ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಜರಾ ಹೊಸಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವೀರಾಪುರ ಗ್ರಾಮದ ಹೊರವಲಯದಲ್ಲಿ ಹೊಂಗೆ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪಶ್ಚಿಮ ಬಂಗಾಳ ಮೂಲದ ಬರ್ಲಾ ಮುಂಡಾ (41) ಮೃತ ವ್ಯಕ್ತಿ. ಖಾಸಗಿ ಹೋಟೆಲ್‌ನಲ್ಲಿ ಕೆಲಸ ಮಾಡಲು ಬಂದಿದ್ದ ಈತ, ಕೆಲಸಕ್ಕೆ ಸೇರಿದ ದಿನವೇ ನಾಪತ್ತೆಯಾಗಿದ್ದ ಎನ್ನಲಾಗಿದೆ. ಆತ ವಾಪಸ್ ತನ್ನ ಊರಿಗೆ ತೆರಳಿರಬಹುದು ಎಂದು ಭಾವಿಸಿದ್ದ ಹೋಟೆಲ್ ಸಿಬ್ಬಂದಿ, ಈ ಬಗ್ಗೆ ಹೆಚ್ಚಿನ ಗಮನ ಹರಿಸಿರಲಿಲ್ಲ.
ಇದೀಗ ಗ್ರಾಮದ ಹೊರವಲಯದ ಹೊಂಗೆ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಕೊಳೆತ ಶವ ಪತ್ತೆಯಾಗಿದೆ. ಮೃತ ವ್ಯಕ್ತಿ ನಾಲ್ಕೈದು ದಿನಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಘಟನೆ ಕುರಿತು ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೊಡ್ಡಬಳ್ಳಾಪುರದ ಶವಾಗಾರಕ್ಕೆ ರವಾನಿಸಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



