ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಂತ್ರಿಗಳ ಮಾತಿಗೆ ಗಲಿಬಿಲಿಯಾದ ಗಾಡಿಮಂಜಪ್ಪ ಹಂಗೇನೂ ಆಗಲ್ರೀ ಸಾಹೇಬ್ರೆ, ನಗರ ಸೇರಿ 200 ಹಳ್ಳಿಗಳಿಗೆ ಶಾಸಕ ನಾನು, ಒಂದಳ್ಳಿ ಜನ ನನ್ನನ್ನ ಬಗ್ಗಸೊಕೆ ಹೊರಟಾರಂದ್ರೆ ನನ್ನ ಕಿಮ್ಮತ್ತು ಏನಾದೀತು.
ಅವರು ಎಲ್ಲಿ ಹೋದ್ರೂ ನನ್ನತ್ರ ಬರ್ಲೇಬೇಕು, ಈ ಮುಷ್ಕರ ಮುಂದಕ್ಕೆ ಬೆಳೀದಂಗ ನಾನು ನೋಡ್ಕೋತೀನಿ, ಇದು ನನ್ನೆದುರು ಸೋತಿರೋ ಆ ದೇವಪ್ಪನ ಮಸಲತ್ತು, ಇವ್ರೆಲ್ಲಾ ಏನ್ ಮಾಡಿಯಾರು, ನೀವು ಸ್ವಲ್ಪ ದಿನ ಈ ಕಡೆ ಬರದಂಗೆ ಬೆಂಗಳೂರಲ್ಲೇ ಇದ್ದುಬಿಡಿ, ನಮ್ಮ ಪಕ್ಷಕ್ಕೂ ಹೆಸರು ಬರಬೇಕು, ನನಗೂ ನಿಮಗೂ ಹೆಸರು ಬರಬೇಕು, ಹಂಗೆ ತರ್ತೀನಿ ಈ ವಿಷಯಾನ.
ಅದೇನ್ ಮಾಡ್ತಿರೋ ನನಗೆ ಗೊತ್ತಿಲ್ಲ, ಲಾಟಿಚಾರ್ಜ್ ವರೆಗೂ ಹೋಗಿದೆ ವಿಷಯ ಒಂದಳ್ಳಿದಾದ್ರೂ ಸುತ್ತಲ ಹಳ್ಳಿಗಳಿಗೆ ತಲುಪಿ ಪರಿಸ್ಥಿತಿ ತೀರಾ ಹದಗೆಡೋವರೆಗೂ ಬಿಡಬ್ಯಾಡ್ರಿ, ನಿಮ್ಮ ಕ್ಷೇತ್ರ ಅಂತ ನಿಮ್ಗೇ ಜವಾಬ್ದಾರಿ ಬಿಟ್ರೇ ನನ್ನ ಮೇಲೆನೇ ಗೂಬೆ ಕೂರ್ಸೋ ಕೆಲ್ಸ ಆಗಬಾರ್ದು, ಸಮೂಹ, ಸಂಘಟನೆಗಳು, ರೊಚ್ಚಿಗೇಳೋಕು ಮುಂಚೆ ಬೇಗನೆ ಒಂದು ತೀರ್ಮಾನಕ್ಕೆ ಬಂದ್ರೇ ಎಲ್ಲರಿಗೂ ಒಳ್ಳೆಯದು ಆಗಾಗ್ಗೇ ಫೋನ್ ಮಾಡ್ತಿರ್ರಿ. ಸೊಮೇಂದ್ರು ಅವ್ರ ಮಾತು ಮುಗಿಯುತ್ತಿದ್ದಂತೆ ಮೊಬೈಲ್ ಕಟ್ ಆಯ್ತು.
ಎದುರಿಗಿದ್ದ ಸೋಫಾಕ್ಕೆ ಒರಗಿದವನೇ ಆಯಾಸವಾದಂತೆ,ನೆತ್ತಿಯ ಮೇಲಿನ ಫ್ಯಾನ್ ಕಡೆ ದೃಷ್ಟಿ ಹಾಯಿಸಿದ ಅದು ಸುತ್ತುತ್ತಲೇ ಇತ್ತು, ನನ್ನ ಕೆಲಸ ನಾನು ಮಾಡ್ತಿದ್ದೇನೆ ಅಂತ ಅಣಕಿಸುತ್ತ ಎಷ್ಟು ಧಿಮಾಕು,ಈ ನನ್ನ ಮಕ್ಳಿಗೆ ಒಂದೇ ಒಂದು ಹಳ್ಳಿ ಐನೂರು ಓಟಿಲ್ಲ ನನ್ನನ್ನೇ ಎದುರು ಹಾಕ್ಕೊಳ್ಳೋ ಮಟ್ಟಕ್ಕೆ ಬಂದ್ರಲ್ಲ, ಇಷ್ಟೆಲ್ಲದಕ್ಕೂ ಆ ದೇವಪ್ಪನದೇ ಕಿತಾಪತಿ ಸೋಲು ತಡ್ಕೊಳ್ಳೋಕಾಗ್ದೇ ಇಂಥ ಕೆಲಸಕ್ಕೆ ಕೈ ಹಾಕ್ತಾನೆ,ಎರಡುಸಾರಿ ಗೆದ್ದು ಅಧಿಕಾರ ಅನುಭವಿಸುವಾಗ ಇಲ್ಲದ ಈ ಸುದ್ದೀ!
ಹೀಗ ನ್ಯೂಸ್ ಆಗಿ ಪೇಪರ್ ಗಳಲ್ಲಿ ಬರ್ತಿದೆ, ಬರ್ಲಿ ಬರ್ಲಿ ಇದನ್ನ ಹೆಂಗೆ ಕಂಟ್ರೋಲ್ ಗೆ ತಗೋಬೇಕೋ, ಹಾಂಗೆ ತಗೊಳ್ತೀನಿ. ಮಾಜಿ ಶಾಸಕ ದೇವಪ್ಪನ ರೆಕಮೆಂಡ್ ಮೇಲೆ ಬಿಡುಗಡೆಗೊಂಡಿದ್ದ ಓಬಳೇಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರನ್ನೆಲ್ಲ ಕಂಡು ಮಾತಾಡಿಸಿ ಹೊರಬಂದಿದ್ದ.
ಬಯ್ಲುಸೀಮೆ,ಬರಡುಭೂಮಿ ನಮ್ಮವು, ಇಂತದ್ರಲ್ಲೂ ನೀರಿಲ್ಲದ ಹಳ್ಳಿಗೆ ನೀರು ಕೊಡ್ರಿ ಅಂತ ಕೇಳೋಕೆ ಹೊರಟ್ರೇ, ಪೋಲೀಸರಿಂದ ಹೆಂಗಸ್ರು, ಮಕ್ಳು ಮುದ್ಕುರಿಗೆ ಲಾಟಿ ಬೂಟ್ನಿಂದ ಹೊಡಸ್ತೀರಾ, ದುಡಿಯೋ ಕೈಗಳಿಗೆ, ನಮ್ಮನ್ನಾಳುವವ್ರು ಕೊಡೋ ಪ್ರಶಸ್ತಿನಾ ಇದು.
ನಮ್ಮಂತವರ ಕೂಗು ಕೇಳೋರೇ ಇಲ್ಲ ಈ ಸರ್ಕಾರದಲ್ಲಿ ಅನ್ಸಿತ್ತು ಮನಸ್ಸಿಗೆ. ಗಾಡಿ ಮಂಜಪ್ಪನ ಪಿಎ(ಆಪ್ತ ಸಹಾಯಕ) ನಿಸಾರ್ ಕಂಡು ಮಾತಾಡ್ಸಿ ಹೋಗಿದ್ದು ಇನ್ನೂ ಹಸಿಯಾಗಿತ್ತು.
ಹಾಗಿದ್ದಾಗಿದೆ, ಶಾಸಕರನ್ನ ಇನ್ನೊಮ್ಮೆ ಕಂಡು ಮುಂದಿನ ಎಲಕ್ಷನ್ ಗೆ ನಿಮ್ಮ ಜೊತೇಲಿ ಇರ್ತೇವೆ ಅಂತ ಕೈ ಮುಗಿದು ಕೇಳ್ಕೊಳ್ರೀ, ಕೆಲಸ ಆಗ್ತದೆ ಅಂತ ಪದೇ ಪದೇ ಹೇಳುತ್ತಿದ್ದುದು ಜ್ಞಾಪಿಸಿಕೊಂಡ್ರೇ ಸಿಟ್ಟು ನೆತ್ತಿಗೇರಿ ಮೈಯೆಲ್ಲಾ ಬಿಗಿದಂತಾಗುತ್ತಿತ್ತು.
ನಮ್ಮ ಹಳ್ಳಿ ಜಮೀನುಗಳಿಗೆ ಕೆರೆಯಿಂದ ಕಾಲ್ವೆ ತೋಡಿದ್ರೇ ಇನ್ನೂ ನಾಲ್ಕಾರು ಹಳ್ಳಿಗಳಿಗೂ ಸೇರಿ ಅನುಕೂಲ ಆಯ್ತದೆ. ಈ ಶಾಸಕನಿಗೆ ನಾವು ಹೋಗಿ ಕೈ ಮುಗಿದಿದ್ದಕ್ಕೆ ಬೆಲೆನೇ ಇಲ್ಲ, ಇಡೀ ಹಳ್ಳಿಗೆ ಹಳ್ಳಿನೇ ಹತ್ತಾರು ಬಾರಿ ಹೋಗಿ ಕಂಡದ್ದು ಆಯ್ತು, ಎಷ್ಟು ಸಾರಿ ಅವನ ಹಿಂದೆ ಬಿದ್ದಿದ್ದು, ಮನೆ ಹತ್ರ ಹೋದ್ರೆ ಪ್ರವಾಸಿ ಮಂದಿರಕ್ಕೆ ಬರ್ರಿ ಅಂತವ್ನೆ, ಪ್ರವಾಸಿ ಮಂದಿರದ ಹತ್ರ ಹೋದ್ರೆ ಬೆಳಗ್ಗೆ ಮನೆಗೆ ಬರ್ರಿ ಅಂತವ್ನೆ, ಮಕ್ಳು, ಮುದ್ಕುರು, ಹೆಂಗಸ್ರನ್ನ ಕಟ್ಕೊಂಡು ಅಲೆದು ಅಲೆದೂ ಸಾಕಾಗಿದೆ, ಇದನ್ನೇನು ದೊರೆ ಪಟ್ಟನೇ ಅಂದ್ಕೊಂಡು ತಿರುಗಾಡ್ತಿದನೆನೋ ಮಾರಾಯ, ಪಂಚಾಯಿತಿ ಮೆಂಬರ್ ಸುರೇಶ್ ನತ್ರ ಈ 500 ಓಟಿನ ಹಳ್ಳಿದು ನನಗೇನ್ರಿ ಕಾಟ, ಇಂತ ಇನ್ನೂರ ಹಳ್ಳಿ ಬರ್ತವೆ ನನಗೆ, ಇವರ್ದೇ ನೋಡ್ಕೊಂಡು ಕುಂತಿರ್ಲೇನು, ಇಲ್ಲೊಂದು ಡ್ಯಾಮ್ ಕಟ್ಟಿ ಕಾಲ್ವೆಗುಂಟ ನೀರು ಹರ್ಸೋಕೆ, ಈಗ ಸದ್ಯಕ್ಕೆ ಶಾಸಕರತ್ರ ಅನುದಾನ ಇಲ್ಲ ಅಂತ ಹೇಳೋಕಾಗಲ್ವೇನ್ರಿ ಅಂತ ಬೈದಾಡಿದ್ನಂತೆ. ಸುರೇಶ ನೆನ್ನೆ ಹಳ್ಳಿಗೆ ಬಂದು ಯಜಮಾನ್ರತ್ರ ಗೊಣಗಿ ಹೋಗಿದ್ದ.
ಲೇಖನ: ಕುಮಾಪ ಬಡಪ್ಪ, ಚಿತ್ರದುರ್ಗ. ನಾಳೆಗೆ......


