ಚಂದ್ರವಳ್ಳಿ ನ್ಯೂಸ್, ಚಿಕ್ಕಬಳ್ಳಾಪುರ:
ನವದಂಪತಿಯಾಗಿದ್ದ ಜೋಡಿಯೊಂದು ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಜಿಲ್ಲೆಯ ಚಿಂತಾಮಣಿ-ಬೆಂಗಳೂರು ರಸ್ತೆಯಲ್ಲಿ ಸಂಭವಿಸಿದೆ.
ಚಿಂತಾಮಣಿ ನಗರದ ಎಂ.ಜಿ. ರಸ್ತೆ ನಿವಾಸಿಗಳಾದ ಷಣ್ಮುಖ (27) ಹಾಗೂ ಅವರ ಪತ್ನಿ ಮಿಥುಲ (24) ಮೃತಪಟ್ಟ ದುರ್ದೈವಿಗಳು. ಇವರಿಗೆ ಮದುವೆಯಾಗಿ ಕೆಲವೇ ತಿಂಗಳುಗಳಾಗಿದ್ದವು ಎನ್ನಲಾಗಿದೆ.
ದಂಪತಿ ಎಲೆಕ್ಟ್ರಿಕ್ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ಎದುರಿನಿಂದ ಬಂದ ಇಕೋ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ಭರಕ್ಕೆ ಎರಡೂ ವಾಹನಗಳು ಸಂಪೂರ್ಣ ಜಖಂಗೊಂಡಿದ್ದು, ತೀವ್ರ ಗಾಯಗೊಂಡ ದಂಪತಿ ಸ್ಥಳದಲ್ಲೇ ಪ್ರಾಣಕಳೆದುಕೊಂಡಿದ್ದಾರೆ. ಇನ್ನು ಕಾರಿನಲ್ಲಿದ್ದ ಸೂರಜ್, ಎಂ.ಎಲ್. ಕುಮಾರ್ ಮತ್ತು ಅತುಲಾ ಎಂಬುವರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಶಿವರಾಜ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



