ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪತ್ರಿಕಾಲಯದ ಫೋನ್ ಯಾವಾಗಲೂ ಸುದ್ದಿ ಹೊತ್ತು ಸದ್ದಾಗುತ್ತಿದ್ದುದು ಸಾಮಾನ್ಯ ವಿಷಯ. ಹಾಗಾಗಿ ಕಛೇರಿ ಫೋನ್ ತುಸು ಹೊತ್ತಿನಿಂದ ರಿಂಗುಣಿಸುತ್ತಲೇ ಇತ್ತು.
ಬೇರೆ ಬೇರೆ ಸುದ್ದಿಗಳಲ್ಲಿ ತಲ್ಲೀನನಾಗಿದ್ದ ಅಹೋಬಲಪತಿ, ಈ ಸುದ್ದಿಯನ್ನು ತಿಳಿದುಕೊಳ್ಳಲು ರಿಸಿವರ್ ಎತ್ತಿದವನೇ ಹಲೋ ನಾಗರಹಾವು ಪತ್ರಿಕೆ ಕಾರ್ಯಾಲಯ ಸ್ಪೀಕಿಂಗ್ ಅಂದ.
ಫೋನ್ ನಲ್ಲಿದ್ದ ಧ್ವನಿ ಅವಸರದಿಂದ ನಮಸ್ಕಾರ ಸರ್, ಕೋನಾಪುರದ ರೈತರ ಮುಷ್ಕರ ವಿಪರೀತಕ್ಕೆ ಹೋಗಿದೆ, ತಾಲ್ಲೂಕು ಕಛೇರಿ ಮುಂದೆ ಧರಣಿ ಕುಂತವ್ರೆ, ಒಳಗೆ ಹೊರಗೆ ಯಾರಿಗೂ ಕೆಲ್ಸ ಮಾಡೊಕೇ ಬಿಡ್ತಿಲ್ಲ, ಡಿಸ್ಟಿಕ್ ಮಿನಿಸ್ಟರ್ ಬರೋ ಸುದ್ದಿ ಇತ್ತು, ಈಗ ಅವ್ರೂ ಬರ್ತಾ ಇಲ್ಲ, ವಿಧಾನಸೌಧದಲ್ಲಿ ಕೆಲ್ಸದ ನೆಪ ಹೇಳಿ, ಬರೋದಕ್ಕಾಗ್ತಿಲ್ಲಾ ಅನ್ನೋ ಸುದ್ದಿ, ಹಾಗಾಗಿ ಮುಷ್ಕರ ದಾರಿ ತಪ್ಪೋ ಸಂಭವ ಹೆಚ್ಚಾಗಿದೆ.
ತಹಶೀಲ್ದಾರ್ ಸಾಹೇಬ್ರು ಇದಾರೇನು?, ಅವರೆಲ್ಲೀ ಸಾರ್,ಹನ್ನೆರಡು ಗಂಟೆ ಆಗ್ತಾ ಬಂದ್ರೂ ಕಛೇರೀಲಿ ಕಾಣ್ತಾಯಿಲ್ಲಾ, ಪೊಲೀಸ್ ವ್ಯಾನ್ ಮಾತ್ರ ಬಂದು ನಿಂತಿದೆ ಹೌದಾ....ಸರಿ ಈಗ ಬಂದೆ ಎಂದವನೇ ರಿಸಿವರ್ ಕೆಳಗಿಟ್ಟ. ಕೋನಾಪುರದ ರೈತರ ಮುಷ್ಕರ ಇಂದು ನೆನ್ನೆಯದಲ್ಲ, ಈ ಹಿಂದೆ ಅನೇಕ ಬಾರಿ ನಡೆದಾಗಿದೆ. ಅವರ ಬೇಡಿಕೆಗೆ ಯಾವ ಮನ್ನಣೆಯೂ ಸಿಕ್ಕಿಲ್ಲ, ಶಾಸಕ ಗಾಡಿ ಮಂಜಪ್ಪನಿಗೆ ಈ ಹಳ್ಳಿ ವಿಷಯ ಅಂದ್ರೆ, ತಲೆ ಒಳಗೇ ನುಸುಳೋದೇ ಇಲ್ಲ!. ಪ್ರೆಸ್ ನವರಾಗಿ ನಮ್ ಕೆಲಸ ನಾವು ಮಾಡಿದ್ದೇವೆ, ನಾವು ಬರೆದಿದ್ದನ್ನಾದ್ರೂ ನೋಡಿ, ಜಿಲ್ಲಾಡಳಿತ ಕನಿಷ್ಠ ಕೆಲ್ಸ ಮಾಡ್ತಾ ಹೋಗಿದ್ರೂ ಎಷ್ಟೋ ಮುಷ್ಕರಗಳಿಗೆ ನ್ಯಾಯನಾದ್ರೂ ಸಿಕ್ಕಿರೋದು, ಆದ್ರೇ ಅದೆಲ್ಲ ನಮ್ಮ ನೆಲದಲ್ಲಿ ಆಗಲ್ವಲ್ಲಾ, ಅದಕ್ಕೇನು ಮಾಡೋದು.
ಗಂಡ ಹೆಂಡತಿ ಮಧ್ಯೆ ಕೂಸು ಬಡವಾಯಿತು ಅನ್ನೋ ಹಾಗೆ, ದೇವಪ್ಪ ಗಾಡಿಮಂಜಪ್ಪನ ಜಗಳದಾಗೇ ಹಳ್ಳಿಗೆ ತೊಂದ್ರೆ ಆಗ್ತಾ ಇದೆ. ಅದೆಂತಾ ಹೊಲಸು ರಾಜಕೀಯನೋ?. ಅಹೋಬಲಪತಿಯ ಅಂತರಾಳದಿಂದ ರೈತರಿಗಾಗುವ ಅನ್ಯಾಯಕ್ಕೆ ನಿರಾಶೆಯೂ ಹೊರಬಿದಿತ್ತು. ಸರಸರನೆ ಹೊರಬಂದು ಕಛೇರಿಯ ಮೆಟ್ಟಿಲಿಳಿದು ಬೈಕ್ ಸ್ಟಾರ್ಟ್ ಮಾಡಿದವನೇ ತಾಲ್ಲೂಕು ಕಛೇರಿ ಕಡೆ ದೌಡಾಯಿಸಿದ.
ಕನಕ ವೃತ್ತದಿಂದ ಜಮಾವಣೆಗೊಂಡು, ಮೆರವಣಿಗೆ ಬಂದಿದ್ದ ಕೋನಾಪುರದ ಹಳ್ಳಿಗರು, ಓಬಳೇಶನ ಮುಖಂಡತ್ವದಲ್ಲಿ ತಾಲ್ಲೂಕು ಕಛೇರಿಯ ಬಾಗಿಲಿಗೆ ಫೀಡರ್ ಕಾಲುವೆಯ ಪೋಸ್ಟರ್ ಗಳ ಜೊತೆ ಗಾಂಧೀಜಿ, ನೇತಾಜಿ, ಅಂಬೇಡ್ಕರ್ ರವರ ಫಲಕಗಳನ್ನಿಡಿದು ಸತ್ಯಾಗ್ರಹ ಕುಳಿತಿದ್ದರು.
ಮಧ್ಯಾಹ್ನದ ಉರಿ ಬಿಸಿಲಿಗೆ ಮೈಯೊಡ್ಡಿದ್ದ ಹೆಂಗಸರು, ಮಕ್ಕಳು, ಮುದುಕರಾದಿಯಾಗಿ ಒಕ್ಕೊರಲಿನಿಂದ ಘೋಷಣೆಗಳನ್ನೂ ಕೂಗುತ್ತಿದ್ದರು. ಬೇಕೇ ಬೇಕು, ನ್ಯಾಯ ಬೇಕು ನಮ್ಮ ಬೇಡಿಕೆಗಳು ಈಡೇರಲಿ, ನಮ್ಮ ಹಳ್ಳಿಗೆ ನೀರು ಹರಿದುಬರಲಿ, ಕೋನಾಪುರದ ಫೀಡರ್ ಕಾಲುವೆಗೆ ಜಯವಾಗಲಿ ಬೇಕೇ ಬೇಕು, ನ್ಯಾಯ ಬೇಕು ಸಮೂಹದಿಂದ ಘೋಷಣೆಗಳು ಮಾರ್ಧನಿಸುತ್ತಿದ್ದವು.
ಬರಬೇಕಾಗಿದ್ದ ಜಿಲ್ಲಾಮಂತ್ರಿಗಳು, ಜಿಲ್ಲಾಧಿಕಾರಿಗಳು ಇಲ್ಲವಾಗಿ ತಹಶೀಲ್ದಾರರು ಸಹ ಕಛೇರಿ ಕಡೆ ಸುಳಿದಿರಲಿಲ್ಲ. ರೆವೆನ್ಯೂ ಆಫೀಸರ್ ಪ್ರಾಣೇಶ್ ಮಾತ್ರ ವಿಲೇಜ್ ಅಕೌಂಟೆಂಟ್ ಶ್ರೀನಿವಾಸ್ ಜೊತೆ ಹೊರ ಬಂದು, ನಿಮ್ಮ ಮನವಿಯನ್ನು ಹಿರಿಯ ಅಧಿಕಾರಿಗಳಿಗೆ ತಲುಪಿಸ್ತೇವೆ, ಕಛೇರಿ ಕೆಲ್ಸ ಮಾಡೋದಕ್ಕೆ ಅವಕಾಶ ಕೊಡಿ ಅಂತ ಸಂತೈಸ ತೊಡಗಿದ್ದರು. ಜೊತೆಗೆ ಸರ್ಕಲ್ ಇನ್ಸ್ಪೆಕ್ಟರ್ ನರೇಂದ್ರಬಾಬು ಅವರದ್ದೂ ಅದೇ ಅಹವಾಲು, ಕಛೇರಿಯ ಸಮಯ ಹಾಳು ಮಾಡಿದ್ರೆ ನಾನು ಅರೆಸ್ಟ್ ಮಾಡ್ಬೇಕಾಗ್ತದೆ, ಈಗ ಸಚಿವರು ಬರೆದೆ ಹೋದ್ರೇ
ಇನ್ನೊಂದಿನ ಬಂದೇ ಬರ್ತಾರೆ, ಆ ದಿನ ನಿಮ್ಮ ಕೆಲ್ಸ ಮಾಡಿಸ್ಕೊಳ್ಳಿ ಸುಮ್ಮಸುಮ್ಮನೆ ನನಗೆ ಕೆಲ್ಸ ಕೊಡ್ಬೇಡಿ, ದಯವಿಟ್ಟು ಹೋಗಿ ಇಲ್ಲ ಅಂದ್ರೆ ಲಾಟಿಚಾರ್ಜ್ ಮಾಡಿಸ್ಬೇಕಾಗುತ್ತೆ.
ಹಳ್ಳಿಗರ ಮುಂದಾಳಾಗಿ ಬಂದಿದ್ದ ಓಬಳೇಶನಿಗೂ ಸಹನೆ ಮೀರಿತ್ತು. ಕೋಪದಿಂದಲೇ ಮುಷ್ಕರದವ್ರ ಮಧ್ಯೆಯಿಂದ ನುಗ್ಗಿ ಮುಂದೆ ಬಂದವ್ನೇ ಏನ್ ಜೀವ ತೆಗಿತಿರೇನ್ರೀ, ಮೂರು ನಾಲ್ಕು ಹಳ್ಳಿಗೆ ಅನುಕೂಲವಾಗುವಂಥ ಒಂದು ಕೆಲ್ಸನಾ ಕೇಳಕ್ಕೆ ಇಲ್ಲಿಗೆ ಹತ್ತುಸಾರಿ ಬಂದಿದೀವಿ,ಬಂದಾಗ್ಲೆಲ್ಲಾ ಏನಾದ್ರೂ ಒಂದು ಸಬೂಬ್ ಹೇಳಿ ಕಳಿಸ್ತೀರಿ, ಇಲ್ಲಾ ಬೆದರಿಸ್ತೀರಿ, ಅದೇನ್ ಮಾಡ್ತೀರೋ ಮಾಡ್ರಿ ನಾವಿಲ್ಲಿಂದ ಕದ್ಲಲ್ಲ, ಮಾತಾಡುತ್ತಲೇ ಹಳ್ಳಿಗರ ಕಡೆ ತಿರುಗಿದವ್ನೇ, ಗಾಂಧೀಜಿ ಅಂಬೇಡ್ಕರರ ಫಲಕಗಳನ್ನ ಎರಡೂ ಕೈಗಳಿಂದ ಹಿಡಿದು ಘೋಷಣೆಗಳನ್ನ ಹಾಕ ತೊಡಗಿದ.
ಬೇಕೆ ಬೇಕು, ನ್ಯಾಯ ಬೇಕು ಸಮೂಹದ ಧ್ವನಿಗಳು ಒಟ್ಟೊಟ್ಟಿಗೆ ಮಾರ್ದನಿಸತೊಡಗಿದವು. ಮಾತಾಡಲು,ಮುಂದಾದ R O.ಪ್ರಾಣೇಶ್ ಶ್ರೀನಿವಾಸ್ ರ ಧ್ವನಿ ಹಳ್ಳಿಗರ ಘೋಷಣೆಗಳ ಮುಂದೆ ಕ್ಷೀಣಿಸಿದ್ದವು. ಅವಮಾನವಾದಂತಾಗಿ ಕೆರಳಿದ ಇಬ್ಬರು ಸಿಟ್ಟಿನಿಂದಲೇ ಇನ್ಸ್ಪೆಕ್ಟರ್ ಮುಖ ನೋಡ್ತಾ ಸನ್ನೆ ಮಾಡಿ ಸರಸರನೇ ಒಳ ನಡೆದ್ರು.

ಇಬ್ಬರು ಅಧಿಕಾರಿಗಳು ಒಪ್ಪಿಗೆ ಕೊಟ್ಟಂತಾಗಿ ನರೇಂದ್ರಬಾಬು ವ್ಯಾನ್ ನಲ್ಲಿದ್ದ ಪೊಲೀಸ್ ತುಕಡಿಯನ್ನ ಮುಷ್ಕರದ ಗಲಬೆ ಎದುರು ನಿಲ್ಲಿಸತೊಡಗಿದ್ರು.
ಲೇಖನ: ಕುಮಾರ ಬಡಪ್ಪ, ಚಿತ್ರದುರ್ಗ. ನಾಳೆಗೆ...........


