ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಾ ಬಂದಿರುವ ಜೆಡಿಎಸ್, ಇದೀಗ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆದಿದೆ ಎನ್ನಲಾದ ಕಿಟ್ ಖರೀದಿ ಹಗರಣವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಟ್ವಿಟರ್ (X) ಮೂಲಕ ಸರ್ಕಾರವನ್ನು ಪ್ರಶ್ನಿಸಿರುವ ಜೆಡಿಎಸ್, ಇದು "ಕಾರ್ಮಿಕರ ಕಲ್ಯಾಣ ಮಂಡಳಿಯೋ" ಅಥವಾ ಕಾಂಗ್ರೆಸ್ ಸರ್ಕಾರದ "ಕಮಿಷನ್ ಕಲ್ಯಾಣ ಮಂಡಳಿಯೋ" ಎಂದು ಲೇವಡಿ ಮಾಡಿದೆ.
ಹಗರಣದ ಲೆಕ್ಕಾಚಾರ ಬಿಚ್ಚಿಟ್ಟ ಜೆಡಿಎಸ್:
ಕಾರ್ಮಿಕರಿಗೆ ವಿತರಿಸುವ ಕಿಟ್‌ಗಳ ಖರೀದಿಯಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ ಎಂದು ಜೆಡಿಎಸ್ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ:
ಕಿಟ್‌ನ ನೈಜ ಬೆಲೆ: ₹1,378, ಸರ್ಕಾರ ಪಾವತಿಸಿದ ಬೆಲೆ: ₹3,300 ಒಟ್ಟು ಲೂಟಿ ಮೊತ್ತ: ₹12.91 ಕೋಟಿ
"ಬಡವರ ಹೆಸರಿನಲ್ಲಿ ತಮ್ಮ ಜೇಬು ತುಂಬಿಸಿಕೊಳ್ಳುವ ಜಾಣತನ ಕಾಂಗ್ರೆಸ್ಸಿಗರಿಗೆ ಚನ್ನಾಗಿ ಕರಗತವಾಗಿದೆ" ಎಂದು ಜೆಡಿಎಸ್ ಆಕ್ರೋಶ ಹೊರಹಾಕಿದೆ.
ಲೋಕಾಯುಕ್ತ ತನಿಖೆ: ಸರ್ಕಾರದ ಮೌನಕ್ಕೆ ಪ್ರಶ್ನೆ
ಈ ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ (ಕಾನೂನು ಕ್ರಮ) ಅನುಮತಿ ನೀಡುವಂತೆ ಲೋಕಾಯುಕ್ತರು ಕೋರಿ 9 ತಿಂಗಳು ಕಳೆದರೂ ರಾಜ್ಯ ಸರ್ಕಾರ ಇನ್ನು ಏಕೆ ಮೌನವಾಗಿದೆ ಎಂದು ಜೆಡಿಎಸ್ ಪ್ರಶ್ನಿಸಿದೆ.
"ಮಾಜಿ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ, ಭ್ರಷ್ಟರನ್ನು ರಕ್ಷಿಸುವ ಕೆಲಸ ಮಾಡುತ್ತಿರುವುದು ನಿಮ್ಮದೇ ಕಮಿಷನ್ ಪಾಲಿನ ರಕ್ಷಣೆಗಾ?" ಎಂದು ಜೆಡಿಎಸ್ ನೇರವಾಗಿ ಪ್ರಶ್ನಿಸುವ ಮೂಲಕ ಸರ್ಕಾರದ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.



