ಚಂದ್ರವಳ್ಳಿ ನ್ಯೂಸ್,ಆನೇಕಲ್ (ಬೆಂಗಳೂರು):
ಆನೇಕಲ್ ತಾಲೂಕಿನ ಬೊಮ್ಮಸಂದ್ರದಲ್ಲಿರುವ ಖಾಸಗಿ ಪಿಜಿಯೊಂದರಲ್ಲಿ ಗುರುವಾರ ಬೆಳಿಗ್ಗೆ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು 10 ಮಂದಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ನಡೆದಿದೆ.
ಸ್ಥಳೀಯ 'ಶ್ರೀ ಸಾಯಿ ಕಂಫರ್ಟ್' ಎಂಬ ಪಿಜಿಯ ಎರಡನೇ ಮಹಡಿಯಲ್ಲಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಸೌರವ್ ಚೌದರಿ, ಅಲಾವುದೀನ್, ಶಾಂತನುರಾಯ್, ಅಭಿಬುಲ್ ರೆಹ್ಮಾನ್, ಸುಬ್ರತಾ ಬೇರಾ ಹಾಗೂ ದೇಬಶಿಶ್ ಹಲ್ದರ್ ಸೇರಿದಂತೆ ಒಟ್ಟು 10 ಜನರು ಸುಟ್ಟ ಗಾಯಗಳಿಂದ ತೀವ್ರವಾಗಿ ನರಳಾಡುತ್ತಿದ್ದು, ಅವರನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಾಳುಗಳೆಲ್ಲರೂ ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಸ್ಥಳೀಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಲೈಟ್ ಆನ್ ಮಾಡುತ್ತಿದ್ದಂತೆಯೇ ಸ್ಫೋಟ:
ರಾತ್ರಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿತ್ತು ಎನ್ನಲಾಗಿದೆ. ಬೆಳಿಗ್ಗೆ ಕೊಠಡಿಯಲ್ಲಿದ್ದವರು ಎದ್ದು ವಿದ್ಯುತ್ ದೀಪದ (ಲೈಟ್) ಸ್ವಿಚ್ ಆನ್ ಮಾಡುತ್ತಿದ್ದಂತೆಯೇ ಒಮ್ಮೆಲೇ ಭಾರಿ ಶಬ್ದದೊಂದಿಗೆ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಕೊಠಡಿಯಲ್ಲಿದ್ದ ಪೀಠೋಪಕರಣಗಳು, ಬಾಗಿಲು ಹಾಗೂ ಕಿಟಕಿಗಳು ಚೂರುಚೂರಾಗಿ ಬಿದ್ದಿದ್ದು, ಇಡೀ ಮಹಡಿಯಲ್ಲಿ ಬೆಂಕಿ ಆವರಿಸಿಕೊಂಡಿತ್ತು.
ಲಿಂಗರಾಜು ಎಂಬುವರಿಗೆ ಸೇರಿದ ಈ ಕಟ್ಟಡದಲ್ಲಿ ಒಟ್ಟು 18 ಕೊಠಡಿಗಳಿದ್ದು, ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಉಳಿದ ನಿವಾಸಿಗಳು ಭಯದಿಂದ ಹೊರಗೆ ಓಡಿಬಂದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.



