ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ದರ್ಶನ್ ಅವರ ಆಪ್ತ ಸ್ನೇಹಿತ, ನಟ ಧನ್ವೀರ್ ಗೌಡ ನಡುವಿನ ವೈಷಮ್ಯ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು, ಈಗ ಕಾನೂನು ಮತ್ತು ಸಾಮಾಜಿಕ ಮಾಧ್ಯಮಗಳ ಅಖಾಡಕ್ಕೆ ತಿರುಗಿದೆ.
ವಿಜಯಲಕ್ಷ್ಮಿ ಅವರಿಗೆ ದೂರವಾಣಿ ಮೂಲಕ ಕಿರುಕುಳ ಹಾಗೂ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇಲೆ ನಟ ಧನ್ವೀರ್ ವಿರುದ್ಧ ಬೆಂಗಳೂರಿನ ಮೂರು ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಕಾನೂನು ನಡಾವಳಿಗಳ ಬೆನ್ನಲ್ಲೇ, ನಟ ಧನ್ವೀರ್ ಅವರು ಸಾಮಾಜಿಕ ಜಾಲತಾಣದಲ್ಲಿ ದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ವಿಜಯಲಕ್ಷ್ಮಿ ಅವರಿಗೆ ಪ್ರತ್ಯುತ್ತರ ನೀಡಿದ್ದಾರೆ.
'ನನ್ನ ಹೃದಯದಿಂದ ದರ್ಶನ್ ಸರ್ ಅವರನ್ನು ದೂರವಿಡಲು ಸಾಧ್ಯವಿಲ್ಲ':
ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಧನ್ವೀರ್, "ದರ್ಶನ್ ಸರ್ ಅಕೌಂಟ್‌ನಿಂದ ನನ್ನನ್ನು ಬ್ಲಾಕ್ ಮಾಡಬಹುದು, ನಾನೇ ಅನ್‌ಫಾಲೋ ಮಾಡಿದೆ ಎಂದು ಬಿಂಬಿಸಬಹುದು. ಜನರ ಮುಂದೆ ನನ್ನನ್ನು ಕೆಟ್ಟವನಾಗಿ ತೋರಿಸಲು ಎಷ್ಟೇ ನೆಗೆಟಿವ್ ಪಿಆರ್ ಮಾಡಿದರೂ, ನನ್ನ ಹೃದಯದ ಬಾಗಿಲಲ್ಲಿ ದರ್ಶನ್ ಸರ್ ಅವರಿಗಿರುವ ಸ್ಥಾನಕ್ಕೆ ಬೀಗ ಹಾಕುವ ಶಕ್ತಿ ಯಾರಿಗೂ ಇಲ್ಲ," ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಅಲ್ಲದೆ, "ನನ್ನ ಅಭಿಮಾನ ನಿಮ್ಮ ವಿರೋಧದಿಂದ ಹುಟ್ಟಿದ್ದಲ್ಲ, ನಿಮ್ಮ ವಿರೋಧದಿಂದ ಸಾಯುವುದೂ ಇಲ್ಲ. ಜಗತ್ತು ಏನೇ ಹೇಳಲಿ, ಕಾಲವೇ ಬದಲಾಗಲಿ ನನ್ನ ನಿಲುವು ಒಂದೇ. ನನ್ನ ಅಭಿಮಾನ ಒಂದೇ... ದರ್ಶನ್ ಸರ್! ದೆನ್, ನೌ, ಫಾರೆವರ್" ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಆಡಿಯೋ ಬಾಂಬ್ ಸಿಡಿಸುವ ಎಚ್ಚರಿಕೆ!:
ಇತ್ತೀಚೆಗಷ್ಟೇ ಈ ವಿವಾದದ ಕುರಿತು ಮಾತನಾಡಿದ್ದ ಧನ್ವೀರ್, ತಮ್ಮ ಬಳಿಯೂ ಸೂಕ್ತ ಆಡಿಯೋ ಆಧಾರಗಳಿದ್ದು, ಶೀಘ್ರದಲ್ಲೇ ಅವುಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಇದೀಗ ಈ ಪೋಸ್ಟ್ ಮೂಲಕ ವಿಜಯಲಕ್ಷ್ಮಿ ವಿರುದ್ಧ ನೇರ ತಿರುಗೇಟು ನೀಡಿದ್ದು, ದರ್ಶನ್ ಕುಟುಂಬ ಹಾಗೂ ಅವರ ಆಪ್ತ ವಲಯದ ನಡುವಿನ ಬಿರುಕು ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.



