ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಐಟಿ ರಾಜಧಾನಿ ಬೆಂಗಳೂರಿನ ತಂತ್ರಜ್ಞಾನ ಕಂಪನಿಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಸೂಕ್ತ ಉದ್ಯೋಗಾವಕಾಶಗಳು ದೊರೆಯುತ್ತಿಲ್ಲ ಮತ್ತು 'ಮಾತೃಭಾಷೆ ಕನ್ನಡ' ಎಂದು ಹೇಳಿದರೆ ಕೆಲಸ ಸಿಗುತ್ತಿಲ್ಲ ಎಂದು ಯುವತಿಯೊಬ್ಬಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ವಿಡಿಯೋ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ವಿಷಯವಾಗಿ ರಾಜ್ಯ ಸರ್ಕಾರ ಹಾಗೂ ಉದ್ಯಮ ರಂಗದ ಪ್ರಮುಖರ ನಡುವೆ ವಾಗ್ದಂಡನೆ ಮತ್ತು ಸಲಹೆಗಳು ವ್ಯಕ್ತವಾಗಿವೆ.
ಕನ್ನಡಿಗರಿಗೆ ಅನ್ಯಾಯವಾದರೆ ಸೂಕ್ತ ಕ್ರಮ: ಡಿ.ಕೆ. ಶಿವಕುಮಾರ್
ವಿಡಿಯೋ ವೈರಲ್ ಬೆನ್ನಲ್ಲೇ ತೀವ್ರವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ಕನ್ನಡಿಗರ ಹಕ್ಕು, ಗೌರವ ಮತ್ತು ಉದ್ಯೋಗಾವಕಾಶಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲು ಸರ್ಕಾರ ಬಿಡುವುದಿಲ್ಲ. ಐಟಿ ಕಂಪನಿಗಳು ಕನ್ನಡಿಗರಿಗೆ ಅನ್ಯಾಯ ಮಾಡಬಾರದು," ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಖಾಸಗಿ ಸಂಸ್ಥೆಗಳು ಉದ್ದೇಶಪೂರ್ವಕವಾಗಿ ಸ್ಥಳೀಯರನ್ನು ಪಕ್ಕಕ್ಕೆ ಸರಿಸಿದರೆ ಸರ್ಕಾರದ ಮಟ್ಟದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಕ್ಸ್ (ಟ್ವಿಟರ್) ಮೂಲಕ ಎಚ್ಚರಿಸಿದ್ದಾರೆ.
ಶಿಕ್ಷಣ ಮತ್ತು ಕೌಶಲ ತರಬೇತಿಗೆ ಗಮನ ಹರಿಸಿ: ಮೋಹನ್ ದಾಸ್ ಪೈ ಸಲಹೆ
ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಉದ್ಯಮಿ ಪ್ರಣವ್/ಮೋಹನ್ ದಾಸ್ ಪೈ, "ಕರ್ನಾಟಕದಲ್ಲಿ ಕನ್ನಡಿಗರಿಗೆ ಆದ್ಯತೆಯ ಮೇರೆಗೆ ಉದ್ಯೋಗ ಸಿಗಬೇಕು ಎಂಬುದು ನಿಜ. ಆದರೆ ಸರ್ಕಾರ ಕೇವಲ ಎಚ್ಚರಿಕೆ ನೀಡುವುದಕ್ಕಿಂತ ಮುಂಚಿತವಾಗಿ ಯುವಕರಿಗೆ ಉತ್ತಮ ಶಿಕ್ಷಣ ಮತ್ತು ಕೌಶಲ ತರಬೇತಿ ನೀಡುವತ್ತ ಗಮನಹರಿಸಬೇಕು," ಎಂದು ಮನವಿ ಮಾಡಿದ್ದಾರೆ.
ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉನ್ನತ ಶಿಕ್ಷಣದ ಒಟ್ಟು ದಾಖಲಾತಿ ಅನುಪಾತ ಅತ್ಯಂತ ಕಡಿಮೆಯಿದೆ ಎಂಬುದನ್ನು ಎತ್ತಿಹಿಡಿದ ಪೈ, ಅಲ್ಲಿನ ಯುವಕರಲ್ಲಿ ಕಮ್ಯುನಿಕೇಷನ್ ಹಾಗೂ ಸಾಫ್ಟ್ ಸ್ಕಿಲ್ಸ್ಗಳನ್ನು ಹೆಚ್ಚಿಸುವ ತರ್ತು ಅಗತ್ಯವಿದೆ ಎಂದಿದ್ದಾರೆ. ಪ್ರಸ್ತುತ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿದ್ದು, ಜಾಗತಿಕ ಮಾರುಕಟ್ಟೆಗೆ ತಕ್ಕಂತೆ ಯುವಜನತೆಯನ್ನು ಸಜ್ಜುಗೊಳಿಸಬೇಕಿದೆ ಎಂದು ಪ್ರತಿಪಾದಿಸಿದರು.
ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ನೇಮಕಾತಿಗೆ ಆಗ್ರಹ:
ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಶೇಕಡಾ 60 ರಿಂದ 70 ಕ್ಕಿಂತ ಹೆಚ್ಚು ಬೋಧಕ ಸಿಬ್ಬಂದಿ ಅತಿಥಿ ಉಪನ್ಯಾಸಕರಾಗಿಯೇ ಕೆಲಸ ಮಾಡುತ್ತಿದ್ದಾರೆ ಎಂಬ ವರದಿಗಳನ್ನು ಉಲ್ಲೇಖಿಸಿದ ಅವರು, ಶಿಕ್ಷಣದ ಗುಣಮಟ್ಟ ಸುಧಾರಿಸಲು ಸರ್ಕಾರಿ ಕಾಲೇಜುಗಳಲ್ಲಿ ತಕ್ಷಣವೇ ಕಾಯಂ ಬೋಧಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.



