ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಅವರ ತಂದೆಯವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಸುದೀರ್ಘ ಅನುಭವ ಮತ್ತು ಹಿರಿತನವಿದ್ದರೂ ಖರ್ಗೆ ಅವರು ಇಂತಹ ಸಣ್ಣತನದ ಮಾತುಗಳನ್ನಾಡಿರುವುದು ಅಕ್ಷಮ್ಯ ಅಪರಾಧ ಎಂದು ಅವರು ಕಿಡಿಕಾರಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಕೇಂದ್ರ ಸಚಿವರು, "ದೇಶದ ಪ್ರಧಾನಿಗಳ ಬಗ್ಗೆ ಖರ್ಗೆ ಅವರು ನೀಡಿರುವ ಹೇಳಿಕೆ ಕೇವಲ ಅವಹೇಳನಕಾರಿಯಷ್ಟೇ ಅಲ್ಲ, ರಾಜಕೀಯ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆಯಾಗಿದೆ. ಅವರ ಈ ಮಾತು ಮಾನವೀಯತೆಯ ಅಣಕ ಹಾಗೂ ಅವರಲ್ಲಿರುವ ನಿಗೂಢ ಕ್ರೂರ ಮನಃಸ್ಥಿತಿಯ ಪ್ರತೀಕವಾಗಿದೆ. ಇಂತಹ ವಿಕೃತ ಮನಸ್ಥಿತಿಯೇ ಅವರಿಂದ ಇಂತಹ ಪದಗಳನ್ನು ಆಡಿಸಿದೆ," ಎಂದು ತೀವ್ರವಾಗಿ ಹರಿಹಾಯ್ದಿದ್ದಾರೆ.
ದಾಸಶ್ರೇಷ್ಠ ಪುರಂದರದಾಸರ ಕೀರ್ತನೆಯನ್ನು ಉಲ್ಲೇಖಿಸಿದ ಕುಮಾರಸ್ವಾಮಿ, "'ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ' ಎಂದು ದಾಸರು ಸುಮ್ಮನೆ ಹೇಳಿಲ್ಲ. ಬಹುಶಃ ಇಂತಹ ಕೆಟ್ಟ ನಾಲಿಗೆಗಳನ್ನು ತಿದ್ದುವ ಉದ್ದೇಶದಿಂದಲೇ ಆ ಸಾಲುಗಳನ್ನು ರಚಿಸಿರಬೇಕು. ಪ್ರಧಾನಿಗಳ ತಂದೆಯವರನ್ನು ರಾಜಕೀಯಕ್ಕೆ ಎಳೆದು ತಂದು ಟಾರ್ಗೆಟ್ ಮಾಡಿರುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ," ಎಂದು ಖಂಡಿಸಿದ್ದಾರೆ.
ಖರ್ಗೆ ಅವರ ಈ ವರ್ತನೆ ಕಾಂಗ್ರೆಸ್ ಪಕ್ಷದ ಹತಾಶೆ ಮತ್ತು ನಾಚಿಕೆಗೇಡಿತನವನ್ನು ಎತ್ತಿ ತೋರಿಸುತ್ತದೆ ಎಂದ ಸಚಿವರು, ಇದು ಕಾಂಗ್ರೆಸ್ ಪಕ್ಷದ ವೈಚಾರಿಕ ಅಧಃಪತನದ ಪರಮಾವಧಿ ಎಂದು ಬಣ್ಣಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ತಕ್ಷಣವೇ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಬಹಿರಂಗ ಕ್ಷಮೆಯಾಚಿಸಿ, ತಮ್ಮ ಸುದೀರ್ಘ ಸಾರ್ವಜನಿಕ ಜೀವನದ ಹಿರಿತನಕ್ಕೆ ತಕ್ಕಂತೆ ಗೌರವ ಉಳಿಸಿಕೊಳ್ಳಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.



