E-PAPER
15 Nov 2026, 05:54:55 AM|
Gold₹13605/gGold24K ₹13,605/g - 22K ₹12,460/gTap for full details
Press ID & Credential Portal
Apply / Verify  ➔
Advertisement
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಜನತಂತ್ರದ ಮುಖವಾಡ – ಜನಾಧಿಕಾರದ ಅಪಹರಣ

ಚಂದ್ರವಳ್ಳಿ ನ್ಯೂಸ್, ಮೈಸೂರು
ಜನರ ಮತದಿಂದ ಅಧಿಕಾರ ಪಡೆದವರು ಜನರ ಹಕ್ಕು, ಸ್ವಾತಂತ್ರ್ಯ ಮತ್ತು ಆಶಯಗಳಿಗೆ ಬದ್ಧರಾಗಿರಬೇಕು. ಜಾಗೃತ ಮತದಾರರು, ಉತ್ತರದಾಯಿ ಆಡಳಿತ ಮತ್ತು ಭಿನ್ನಾಭಿಪ್ರಾಯಕ್ಕೆ ಗೌರವ ದೊರೆತಾಗ ಮಾತ್ರ ಜನತಂತ್ರ ತನ್ನ ನಿಜವಾದ ಘನತೆಯನ್ನು ಉಳಿಸಿಕೊಳ್ಳುತ್ತದೆ.

ಮತದ ಮೌಲ್ಯವ ಮರೆಯದಿರಲಿ
ಜನರ ಧ್ವನಿಯ ಕುಗ್ಗಿಸದಿರಲಿ
ಅಧಿಕಾರ ಸೇವೆಗೆ ಬಳಕೆಯಾಗಲಿ
ಜನತಂತ್ರದ ಘನತೆ ಉಳಿಯಲಿ

ಪ್ರಜಾಪ್ರಭುತ್ವವೆಂಬುದು ಕೇವಲ ಮತಪೆಟ್ಟಿಗೆಯಲ್ಲಿ ದಾಖಲಾ ಗುವ ಮತಗಳ ಸಂಖ್ಯೆಯಲ್ಲ. ಅದು ಜನರ ಆಶಯ, ಸ್ವಾತಂತ್ರ್ಯ, ಸಮಾನ ಹಕ್ಕು, ಅಭಿವ್ಯಕ್ತಿ ಮತ್ತು ಆಡಳಿತದಲ್ಲಿ ಪಾಲ್ಗೊಳ್ಳುವ ಅವಕಾಶಗಳ ಸಮಗ್ರ ಪರಿಕಲ್ಪನೆ. ಪ್ರಜೆಗಳೇ ಪ್ರಭುಗಳು, ಜನರ ಹಿತವೇ ಆಡಳಿತದ ಗುರಿ, ಸಂವಿಧಾನವೇ ಅಧಿಕಾರದ ಮಿತಿ ಎಂಬ ತತ್ವಗಳ ಮೇಲೆ ಜನತಂತ್ರದ ಕಟ್ಟಡ ನಿರ್ಮಾಣವಾಗಿದೆ. ಆದರೆ ಜನರ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಜನರನ್ನೇ ಕಡೆಗಣಿಸುವ ಪ್ರವೃತ್ತಿ ಬೆಳೆದಾಗ ಪ್ರಜಾಪ್ರಭುತ್ವದ ಹೊರಮೈ ಉಳಿದರೂ ಅದರ ಆತ್ಮಕ್ಕೆ ಧಕ್ಕೆಯಾಗುತ್ತದೆ. ಜನರ ಮತದಿಂದ ಅಧಿಕಾರ ಪಡೆದವರು ಜನರ ಧ್ವನಿಯನ್ನೇ ನಿರ್ಲಕ್ಷಿಸಿದರೆ ಅದು ಆಡಳಿತದ ವೈಫಲ್ಯ ಮಾತ್ರವಲ್ಲ, ಜನಾಧಿಕಾರದ ಆಶಯಕ್ಕೆ ಮಾಡುವ ಅಪಚಾರವೂ ಹೌದು.

ಚುನಾವಣೆಯ ಸಂದರ್ಭದಲ್ಲಿ ಜನರ ಮನೆಬಾಗಿಲಿಗೆ ಬರುವ ರಾಜಕೀಯ ನಾಯಕರು ಭರವಸೆಗಳ ಸುರಿಮಳೆಗೈಯುತ್ತಾರೆ. ಅಭಿವೃದ್ಧಿ, ಉದ್ಯೋಗ, ಶಿಕ್ಷಣ, ಆರೋಗ್ಯ, ರಸ್ತೆ, ಕುಡಿಯುವ ನೀರು ಮತ್ತು ರೈತರ ಕಲ್ಯಾಣದ ಮಾತುಗಳು ಮೊಳಗುತ್ತವೆ. ಮತದಾರರ ಮುಂದೆ ವಿನಯದಿಂದ ಕೈಮುಗಿಯುವವರು ಅಧಿಕಾರ ದೊರೆತ ನಂತರ ಜನರ ಭೇಟಿಗೂ ಸಮಯ ನೀಡದಿರುವುದು ವಿಷಾದನೀಯ. ಚುನಾವಣೆ ಮುಗಿದ ಮೇಲೆ ಪ್ರಜೆಗಳ ಸಮಸ್ಯೆಗಳು ಕಡತಗಳೊಳಗೆ ಬಂಧಿಯಾಗು ತ್ತವೆ. ಜನರ ಸೇವೆಯ ಪ್ರತಿಜ್ಞೆ ಅಧಿಕಾರದ ಸವಿಯ ಮುಂದೆ ಮಂಕಾಗುತ್ತದೆ. ಐದು ವರ್ಷಕ್ಕೊಮ್ಮೆ ಜನರನ್ನು ನೆನಪಿಸಿ ಕೊಳ್ಳುವ ಆಡಳಿತವು ಜನತಂತ್ರದ ನಿಜವಾದ ಆಶಯವನ್ನು ಹೇಗೆ ಉಳಿಸಬಲ್ಲದು?.

ಭಾರತೀಯ ಸಂವಿಧಾನದ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರು ರಾಜಕೀಯ ಪ್ರಜಾಪ್ರಭುತ್ವದ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವವೂ ಅಗತ್ಯವೆಂದು ಪ್ರತಿಪಾದಿಸಿದರು. ಮತದಾನದ ಹಕ್ಕು ದೊರೆತ ಮಾತ್ರಕ್ಕೆ ಸಮಾಜದಲ್ಲಿ ಸಮಾನತೆ ನೆಲೆಸುವುದಿಲ್ಲ. ಪ್ರತಿಯೊಬ್ಬರಿಗೂ ಗೌರವಯುತ ಬದುಕು, ಅವಕಾಶ ಮತ್ತು ನ್ಯಾಯ ದೊರೆಯಬೇಕು. ರಾಜಕೀಯ ಸಮಾನತೆಯೊಂದಿಗೆ ಸಾಮಾಜಿಕ ಅಸಮಾನತೆ ಮುಂದುವರಿದರೆ ಪ್ರಜಾಪ್ರಭುತ್ವದ ನೆಲೆ ದುರ್ಬಲವಾಗುತ್ತದೆ ಎಂಬ ಅವರ ಚಿಂತನೆಯ ಸಾರ ಇಂದಿಗೂ ಪ್ರಸ್ತುತವಾಗಿದೆ. ಮತದಾನದ ಹಕ್ಕು ಹೊಂದಿರುವ ಬಡವನಿಗೆ ಬದುಕಿನ ಮೂಲ ಸೌಲಭ್ಯಗಳೇ ದೊರೆಯದಿದ್ದರೆ ಆತನ ರಾಜಕೀಯ ಸ್ವಾತಂತ್ರ್ಯ ಎಷ್ಟು ಪರಿಣಾಮಕಾರಿಯಾಗಿರುತ್ತದೆ ಎಂಬುದನ್ನು ಆಡಳಿತ ಯೋಚಿಸಬೇಕು.

ಜನತಂತ್ರದ ಮತ್ತೊಂದು ದೊಡ್ಡ ಸವಾಲು ರಾಜಕೀಯ ಸ್ವಾರ್ಥ. ಸಾರ್ವಜನಿಕ ಹಿತಕ್ಕಿಂತ ಪಕ್ಷದ ಹಿತ, ಜನರ ಸಮಸ್ಯೆಗಿಂತ ಅಧಿಕಾರದ ಉಳಿವು, ಅಭಿವೃದ್ಧಿಗಿಂತ ಪ್ರಚಾರಕ್ಕೆ ಆದ್ಯತೆ ನೀಡುವ ಪ್ರವೃತ್ತಿ ಆಡಳಿತದ ವಿಶ್ವಾಸಾರ್ಹತೆಯನ್ನು ಕುಗ್ಗಿಸುತ್ತದೆ. ಚುನಾವಣೆಯಲ್ಲಿ ನೀಡಿದ ಭರವಸೆಗಳ ಅನುಷ್ಠಾನಕ್ಕೆ ಸ್ಪಷ್ಟ ಹೊಣೆಗಾರಿಕೆ ಇಲ್ಲದಿದ್ದರೆ ಜನರು ಯಾರನ್ನು ಪ್ರಶ್ನಿಸಬೇಕು? ಸಾರ್ವಜನಿಕ ಹಣದ ಬಳಕೆಯಲ್ಲಿ ಪಾರದರ್ಶಕತೆ ಇಲ್ಲದಿದ್ದರೆ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ವೆಚ್ಚವನ್ನು ಹೇಗೆ ಪರಿಶೀಲಿಸಬೇಕು? ಜನರ ತೆರಿಗೆಯಿಂದ ರೂಪುಗೊಳ್ಳುವ ಯೋಜನೆಗಳು ಜನರ ಬದುಕಿಗೆ ಪ್ರಯೋಜನವಾಗದಿದ್ದರೆ ಅವುಗಳ ಉದ್ದೇಶವೇ ಪ್ರಶ್ನಾರ್ಹವಾಗುತ್ತದೆ.

news_orig_1794629277.webp

 

ಬ್ರಿಟಿಷ್ ತತ್ತ್ವಜ್ಞಾನಿ ಜಾನ್ ಸ್ಟುವರ್ಟ್ ಮಿಲ್ ಅವರು ವ್ಯಕ್ತಿಯ ಸ್ವಾತಂತ್ರ್ಯ, ಅಭಿವ್ಯಕ್ತಿ ಮತ್ತು ಭಿನ್ನಾಭಿಪ್ರಾಯದ ಮಹತ್ವವನ್ನು ತಮ್ಮ ಚಿಂತನೆಗಳಲ್ಲಿ ವಿಶ್ಲೇಷಿಸಿದ್ದಾರೆ. ಬಹುಮತದ ಅಭಿಪ್ರಾಯವೇ ಎಲ್ಲ ಸಂದರ್ಭಗಳಲ್ಲಿಯೂ ಅಂತಿಮ ಸತ್ಯವಾಗುವುದಿಲ್ಲ. ಅಲ್ಪಸಂಖ್ಯಾತರ ಧ್ವನಿಗೂ ಗೌರವ ಮತ್ತು ಅಭಿವ್ಯಕ್ತಿಗೆ ಅವಕಾಶ ಇರಬೇಕು. ಜನತಂತ್ರದಲ್ಲಿ ವಿರೋಧ ಪಕ್ಷ, ಸ್ವತಂತ್ರ ಮಾಧ್ಯಮ, ನಾಗರಿಕ ಸಂಘಟನೆಗಳು ಮತ್ತು ಪ್ರಶ್ನಿಸುವ ಜನರು ಅತ್ಯಗತ್ಯ. ಆಡಳಿತವನ್ನು ಪ್ರಶ್ನಿಸುವುದನ್ನು ದ್ರೋಹವೆಂದು ಬಿಂಬಿಸುವ ಮನೋಭಾವ ಬೆಳೆದರೆ ಜನತಂತ್ರದ ಉಸಿರಾಟವೇ ಕುಂಠಿತವಾಗುತ್ತದೆ. ಟೀಕೆ ಆಡಳಿತವನ್ನು ದುರ್ಬಲಗೊಳಿ ಸುವುದಿಲ್ಲ, ತಪ್ಪುಗಳನ್ನು ತಿದ್ದಿಕೊಳ್ಳಲು ನೆರವಾಗುತ್ತದೆ.

ರಾಜಕೀಯದಲ್ಲಿ ಹಣಬಲ ಮತ್ತು ಪ್ರಭಾವದ ಬಳಕೆ ಮತದಾನದ ಪಾವಿತ್ರ್ಯವನ್ನು ಹಾಳುಮಾಡುತ್ತದೆ. ಹಣ, ಉಡುಗೊರೆ, ಸುಳ್ಳು ಭರವಸೆ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ಪ್ರಯತ್ನಗಳು ಮತದಾರರ ಸ್ವತಂತ್ರ ನಿರ್ಧಾರಕ್ಕೆ ಅಡ್ಡಿಯಾಗುತ್ತವೆ. ಮತವು ಮಾರಾಟದ ವಸ್ತುವಲ್ಲ, ಅದು ಪ್ರಜೆಯ ಭವಿಷ್ಯ ನಿರ್ಧರಿಸುವ ಅಮೂಲ್ಯ ಹಕ್ಕು. ಕ್ಷಣಿಕ ಆಮಿಷಕ್ಕೆ ಮತ ನೀಡಿದರೆ ಅದರ ಪರಿಣಾಮ ದೀರ್ಘಕಾಲದವರೆಗೆ ಸಮಾಜವೇ ಅನುಭವಿಸಬೇಕಾಗುತ್ತದೆ. ಅಭ್ಯರ್ಥಿಯ ಮಾತಿಗಿಂತ ಅವರ ಹಿಂದಿನ ಕೆಲಸ, ಸಾರ್ವಜನಿಕ ನಡವಳಿಕೆ, ಪ್ರಾಮಾಣಿಕತೆ ಮತ್ತು ಜನಪರ ನಿಲುವುಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದು ಮತದಾರನ ವಿವೇಕ.

ಅಮೆರಿಕದ ತತ್ತ್ವಜ್ಞಾನಿ ಜಾನ್ ಡ್ಯೂಯಿ ಅವರು ಪ್ರಜಾಪ್ರಭುತ್ವವನ್ನು ಕೇವಲ ಆಡಳಿತ ಪದ್ಧತಿಯಾಗಿ ನೋಡದೆ, ಸಾಮೂಹಿಕ ಬದುಕಿನ ಒಂದು ವಿಧಾನವೆಂದು ಪರಿಗಣಿಸಿದರು. ಜನರು ಪರಸ್ಪರ ಸಂವಾದ ನಡೆಸುವುದು, ಸಮಸ್ಯೆಗಳನ್ನು ಒಟ್ಟಾಗಿ ಪರಿಹರಿಸುವುದು ಮತ್ತು ಸಾರ್ವಜನಿಕ ನಿರ್ಧಾರಗಳಲ್ಲಿ ಪಾಲ್ಗೊಳ್ಳುವುದು ಜನತಂತ್ರದ ಜೀವಾಳ ಎಂಬುದು ಅವರ ಚಿಂತನೆಯ ಸಾರ. ಈ ದೃಷ್ಟಿಯಿಂದ ಗ್ರಾಮಸಭೆ, ನಗರಸಭೆ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳು ಜನರ ನೇರ ಪಾಲ್ಗೊಳ್ಳುವಿಕೆಗೆ ಪರಿಣಾಮಕಾರಿ ವೇದಿಕೆಗಳಾಗಬೇಕು. ಜನರ ಅಗತ್ಯಗಳನ್ನು ತಿಳಿಯದೆ ರೂಪಿಸುವ ಯೋಜನೆಗಳು ಜನಪರ ಆಡಳಿತವಾಗಲಾರವು.

ಹಿರಿಯ ಸಾಹಿತಿ ಕಾಶಿಗೌರವರ ಮಾತೊಂದು ನೆನಪಿಗೆ ಬರುತ್ತದೆ ಮತದಾನದ ಮೂಲಕ ಅಧಿಕಾರ ನೀಡುವ ಪ್ರಜೆಗಳಿಗೆ ಆಡಳಿತವನ್ನು ಪ್ರಶ್ನಿಸುವ ಹಕ್ಕು ಸದಾ ಇರಬೇಕು. ಜನರ ನಂಬಿಕೆಯನ್ನು ಉಳಿಸುವ ಆಡಳಿತವೇ ಜನತಂತ್ರದ ನಿಜವಾದ ಗೆಲುವು ಎಂಬುವ ಆಶಯವಾಗಿದೆ.

ಆಡಳಿತದ ವೈಫಲ್ಯವನ್ನು ಸರಿಪಡಿಸುವ ಹೊಣೆಗಾರಿಕೆ ಜನಪ್ರತಿನಿಧಿಗಳಿಗಷ್ಟೇ ಸೀಮಿತವಲ್ಲ. ಪ್ರಜೆಗಳಿಗೂ ಮಹತ್ವದ ಜವಾಬ್ದಾರಿ ಇದೆ. ಮತದಾನದ ದಿನ ಮಾತ್ರ ಜಾಗೃತರಾಗದೆ, ಆಡಳಿತದ ಪ್ರತಿಯೊಂದು ಹಂತದಲ್ಲಿಯೂ ಸಾರ್ವಜನಿಕ ವಿಚಾರಗಳಲ್ಲಿ ಆಸಕ್ತಿ ತೋರಬೇಕು. ತಪ್ಪು ಕಂಡಾಗ ಕಾನೂನುಬದ್ಧವಾಗಿ ಪ್ರಶ್ನಿಸಬೇಕು. ಸಾರ್ವಜನಿಕ ಆಸ್ತಿಯನ್ನು ಕಾಪಾಡಬೇಕು. ಸುಳ್ಳು ಸುದ್ದಿಗಳಿಗೆ ಮರುಳಾಗದೆ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಜಾತಿ, ಧರ್ಮ ಮತ್ತು ವೈಯಕ್ತಿಕ ದ್ವೇಷಕ್ಕಿಂತ ಸಾರ್ವಜನಿಕ ಹಿತಕ್ಕೆ ಆದ್ಯತೆ ನೀಡಬೇಕು.

ಜನತಂತ್ರದ ನಿಜವಾದ ಶಕ್ತಿ ಆಡಳಿತದ ಭವ್ಯ ಕಟ್ಟಡಗಳಲ್ಲಿ ಇಲ್ಲ, ಜಾಗೃತ ಪ್ರಜೆಗಳ ವಿವೇಕದಲ್ಲಿ ಅಡಗಿದೆ. ಅಧಿಕಾರವು ಜನರ ಅನುಮತಿಯೊಂದಿಗೆ ದೊರೆಯುತ್ತದೆ, ಆದರೆ ಅದರ ಪ್ರತಿಯೊಂದು ಕಾರ್ಯವೂ ಜನರ ಹಿತಕ್ಕೆ ಉತ್ತರದಾಯಿಯಾ ಗಿರಬೇಕು. ಜನರ ಮತವನ್ನು ಮೆಟ್ಟಿಲಾಗಿಸಿಕೊಂಡು ಜನರ ಹಕ್ಕುಗಳನ್ನೇ ಕಸಿಯುವ ವ್ಯವಸ್ಥೆಗೆ ಜನತಂತ್ರದ ಮುಖವಾಡವಷ್ಟೇ ಉಳಿಯುತ್ತದೆ. ಜನರ ಧ್ವನಿಗೆ ಮನ್ನಣೆ, ಭಿನ್ನಾಭಿಪ್ರಾಯಕ್ಕೆ ಗೌರವ, ಸಾರ್ವಜನಿಕ ಸಂಪತ್ತಿಗೆ ರಕ್ಷಣೆ ಮತ್ತು ಆಡಳಿತಕ್ಕೆ ಉತ್ತರದಾಯಿತ್ವ ದೊರೆತಾಗ ಮಾತ್ರ ಜನಾಧಿಕಾರದ ನಿಜವಾದ ಅರ್ಥ ಸಾಕಾರಗೊಳ್ಳುತ್ತದೆ.
ಲೇಖನ: ಕಾಶಿಗೌ, ಲೇಖಕರು ಹಾಗೂ ಸಾಹಿತಿ, ಮೈಸೂರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಂದೆಯವರ ಕಂಚಿನ ಪುತ್ಥಳಿ ಅನಾವರಣಗೊಳಿಸುವುದು ನನ್ನ ಜೀವನದ ಅವಿಸ್ಮರಣೀಯ ಕ್ಷಣ: ಹೆಚ್.ಡಿ. ಕುಮಾರಸ್ವಾಮಿನದಿಗಳ ಜೋಡಣೆ: ವಿವಾದಗಳು ಮತ್ತು ಪರಿಹಾರಗಳು ವಿಷಯದ ಕುರಿತು ವಿಶೇಷ ಉಪನ್ಯಾಸಹಿರಿಯೂರು ಉಪಚುನಾವಣೆಗೆ ಎನ್‌ಡಿಎ ಒಮ್ಮತದ ಅಭ್ಯರ್ಥಿ; ಹೆಚ್.ಡಿ. ಕುಮಾರಸ್ವಾಮಿತಾಂತ್ರಿಕ ದೋಷ: ಕೆಟ್ಟು ನಿಂತಿದ್ದ ಪ್ರಧಾನಿ ಬೆಂಗಾವಲು ಹೆಲಿಕಾಪ್ಟರ್ ವಾಪಸ್  ಸಂಪ್ರದಾಯದ ಹೆಸರಿನಲ್ಲಿ ದೇಗುಲದ ಆನೆಗಳಿಗೆ ಬಂಧನದ ಶಿಕ್ಷೆ?ಮೇಕೆದಾಟು ಯೋಜನೆ: ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಮಿಳುನಾಡು ಕಾಂಗ್ರೆಸ್ ಆಕ್ಷೇಪನಿಖಿಲ್ ಕುಮಾರಸ್ವಾಮಿಗೆ ದೇಗುಲ ಪ್ರವೇಶ ನಿರಾಕರಣೆ ಆರೋಪ: ಕಾಂಗ್ರೆಸ್ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿಮನೆ ಮುಂದೆ ಪೋಸ್ಟರ್ ಅಂಟಿಸುವುದು ಕೀಳುಮಟ್ಟದ ರಾಜಕಾರಣ: ಸಿಎಂ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ15,000 ರೂ. ವೇತನ ಪಡೆಯುವ ಯುವಕನ ಹೆಸರಿನಲ್ಲಿ 350 ಕೋಟಿ ರೂ. ಜಿಎಸ್‌ಟಿ ವಂಚನೆ!ಒಂದೆರಡು ದಿನಗಳಲ್ಲಿ ನಿಗಮ-ಮಂಡಳಿ ನೇಮಕಾತಿಯ ಎರಡನೇ ಪಟ್ಟಿ ಬಿಡುಗಡೆ: ಸಿಎಂ ಡಿ.ಕೆ ಶಿವಕುಮಾರ್