ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಂಕಿತ ಆರೋಪಿಗೆ ನೋಟಿಸ್ ನೀಡಲು ತೆರಳಿದ್ದ ಮಹಿಳಾ ಪೊಲೀಸ್ ಇನ್ಸ್ಪೆಕ್ಟರ್ ಅವರ ಚಿನ್ನದ ಬ್ರಾಸ್ಲೆಟ್ನಾಪತ್ತೆಯಾಗಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಅಕ್ಟೋಬರ್ 23ರಂದು ಇನ್ಸ್ಪೆಕ್ಟರ್ ಕವಿತಾ ಜಿ.ಎಂ. ನೇತೃತ್ವದ ತನಿಖಾ ತಂಡವು ಜೆಡಿಎಸ್ ಕಾರ್ಯಕರ್ತ ಮೋಹನ್ ಗೌಡ ಅವರ ಭರತ್ ನಗರದ ನಿವಾಸಕ್ಕೆ ತೆರಳಿತ್ತು. ಈ ವೇಳೆ ಶೋಧ ಕಾರ್ಯದ ಭಾಗವಾಗಿ ಮೊಬೈಲ್ ಫೋನ್ ವಶಕ್ಕೆ ಪಡೆಯಲು ಮುಂದಾದಾಗ, ಮೋಹನ್ ಗೌಡ ಅವರ ಪತ್ನಿ ಪವಿತ್ರಾ ಮತ್ತು ಅವರ ಸ್ನೇಹಿತೆ ಪವಿತ್ರಾ ಎಂಬುವವರು ಕರ್ತವ್ಯಕ್ಕೆ ಅಡ್ಡಿಪಡಿಸಿ ಎಳೆದಾಟ ನಡೆಸಿದ್ದಾರೆನ್ನಲಾಗಿದೆ.
ಈ ಘರ್ಷಣೆಯ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ಕವಿತಾ ಅವರ ಕೈಯಲ್ಲಿದ್ದ ಸುಮಾರು 9 ಗ್ರಾಂ ತೂಕದ ಚಿನ್ನದ ಬ್ರಾಸ್ಲೆಟ್ ತುಂಡಾಗಿ ಕೋಣೆಯ ಬೆಡ್ ಮೇಲೆ ಬಿದ್ದಿತ್ತು. ಠಾಣೆಗೆ ಮರಳಿದ ಬಳಿಕ ಬ್ರಾಸ್ಲೆಟ್ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಶೋಧ ಕಾರ್ಯದ ವಿಡಿಯೋ ರೆಕಾರ್ಡಿಂಗ್ ಪರಿಶೀಲಿಸಿದಾಗ ಬ್ರಾಸ್ಲೆಟ್ ಬೆಡ್ ಮೇಲೆ ಬಿದ್ದಿರುವುದು ಖಚಿತವಾಗಿದೆ.
ಕೂಡಲೇ ಇನ್ಸ್ಪೆಕ್ಟರ್ ಕವಿತಾ ಅವರು ಮತ್ತೆ ಮನೆಗೆ ತೆರಳಿ ವಿಚಾರಿಸಿದಾಗ, ಆರೋಪಿಗಳು ಬ್ರಾಸ್ಲೆಟ್ ಬಗ್ಗೆ ತಮಗೆ ಗೊತ್ತೇ ಇಲ್ಲವೆಂದು ಹಾರಿಕೆಯ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಿ ಹಾಗೂ ಚಿನ್ನದ ಆಭರಣವನ್ನು ಮರೆಮಾಚಿದ ಆರೋಪದಡಿ ಪವಿತ್ರಾ ಹಾಗೂ ಅವರ ಸ್ನೇಹಿತೆಯ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.



