ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು (CJI) ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣ ‘ಎಕ್ಸ್’ (X)ನಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿದೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಹಾಗೂ ವಿಪುಲ್ ಎಂ. ಪಂಚೋಲಿ ಅವರಿದ್ದ ಪೀಠವು ಈ ಆದೇಶ ನೀಡಿದ್ದು, "ಸಂವಿಧಾನವೇ ಸರ್ವೋಚ್ಚ. ನ್ಯಾಯಾಂಗದ ಸ್ವಾತಂತ್ರ್ಯವು ರಾಜಕೀಯ ಅನುಕೂಲಕ್ಕೆ ಬಳಸುವ ವಿಷಯವಲ್ಲ. ತೀರ್ಪುಗಳನ್ನು ಟೀಕಿಸಲು ಅವಕಾಶವಿದ್ದರೂ, ನ್ಯಾಯಾಂಗದ ಅಧಿಕಾರವನ್ನು ದುರ್ಬಲಗೊಳಿಸಲು ಅಥವಾ ಬೆದರಿಕೆ ಹಾಕಲು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗುರಾಣಿಯಾಗಿ ಬಳಸಲು ಸಾಧ್ಯವಿಲ್ಲ" ಎಂದು ಕಡಕ್ ಎಚ್ಚರಿಕೆ ನೀಡಿದೆ.
ಈ ಕೃತ್ಯದ ವಿರುದ್ಧ ಕ್ರಿಮಿನಲ್ ಅಥವಾ ಸಿವಿಲ್ ನ್ಯಾಯಾಂಗ ನಿಂದನೆ ಅನ್ವಯವಾಗುವುದೇ ಎಂದು ಪರಿಶೀಲಿಸಲು ಹಿರಿಯ ವಕೀಲರೊಬ್ಬರನ್ನು ‘ಅಮಿಕಸ್ ಕ್ಯೂರಿ’ಯಾಗಿ ನೇಮಿಸಲಾಗಿದ್ದು, ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರ ನೆರವನ್ನೂ ಕೋರಲಾಗಿದೆ.
ಅಕ್ಟೋಬರ್ 12 ರಂದು ಕೆಪಿಸಿಸಿಯ ಅಧಿಕೃತ ಖಾತೆಯಲ್ಲಿ ಪೋಸ್ಟ್ ಆಗಿದ್ದ ಈ ಪೋಸ್ಟ್ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಡಿಲೀಟ್ ಮಾಡಲಾಗಿತ್ತು ಹಾಗೂ ಇದಕ್ಕೆ ಕಾರಣರಾದವರನ್ನು ಪಕ್ಷದಿಂದ ತೆಗೆದುಹಾಕಲಾಗಿದೆ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿತ್ತು.




