ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ತಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ಚರ್ಚೆಗಳ ನಡುವೆಯೇ, "ಮುಂದೆ ಸಮಯ ಕೂಡಿಬರಲಿದ್ದು, ಎಲ್ಲವೂ ಸರಿಹೋಗಲಿದೆ" ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಕುರಿತು ಪ್ರಮುಖ ವಿಷಯಗಳನ್ನು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ನಡುವಿನ ಬಾಂಧವ್ಯ: "ನನ್ನ ವಿರುದ್ಧ ಇಡಿ ದಾಳಿಯಾದಾಗ ಯತೀಂದ್ರ ಸಿದ್ದರಾಮಯ್ಯ ಅವರು ಮನೆಗೆ ಬಂದು ಭೇಟಿಯಾಗಿದ್ದರು. ನಮ್ಮ 'ಅಹಿಂದ' ಕಲ್ಪನೆ ಒಂದೇ ಆಗಿದ್ದು, ಇಬ್ಬರೂ ಮತ್ತೆ ಒಂದಾಗುವ ಸಮಯ ಬಂದೇ ಬರುತ್ತದೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ, ಸಿದ್ದರಾಮಯ್ಯ ಅವರ ಮೇಲಿರುವ ಜವಾಬ್ದಾರಿಯನ್ನು ಸ್ಮರಿಸಿದ ಅವರು, ಪಕ್ಷದಲ್ಲಿ ಎಲ್ಲಾದರೂ ಗೊಂದಲ ಅಥವಾ ಗಾಯಗಳಾಗಿದ್ದರೆ ಅದನ್ನು ಸರಿಪಡಿಸಬೇಕಿದೆ ಎಂದರು.
ಜಾತಿ ಗಣತಿ ವರದಿ: ಜಾತಿ ಗಣತಿ ವಿಚಾರವು ಪ್ರಸ್ತುತ ಸರ್ಕಾರದ ಹಂತದಲ್ಲಿ ಚರ್ಚೆಯಲ್ಲಿದ್ದು, ವರದಿ ಸಾರ್ವಜನಿಕವಾಗಿ ಅನುಷ್ಠಾನಗೊಳ್ಳಬೇಕಿದೆ. ಈ ವಿಷಯದಲ್ಲಿ ಎಲ್ಲರ ಉದ್ದೇಶವೂ ಒಂದೇ ಆಗಿದೆ ಎಂದು ತಿಳಿಸಿದರು.
ಸಿಎಂ ಬದಲಾವಣೆ ಚರ್ಚೆ: ಕಾಂಗ್ರೆಸ್‌ನಲ್ಲಿ 3ನೇ ಸಿಎಂ ಆಗಲಿದ್ದಾರೆ ಎಂಬ ವದಂತಿಯನ್ನು ತಳ್ಳಿಕಾಕಿದ ಅವರು, "ಡಿಕೆ ಶಿವಕುಮಾರ್ ಅವರು ಸಿಎಂ ಆಗಿ ಆರು ತಿಂಗಳಷ್ಟೇ ಆಗಿದೆ. ಸರ್ಕಾರ ನಡೆಸಲು ಅವರಿಗೆ ಸಮಯ ಬೇಕು. ಡಿಕೆಶಿ ಅವರೇ ಸಿಎಂ ಆಗಿ ಮುಂದುವರಿಯಲಿದ್ದು, ಅವರನ್ನು ಕೆಳಗಿಳಿಸುವ ಸನ್ನಿವೇಶ ಬರುವುದಿಲ್ಲ," ಎಂದರು.
ಪಕ್ಷದ ಆಂತರಿಕ ವಿಚಾರಗಳು: ಕೆ.ಎನ್. ರಾಜಣ್ಣ ಅವರ ಹೇಳಿಕೆಗೂ ವಾಸ್ತವಕ್ಕೂ ವ್ಯತ್ಯಾಸವಿದ್ದು, ಅವರು ಕಾಂಗ್ರೆಸ್‌ನಲ್ಲೇ ಇರುತ್ತಾರೆ. ರಾಜಣ್ಣ ಪಕ್ಷ ತೊರೆಯಲಿ ಎಂಬ ಸಚಿವ ಬಾಲಕೃಷ್ಣ ಹೇಳಿಕೆ ಹಾಗೂ ಪರಿಷತ್ ಸೋಲಿನ ಕುರಿತು ಕೆಪಿಸಿಸಿ ಅಧ್ಯಕ್ಷರು, ಸಿಎಂ ಮತ್ತು ಹೈಕಮಾಂಡ್ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.




