ಚಂದ್ರವಳ್ಳಿ ನ್ಯೂಸ್, ತುಮಕೂರು:
ಇಲ್ಲಿನ ದಿಬ್ಬೂರು ಬಳಿ ಇರುವ ವಿದೇಶಿ ವಲಸಿಗರ ಬಂಧನ ಕೇಂದ್ರದಿಂದ (ಡಿಟೆನ್ಷನ್ ಸೆಂಟರ್) ನೈಜೀರಿಯಾ ಮೂಲದ ಅಡೆವೋಲೆ ಅಡೆತು ಅನು (33) ಎಂಬ ಮಹಿಳೆ ಕಿಟಕಿಯ ಕಬ್ಬಿಣದ ಸರಳುಗಳನ್ನು ಕತ್ತರಿಸಿ ಪರಾರಿಯಾಗಿದ್ದಾಳೆ. ಅಕ್ಟೋಬರ್ 20ರಂದು ನಡೆದಿರುವ ಈ ಘಟನೆ ಕೇಂದ್ರದ ಭದ್ರತಾ ವ್ಯವಸ್ಥೆಯ ದುಸ್ಥಿತಿಯನ್ನು ಎತ್ತಿಹಿಡಿದಿದೆ.
ವೀಸಾ ಅವಧಿ ಮುಗಿದು ಅಕ್ರಮವಾಗಿ ವಾಸಿಸುತ್ತಿರುವ ಹಾಗೂ ಅಪರಾಧ ಪ್ರಕರಣ ಎದುರಿಸುತ್ತಿರುವ ವಿದೇಶಿಯರನ್ನು ಈ ಕೇಂದ್ರದಲ್ಲಿ ಇರಿಸಲಾಗುತ್ತದೆ. ಆದರೆ, ಸೂಕ್ತ ಎತ್ತರದ ಸುತ್ತುಗೋಡೆ ಇಲ್ಲದಿರುವುದು ಮತ್ತು ಸಿಸಿಟಿವಿ ಕ್ಯಾಮೆರಾಗಳ ಕೊರತೆಯು ಇಂತಹ ಘಟನೆಗಳಿಗೆ ದಾರಿಮಾಡಿಕೊಡುತ್ತಿದೆ. ಇದಲ್ಲದೆ, ಇಲ್ಲಿ ನಿಯೋಜನೆಗೊಂಡಿರುವ ಭದ್ರತಾ ಸಿಬ್ಬಂದಿಗೆ ಸೂಕ್ತ ವಸತಿ ಹಾಗೂ ವಿಶ್ರಾಂತಿ ಕೊಠಡಿಯೂ ಇಲ್ಲದೆ, ಮಳೆಯಾದಾಗ ಆವರಣದ ಮೂಲೆಯೊಂದರಲ್ಲಿ ಆಶ್ರಯ ಪಡೆಯಬೇಕಾದ ದುಸ್ಥಿತಿ ಇದೆ.
ಬಂಧನ ಕೇಂದ್ರ ಕಾರ್ಯಾಚರಿಸುತ್ತಿರುವ ಬಾಡಿಗೆ ಕಟ್ಟಡವು ಸುರಕ್ಷಿತವಾಗಿಲ್ಲ ಹಾಗೂ ಸೂಕ್ತವಾಗಿಲ್ಲ ಎಂದು ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ತಿಳಿಸಿದ್ದಾರೆ. ಸದ್ಯ ಪರಾರಿಯಾಗಿರುವ ಮಹಿಳೆಯ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.



