.
ಹೊಸ ನದಿ ಜೋಡಣೆ ಯೋಜನೆ: ಡಾ. ಮಧುಸೀತಪ್ಪ ಅವರ ವರದಿ ಪ್ರಕಾರ ಶರಾವತಿ ಹಿನ್ನೀರು, ಅಗನಾಸಿನಿ ಮತ್ತು ಬೇಡ್ತಿ ನದಿಗಳ ನೀರನ್ನು ವಾಣಿ ವಿಲಾಸ ಸಾಗರಕ್ಕೆ ತರುವ ಹೊಸ ಯೋಜನೆಗಳನ್ನು ಪ್ರಾರಂಭಿಸಬೇಕು.
ದಾರಿತಪ್ಪಿಸುವ ಕೆಲಸ ಬಂದ್ ಆಗಲಿ: ಹಿರಿಯ ಮುತ್ಸದ್ದಿ ರಾಜಕಾರಣಿ ಜಯಚಂದ್ರ ಅವರು ಈ ಭಾಗದ ಅಭಿವೃದ್ಧಿಗೆ ಶ್ರಮಿಸುವುದನ್ನು ಬಿಟ್ಟು ಜನರನ್ನು ದಾರಿತಪ್ಪಿಸುವ ಹೇಳಿಕೆಗಳನ್ನು ನೀಡಬಾರದು ಎಂದು ಸಭೆ ಎಚ್ಚರಿಸಿದೆ.
ಈ ಸಮಾವೇಶದಲ್ಲಿ ವಿವಿಧ ರೈತ, ದಲಿತ, ಕಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ಪ್ರಗತಿಪರ ಚಿಂತಕರಾದ ಲಕ್ಷ್ಮಣ್ ಹೂಗಾರ್, ಈಚಗಟ್ಟ ಸಿದ್ದವೀರಪ್ಪ, ಕೆ.ಪಿ. ಶ್ರೀನಿವಾಸ್, ಎಸ್.ವಿ. ರಂಗನಾಥ್, ಮಂಜುನಾಥ್, ಪ್ರೊ. ಶಿವಣ್ಣ, ಪ್ರೊ. ಎಂ.ಜಿ. ರಂಗಸ್ವಾಮಿ, ಗೋವರ್ಧನ್ ಫಿಲಾಲಿ, ಅರ್ಜುನ್ ಬ್ಯಾಡ್ರಳ್ಳಿ, ಚಂದ್ರಗಿರಿ ದಿಂಡಾವರ, ಕೆ.ಜಿ. ಗೌಡ, ಪುಟ್ಟಸ್ವಾಮಿ, ಕಾಮ್ರೇಡ್ ಪ್ರಸನ್ನ, ಮಲ್ಲಪ್ಪನಳ್ಳಿ ಮಹಾಲಿಂಗಯ್ಯ, ಕೆ.ಕೆ. ಹಟ್ಟಿ ಜಯಪ್ರಕಾಶ್, ಜಗದೀಶ ಗಡಾರಿ, ಕೃಷ್ಣಪ್ಪ, ಕರಿಕೆರೆ ತಿಪ್ಪೇಸ್ವಾಮಿ, ವೆಂಕಟೇಶ್ ರೆಡ್ಡಿ, ಕೆ.ಸಿ. ವರಕ್ಕೇರಪ್ಪ, ನಿರಂಜನ್, ಪುಟ್ಟಸ್ವಾಮಿ, ನರೇನಹಳ್ಳಿ ಅರುಣ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.




