ಚಂದ್ರವಳ್ಳಿ ನ್ಯೂಸ್, ಉಡುಪಿ:
ಕನ್ನಡ ಭಾಷೆಯ ಬಳಕೆಯಲ್ಲಿ ಬಹಳಷ್ಟು ವಿವಿಧ ಕನ್ನಡ ಪ್ರಕಾರಗಳಿವೆ. ನಾವು ಮಾತಾನುಡುವುದು ಕನ್ನಡ ಪುಸ್ತಕದ ಕನ್ನಡ. ಪಠ್ಯ ಪುಸ್ತಕದಲ್ಲಿ ಇರುವಂತೆಯೇ ಮಾತನಾಡುತ್ತೇವೆ. ಇಲ್ಲಿ ಬೇರೆ ಭಾವನೆಗಳಿಲ್ಲ. ಆದರೆ ಒಂದು ರೀತಿ ಯಲ್ಲಿ ನಮ್ಮ ಕನ್ನಡ ಬೆಳೆಯಲು ಕಾರಣ ಯಕ್ಷಗಾನ ಎಂದು ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ, ಯಕ್ಷಗಾನ ಕಲಾವಿದ ಡಾ.ಭಾಸ್ಕರಾನಂದ ಕುಮಾರ್ ಹೇಳಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಕೆಮ್ತೂರು ದೊಡ್ಡಣ್ಣ ಶೆಟ್ಟಿ ವೇದಿಕೆಯಲ್ಲಿ ಭಾನುವಾರ ಆಯೋಜಿಸಲಾದ ಉಡುಪಿ ತಾಲೂಕು 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಭೀಷ್ಮೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯಕ್ಷಗಾನದ ವಿದ್ವಾಂಸರು ಕನ್ನಡಕ್ಕೆ ಕೊಟ್ಟ ಕೊಡುಗೆ ಅಪೂರ್ವ. ಹೆಚ್ಚಿನ ಕರಾವಳಿಯ ಕನ್ನಡಿಗರಿಗೆ ರಾಮಾಯಣ, ಮಹಾಭಾರತ ಪುರಾಣ ಕಥೆಗಳು ತಿಳಿದುಕೊಳ್ಳಲು ಯಕ್ಷಗಾನವೇ ಮುಖ್ಯ ಕಾರಣ. ಆದುದರಿಂದ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಯಕ್ಷಗಾನದ ಕೊಡುಗೆ ಬಹಳ ಇದೆ ಎಂದು ಅವರು ತಿಳಿಸಿದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವ ಅವರು, ರಾಜ್ಯ ಸರಕಾರ ಕನ್ನಡ ಮಾಧ್ಯಮ ಶಾಲೆಗಳನ್ನು ಗಟ್ಟಿಯಾಗಿ ಕಟ್ಟುವಲ್ಲಿ ಸಂಪೂರ್ಣವಾಗಿ ಸೋತು ಹೋಗಿದೆ. ಇಂದಿನ ಪರಿವರ್ತನ ಕಾಲದಲ್ಲಿ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ಸರಿಯಾಗಿ ಸ್ಪಂದನೆ ದೊರೆಯುತ್ತಿಲ್ಲ. ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ಶಿಕ್ಷಕರಿಲ್ಲದೆ ಸೊರಗುತ್ತಿದೆ. ಇದರ ಪರಿಣಾಮ ಪ್ರತಿವರ್ಷ ಕನ್ನಡ ಶಾಲೆಗಳು ಮುಚ್ಚುತ್ತಿವೆ ಎಂದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ಮಾತನಾಡಿದರು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ತಿಲಕನಾಥ್ ಮಂಜೇಶ್ವರ, ಗೋಪಾಲ್ ಭಟ್ ಎಂ., ವಿಮಲಾ ಚಂದ್ರಶೇಖರ್, ಮರವಂತೆ ನಾಗರಾಜ್ ಹೆಬ್ಬಾರ್, ಲಕ್ಷ್ಮಿ ಹರಿಶ್ಚಂದ್ರ, ವಿಘ್ನೇಶ್ವರ ಅಡಿಗ, ಪಿ.ಎಂ.ವೇಣು ಗೋಪಾಲ್ ಹೆಬ್ಬಾರ್, ವಿಶ್ವೇಶ್ವರ ಅಡಿಗ, ವಿದ್ಯಾಲತಾ ಯು.ಶೆಟ್ಟಿ ಅವರಿಗೆ ಕಸಾಪ ಉಡುಪಿ ತಾಲೂಕು ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು.
ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಉಡುಪಿ ವಿಶ್ವನಾಥ ಶೆಣೈ, ಉಡುಪಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ, ಕರ್ಣಾಟಕ ಬ್ಯಾಂಕಿನ ರಮೇಶ್ ವೈದ್ಯ, ಕಸಾಪ ಉಡುಪಿ ತಾಲೂಕು ಗೌರವ ಸಲಹೆಗಾರ ಭುವನ ಪ್ರಸಾದ್ ಹೆಗ್ಡೆ ಮಾತನಾಡಿದರು.
ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕಸಾಪ ಉಡುಪಿ ತಾಲೂಕು ಗೌರವ ಕಾರ್ಯದರ್ಶಿ ರಂಜಿನಿ ವಸಂತ್, ಗೌರವ ಕೋಶಾಧ್ಯಕ್ಷ ರಾಜೇಶ್ ಭಟ್ ಪಣಿಯಾಡಿ ಉಪಸ್ಥಿತರಿದ್ದರು. ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಆಶಯ ನುಡಿಗಳನ್ನಾಡಿದರು.ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಕೊಡವೂರು ಸ್ವಾಗತಿಸಿದರು ಪೂರ್ಣಿಮಾ ಜನಾರ್ದನ್ ನಿರೂಪಿದರು. ಗೌರವ ಕಾರ್ಯದರ್ಶಿ ಜನಾರ್ಧನ್ ಕೊಡವೂರು ವಂದಿಸಿದರು. ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕವಾ೯ಲು ಸನ್ಮಾನಿತರನ್ನು ಪರಿಚಯಿಸಿದರು.


