ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಹೆಗಡೆ ಹಾಗೂ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಚ್.ಎಂ.ಅಪ್ಪಾಜಿಗೌಡ ಇವರುಗಳ ಅಕಾಲಿಕ ನಿಧನಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ ತಾಜ್‌ಪೀರ್ ಮೃತರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತ ಯೂತ್ ಕಾಂಗ್ರೆಸ್ ಮೂಲಕ ಪಕ್ಷಕ್ಕೆ ಸೇವೆ ಸಲ್ಲಿಸಿದ ಸೂರಜ್‌ಹೆಗಡೆ ಪಕ್ಷದ ತತ್ವ ಸಿದ್ದಾಂತ ಮೆಚ್ಚಿ ಕಾಂಗ್ರೆಸ್ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮಾಜಿ ಮುಖ್ಯ ಮಂತ್ರಿ ದಿವಂಗತ ಡಿ.ದೇವರಾಜ ಅರಸುರವರ ಮೊಮ್ಮಗ ಅಂತ ಎಲ್ಲಿಯೂ ಹೇಳಿಕೊಳ್ಳಲಿಲ್ಲ. ತಮಿಳುನಾಡು ಮತ್ತು ಪಾಂಡಿಚೇರಿ ಚುನಾವಣೆಗಳಲ್ಲಿ ಉಸ್ತುವಾರಿಯಾಗಿದ್ದರೆಂದು ಸ್ಮರಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ ಮಾತನಾಡಿ ಎರಡು ಮೂರು ರಾಜ್ಯಗಳ ಉಸ್ತುವಾರಿಯಾಗಿದ್ದ ಸೂರಜ್ ಹೆಗಡೆರವರು ಪಕ್ಷಕ್ಕೆ ನಿಷ್ಟಾವಂತರಾಗಿದ್ದರು. ಅದೇ ರೀತಿ ಅಪ್ಪಾಜಿಗೌಡ ಯೂತ್ ಕಾಂಗ್ರೆಸ್‌ನಲ್ಲಿ ಸೇವೆ ಸಲ್ಲಿಸುವ ಮೂಲಕ ಗುರುತಿಸಿಕೊಂಡಿದ್ದರು. ಇವರಿಬ್ಬರ ನಿಧನ ಪಕ್ಷಕ್ಕೆ ನಷ್ಟವುಂಟಾಗಿದೆ. ದುಃಖತಪ್ತ ಕುಟುಂಬಕ್ಕೆ ಭಗವಂತ ಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು.
ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಡಿ.ಕುಮಾರ್ ಮಾತನಾಡಿ ಪವರ್ ಲಿಫ್ಟರ್ ಕೂಡ ಆಗಿದ್ದ ಸೂರಜ್‌ಹೆಗಡೆ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ಅಪ್ಪಾಜಿಗೌಡ ಇವರ ನಿಧನ ಎಲ್ಲರಿಗೂ ನೋವುಂಟು ಮಾಡಿದೆಯಲ್ಲದೆ ಪಕ್ಷಕ್ಕೆ ನಷ್ಟವಾಗಿದೆ. ಇಬ್ಬರ ಆತ್ಮಕ್ಕೂ ಭಗವಂತ ಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಪಂಚ ಗ್ಯಾರೆಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಆರ್.ಶಿವಣ್ಣ ಮಾತನಾಡುತ್ತ ಪಕ್ಷದಲ್ಲಿ ಒಳ್ಳೆ ಹೆಸರು ಗಳಿಸಿದ್ದ ಸೂರಜ್ ಹೆಗಡೆ ಹಾಗೂ ಅಪ್ಪಾಜಿಗೌಡ ಇವರುಗಳು ಇಷ್ಟು ಬೇಗನೆ ಎಲ್ಲರನ್ನು ಅಗಲುತ್ತಾರೆಂದುಕೊಂಡಿರಲಿಲ್ಲ. ಪಕ್ಷ ನಿಷ್ಠಾವಂತರನ್ನು ಕಳೆದುಕೊಂಡಿರುವುದು ಎಲ್ಲರಿಗೂ ನೋವು ತಂದಿದೆ ಎಂದು ಕಂಬನಿ ಮಿಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಲೋಕೇಶ್‌ನಾಯ್ಕ ಇವರುಗಳು ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್, ಹೆಚ್.ಅಂಜಿನಪ್ಪ, ಪರ್ವಿನ್, ಭಾಗ್ಯಮ್ಮ, ಸೇವಾದಳದ ಜಿಲ್ಲಾಧ್ಯಕ್ಷೆ ನೇತ್ರಾವತಿ, ನ್ಯಾಯವಾದಿ ಮಹಮದ್ ರಫಿ, ಮುದಸಿರ್‌ನವಾಜ್, ಸುರೇಶ್ ಈಚಲನಾಗೇನಹಳ್ಳಿ, ವಸೀಂ ಇನ್ನು ಮುಂತಾದವರು ಶ್ರದ್ದಾಂಜಲಿ ಸಭೆಯಲ್ಲಿ ಉಪಸ್ಥಿತರಿದ್ದರು.



