ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
"ಬೀದಿಯಿಂದ ವಿಧಾನಸಭೆಯವರೆಗೆ ಹೋರಾಟ ನಡೆಸಿ, ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಗಟ್ಟಿ ಬುನಾದಿ ಹಾಕಿದ ಬಿ.ಎಸ್. ಯಡಿಯೂರಪ್ಪ ಅವರು ದೇಶದ ಅಪ್ರತಿಮ ರೈತ ನಾಯಕ. ಸಾರ್ವಜನಿಕ ಜೀವನದಲ್ಲಿ 50 ವರ್ಷಗಳ ಅವರ ಸಾಧನೆ ಸುವರ್ಣಾಕ್ಷರಗಳಲ್ಲಿ ಬರೆಯುವಂಥದ್ದು" ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣ್ಣಿಸಿದರು.
ನಗರದ ಮಾದಾರ ಚನ್ನಯ್ಯ ಗುರುಪೀಠದ ಆವರಣ ಪಕ್ಕದಲ್ಲಿ ನಡೆದ ಬಿ.ಎಸ್. ಯಡಿಯೂರಪ್ಪನವರ 50 ವರ್ಷಗಳ ಸಾರ್ವಜನಿಕ ಸೇವೆಯ ಸಾರ್ಥಕ 'ಅಭಿಮಾನೋತ್ಸವ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮದಕರಿ ನಾಯಕನ ವೀರಭೂಮಿಗೆ ನಮನ:
"ಇದು ಮದಕರಿ ನಾಯಕ ಮತ್ತು ಓಬವ್ವನ ವೀರಭೂಮಿ. ಇಲ್ಲಿ ತೀಮ್ ಪಾರ್ಕ್ ನಿರ್ಮಿಸುವ ಭರವಸೆಯನ್ನು ಈ ಹಿಂದೆಯೇ ನೀಡಲಾಗಿತ್ತು. ಆದರೆ ಪ್ರಸ್ತುತ ಇರುವ ಕಾಂಗ್ರೆಸ್ ಸರ್ಕಾರ ಇದನ್ನು ಮಾಡಿಲ್ಲ. ಅದರ ಬಗ್ಗೆ ಚಿಂತೆ ಬೇಡ, ಪ್ರಧಾನಿ ಮೋದಿ ಅವರು ಆ ಯೋಜನೆಯನ್ನು ಪೂರ್ಣಗೊಳಿಸಲಿದ್ದಾರೆ" ಎಂದು ಭರವಸೆ ನೀಡಿದರು.
ಮಾರ್ಗದರ್ಶಕ ಶಕ್ತಿ ಬಿಎಸ್‌ವೈ:
"ಸಮಾಜದ ಎಲ್ಲ ಜಾತಿಗಳ ಸ್ವಾಮೀಜಿಗಳು ಇಲ್ಲಿ ಬಂದು ಆಶೀರ್ವದಿಸುತ್ತಿರುವುದೇ ಯಡಿಯೂರಪ್ಪನವರ ಅತಿದೊಡ್ಡ ಸಾಧನೆ. ಅವರು ಎರಡು ರೀತಿಯ ನಾಯಕತ್ವವನ್ನು ತೋರಿಸಿದ್ದಾರೆ. ತಮ್ಮ ಹಾದಿಯನ್ನು ತಾವೇ ನಿರ್ಮಿಸಿಕೊಳ್ಳುವುದು ಮತ್ತು ಇತರರಿಗೆ ದಾರಿದೀಪವಾಗುವುದು. ರಾಜ್ಯವನ್ನು ಸೈಕಲ್ ಮೇಲೆ ಸುತ್ತಿ ಪಕ್ಷ ಕಟ್ಟಿದ ಅವರ ಇಚ್ಛಾಶಕ್ತಿ ಅಪಾರ" ಎಂದು ತಿಳಿಸಿದರು.
ಕಾರ್ಯಕರ್ತರಿಗೆ ಕಿವಿಮಾತು: "ಯುವ ಕಾರ್ಯಕರ್ತರು ಬಿಎಸ್‌ವೈ ಅವರಿಂದ ಸಂಘಟನೆ ಕುರಿತು ಪಾಠ ಕಲಿಯಬೇಕು. ಜನ ಎಲ್ಲೇ ಸಮಸ್ಯೆ ಹೇಳಿದರೂ ಅದನ್ನು ಡೈರಿಯಲ್ಲಿ ಬರೆದಿಟ್ಟುಕೊಂಡು ಪರಿಹರಿಸುವ ಅವರ ಕಾಳಜಿ ನಮಗೆಲ್ಲ ಮಾದರಿ. ಅಧಿಕಾರಕ್ಕಾಗಿ ಅವರು ಎಂದೂ ಹಪಹಪಿಸಲಿಲ್ಲ, ಮಂತ್ರಿಮಂಡಲ ಬೇಡ ಎಂದು ತ್ಯಾಗ ಮಾಡಿದ ದೊಡ್ಡ ಗುಣ ಅವರದ್ದು" ಎಂದು ಶಾ ಸ್ಮರಿಸಿದರು.
ಬಂಗಾಳ ವಿಜಯದ ಸಂಭ್ರಮ: ಬಂಗಾಳದಲ್ಲಿ ಬಿಜೆಪಿ ಸಿದ್ಧಾಂತಕ್ಕೆ ಸಿಕ್ಕ ಜಯದ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅಮಿತ್ ಶಾ, "ಬಂಗಾಳದಲ್ಲಿ ನಮ್ಮ ವಿಚಾರಧಾರೆಗಳಿಗೆ ಬಹುದೊಡ್ಡ ಜಯ ಸಿಕ್ಕಿದೆ. ಇದಕ್ಕಾಗಿ ಬಂಗಾಳದ ಜನತೆಗೆ ನಾನು ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ. ಈ ಸಂಭ್ರಮದ ಧ್ವನಿ ದೇಶಾದ್ಯಂತ ಮೊಳಗಲಿ," ಎಂದು ಅಮಿತ್ ಶಾ ಅವರು ಕರೆ ನೀಡಿದರು.
ರೈತರ ಆಶಾಕಿರಣ: "ರೈತರ ಕಲ್ಯಾಣವೇ ರಾಜ್ಯದ ಕಲ್ಯಾಣ ಎಂದು ನಂಬಿದವರು ಬಿಎಸ್ ವೈ. ಅವರಿದ್ದಾಗ ರೈತರು ನಿರಾಳವಾಗಿದ್ದರು. ಅವರ ಮುಂದಿನ ಜೀವನ ಯಶಸ್ವಿಯಾಗಿರಲಿ ಮತ್ತು ಯುವ ಪೀಳಿಗೆಗೆ ಅವರ ಮಾರ್ಗದರ್ಶನ ಸದಾ ಇರಲಿ," ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಯಡಿಯೂರಪ್ಪನವರ ಸುದೀರ್ಘ ರಾಜಕೀಯ ಪಯಣವನ್ನು ಕೊಂಡಾಡಿದ ಅಮಿತ್ ಶಾ, ಭಾರತ ಮಾತೆಯ ಸೇವೆಯೇ ನಮ್ಮ ಪರಮ ಗುರಿ ಎಂದು ಪುನರುಚ್ಚರಿಸಿದರು.
ಈ ಕಾರ್ಯಕ್ರಮವು ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಆವರಣದಲ್ಲಿ ನಡೆದಿದ್ದು, ಲಕ್ಷಾಂತರ ಅಭಿಮಾನಿಗಳು ಭಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಯಡಿಯೂರಪ್ಪನವರ ಜೀವನ ಕುರಿತ 'ಕೆಂದಾವರೆ-ಕಮಲ ಅರಳಿದ ಕಥೆ' ಮತ್ತು 'ಸದನ ಶಿಕಾರಿ' ಎಂಬ ಎರಡು ಪುಸ್ತಕಗಳನ್ನು ಅಮಿತ್ ಶಾ ಬಿಡುಗಡೆ ಮಾಡಿದರು.


