ಚಂದ್ರವಳ್ಳಿ ನ್ಯೂಸ್, ವಿಜಯಪುರ:
ಕರ್ನಾಟಕ ರಾಜಕಾರಣದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಫೈಟ್ ಒಂದೆಡೆಯಾದರೆ, ಬಿಜೆಪಿ ಒಳಗಿನ ಆಂತರಿಕ ಭಿನ್ನಮತ ಈಗ ಮತ್ತೊಮ್ಮೆ ಸ್ಫೋಟಗೊಂಡಿದೆ. "ವಿಧಾನ ಪರಿಷತ್ ಚುನಾವಣೆಯಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅತ್ಯಂತ ವ್ಯವಸ್ಥಿತವಾಗಿ ಸಹಾಯ ಮಾಡಿದ್ದಾರೆ" ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇರ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಒಳಗಿನ ಬೆಳವಣಿಗೆಗಳು ಮತ್ತು ತಮ್ಮ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
"ಡಿಕೆಶಿ ಬ್ಲ್ಯಾಕ್ ಮೇಲ್‌ಗೆ ಹೆದರಿದ ವಿಜಯೇಂದ್ರ":
ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ನಡೆ ಸಂಶಯಾಸ್ಪದವಾಗಿತ್ತು ಎಂದ ಯತ್ನಾಳ್, "ಡಿ.ಕೆ. ಶಿವಕುಮಾರ್ ಹೇಳಿದಂತೆ ಕೇಳದಿದ್ದರೆ ನನ್ನ ಹಗರಣಗಳನ್ನು ಹೊರತೆಗೆಯುತ್ತಾರೆ ಎಂಬ ಭಯ ವಿಜಯೇಂದ್ರ ಅವರಿಗಿದೆ. ಇದೇ ಕಾರಣಕ್ಕೆ ಅವರು ಕಾಂಗ್ರೆಸ್‌ಗೆ ಬೆಂಬಲ ನೀಡುವ ಉದ್ದೇಶದಿಂದ ನಾಚಿಕೆಗೇಡಿನ ಕೆಲಸ ಮಾಡಿದ್ದಾರೆ. ನಿಯಮದ ಪ್ರಕಾರ ಮತದಾನಕ್ಕೂ ಮುನ್ನ 'ವಿಪ್' ನೀಡಬೇಕಿತ್ತು. ಆದರೆ ಇವರು ಮತದಾನ ಮುಗಿದ ನಂತರ ವಿಪ್ ಜಾರಿಗೊಳಿಸಿದ್ದಾರೆ. ಬಿಜೆಪಿಯ ಕೆಲವು ಶಾಸಕರು ಕಾಂಗ್ರೆಸ್‌ಗೆ ಮತ ಹಾಕುವಂತೆ ಸ್ವತಃ ರಾಜ್ಯಾಧ್ಯಕ್ಷರೇ ಮಾಡಿಸಿರುವ ಸಾಧ್ಯತೆಯಿದೆ" ಎಂದು ಗಂಭೀರವಾಗಿ ಆರೋಪಿಸಿದರು.
"ನನ್ನ ತಂಟೆಗೆ ಬಂದರೆ ನಿಮ್ಮ ಕುಟುಂಬದ ಇತಿಹಾಸ ಬಿಚ್ಚಿಡಬೇಕಾಗುತ್ತದೆ!": ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿಸುತ್ತಿರುವ ವಿಜಯೇಂದ್ರ ಬೆಂಬಲಿಗರಿಗೆ ಯತ್ನಾಳ್ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ.
"ನನ್ನ ವೈಯಕ್ತಿಕ ವಿಚಾರ ಹಾಗೂ ನನ್ನ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಹುಷಾರ್! ನಿಮ್ಮ ಇಡೀ ಕುಟುಂಬದ ಇತಿಹಾಸ ನನ್ನ ಬಳಿ ಇದೆ. ಅಗತ್ಯ ಬಿದ್ದರೆ ಅದನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಬೇಕಾಗುತ್ತದೆ. ನಿಮ್ಮ ಚೇಲಾಗಳಿಂದ ನನ್ನ ವಿರುದ್ಧ ಪೋಸ್ಟ್ ಮಾಡಿಸಿದರೆ, ಅದಕ್ಕಿಂತ ತೀಕ್ಷ್ಣವಾಗಿ ನಾನು ಉತ್ತರ ನೀಡುತ್ತೇನೆ" ಎಂದು ಗುಡುಗಿದ್ದಾರೆ.
ಹೈಕಮಾಂಡ್‌ಗೆ ಪತ್ರ ಬರೆದ ಯತ್ನಾಳ್:
"ನಾನು ಬಿಜೆಪಿಯ ಶಾಸಕ, ಪ್ರಾಮಾಣಿಕವಾಗಿ ನನ್ನ ಪಕ್ಷಕ್ಕೇ ಮತ ಹಾಕಿದ್ದೇನೆ. ಇದರಿಂದ ಕೆಲವರ ಎದೆ ಒಡೆದಂತಾಗಿದೆ. ಕೆಲವರು ಕಾಂಗ್ರೆಸ್‌ನಿಂದ ಹಣ ಮತ್ತು ಅಭಿವೃದ್ಧಿ ಅನುದಾನದ ನಿರೀಕ್ಷೆಯಲ್ಲಿದ್ದರು. ಆದರೆ ನಾನು ಪಕ್ಷ ನಿಷ್ಠೆ ಮೆರೆದಿದ್ದಕ್ಕೆ, ವಿಜಯೇಂದ್ರ ಅವರ ಟೀಂ ನಕಲಿ ಸಾಮಾಜಿಕ ಜಾಲತಾಣಗಳ ಮೂಲಕ ನಾನು ಕಾಂಗ್ರೆಸ್‌ಗೆ ಮತ ಹಾಕಿದ್ದೇನೆ ಎಂಬ ಸುಳ್ಳು ಅನುಮಾನ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಈ ಎಲ್ಲ ವಿದ್ಯಮಾನಗಳ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದು ಸಮಗ್ರ ಮಾಹಿತಿ ನೀಡಿದ್ದೇನೆ" ಎಂದು ಯತ್ನಾಳ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆ ಮುಗಿದ ಬೆನ್ನಲ್ಲೇ ಯತ್ನಾಳ್ ಅವರು ನೇರವಾಗಿ ರಾಜ್ಯಾಧ್ಯಕ್ಷರ ವಿರುದ್ಧವೇ ದಿಲ್ಲಿ ನಾಯಕರಿಗೆ ದೂರು ನೀಡಿರುವುದು ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.



