ಬಾನಂಗಳದಲ್ಲಿ ಗ್ರಹಗಳ ಪಥಸಂಚಲನ ಲೇಖನ-ಡಾ. ಉಮರ ಫಾರೂಕ್‌ ಜೆ. ಮೀರಾನಾಯಕ

News Desk

ಚಂದ್ರವಳ್ಳಿ ನ್ಯೂಸ್, ಹೊಸದುರ್ಗ
ಜನೇವರಿ ೨೬ ರ ಗಣರಾಜ್ಯೋತ್ಸವದ ಪಥಸಂಚಲನವನ್ನು ನೋಡಿರುವ ನಮಗೆಲ್ಲ ಇದೀಗ ಮತ್ತೊಂದು ಪರೇಡ್‌ ನೋಡುವ ಅವಕಾಶವಿದೆ. ಆದರೆ ಇದು  ಮಕ್ಕಳು ಅಥವಾ ಪೋಲಿಸರು ನಡೆಸುವ ಪಥಸಂಚಲನವಲ್ಲ ಬದಲಾಗಿ ಬಾನಂಗಳದಲ್ಲಿ ಗ್ರಹಗಳ ಪಥಸಂಚಲನ. ಹೌದು  ಇಳಿ ಸಂಜೆಯಲ್ಲಿ ನಿಮ್ಮೆಲ್ಲರನ್ನು ರಂಜಿಸಲು ಸಾಲಾಗಿ ನಿಲ್ಲುವ ಸರದಿ ಈಗ ಗ್ರಹಗಳದ್ದು!

- Advertisement - 

ಆಕಾಶ, ನಕ್ಷತ್ರ, ಚಂದ್ರ, ಸೂರ್ಯ, ಮಂಗಳ, ಹೀಗೆ ಬಾಹ್ಯಾಕಾಶದ ಕುರಿತಾದ ಮನುಷ್ಯನ ಕೌತುಕಗಳು ಒಂದೆರಡಲ್ಲ. ಮಾನವ ಚಂದ್ರನ ಅಂಗಳಕ್ಕೆ ಹೋಗಿ ಬಂದದ್ದಾಯಿತು, ಮಂಗಳನ ಅಂಗಳಕ್ಕೂ ರೋಬೋಟ್‌ ಗಳ ಮೂಲಕ ಲಗ್ಗೆ ಇಟ್ಟಿದ್ದು  ಆಯ್ತು. ಅಷ್ಟು ಮಾತ್ರವಲ್ಲದೇ ಕೊತ ಕೊತ ಕುದಿಯುವ ಅಂಗಾರಕನ ಹತ್ತಿರಕ್ಕೂ ಅಮೇರಿಕಾ, ಪಾರ್ಕರ್‌ ಸೋಲಾರ್‌ ಪ್ರೋಬ್‌ ಹಾಗೂ ಭಾರತ, ಆದಿತ್ಯ ಎಲ್-‌೧ ನೌಕೆಗಳನ್ನು ಕಳುಹಿಸುವ ಮೂಲಕ ಸೂರ್ಯನ ಒಡಲಾಳದ ಕುತೂಹಲಗಳನ್ನೆಲ್ಲ ಕಲೆಹಾಕಿದ್ದೂ ಆಯ್ತು.

- Advertisement - 

 ಮನುಷ್ಯನ ಕುತೂಹಲಗಳನ್ನು ಸದಾ ಕಾಲ ತನಿಸುವಂತಹ ಬೃಹತ್ತ ಆಗರ ಈ ಬಾಹ್ಯಾಕಾಶ.  ರಾತ್ರಿ ಚಂದದ ಆಕಾಶದಲ್ಲಿ ತಲೆ ಎತ್ತಿ ನೋಡಿದರೆ ಅದೊಂದು ವರ್ಣಮಯ ಲೋಕ. ನಕ್ಷತ್ರಗಳ ಚಿತ್ತಾರ. ಚೆಂದದ ಚಂದ್ರಮ, ಬಗೆ ಬಗೆಯ ಗ್ರಹಗಳು, ನಕ್ಷತ್ರ ಪುಂಜಗಳು ನೋಡುಗರ ಕಣ್ಣಿಗೆ ಹಬ್ಬ. ಇದೀಗ ಇಂತಹದ್ದೇ ಮತ್ತೊಂದು ವಿಸ್ಮಯಕ್ಕೆ ಬಾಹ್ಯಾಕಾಶ ಸಾಕ್ಷಿಯಾಗಲಿದೆ.

೨೦೨೫ರ ಹೊಸ ವರುಷದ ಮೊದಲ ತಿಂಗಳು ಬಾಹ್ಯಾಕಾಶ ವೀಕ್ಷಕರ ಕಣ್ಣಿಗೆ ಹಬ್ಬವೇ ಸರಿ.   ಕಾರಣ, ಸೌರ ಮಂಡಲದ ಬಹುತೇಕ ಗ್ರಹಗಳು ಏಕ ಕಾಲಕ್ಕೆ ಒಂದೇ ಕಡೆ ನೋಡಲು ಸಿಗಲಿವೆ.  ಜನೆವರಿ ೨೧ ರಿಂದ ಫೆಬ್ರುವರಿ ೨೧ ರವರೆಗೂ ಆಕಾಶದಲ್ಲಿ ಗ್ರಹಗಳ  ಪ್ರದರ್ಶನ ನಡೆಯಲಿದೆ. ಸೂರ್ಯಾಸ್ತದ ಬಳಿಕ ನಾವೆಲ್ಲರು ನಮ್ಮ ಮನೆಯಿಂದ ಹೊರ ಬಂದು ಆಕಾಶದತ್ತ ತಲೆ ಎತ್ತಿ ನೋಡದರೆ ಸಾಕು ಸಾಲುಗಟ್ಟಿ ನಿಂತಿರುವ ಗ್ರಹಗಳ ವಿಸ್ಮಯ ಲೋಕ ನಮ್ಮೆಲ್ಲರ ಕಣ್ಣಿಗೆ ಹಬ್ಬವಾಗಲಿದೆ.

- Advertisement - 

ಸೌರಮಂಡಲ:
ಸೌರಮಂಡಲದಲ್ಲಿರುವ ಎಂಟು ಗ್ರಹಗಳಾದ ಬುಧ, ಶುಕ್ರ,  ಭೂಮಿ, ಮಂಗಳ, ಗುರು, ಶನಿ, ಯುರೇನೆಸ್‌, ನೆಪ್ಚೂನ್‌ ಗ್ರಹಗಳ ಪೈಕಿ ಭೂಮಿಯಿಂದ ನೋಡಿದರೆ ಗ್ರಹಗಳು ಸಾಲುಗಟ್ಟಿ ನಿಂತಿರುವ ಮನಮೋಹಕ ದೃಶ್ಯ ಕಾಣಸಿಗಲಿದೆ. ಈ ಎಂಟು ಗ್ರಹಗಳ ಪೈಕಿ ಶುಕ್ರ, ಮಂಗಳ, ಗುರು, ಶನಿ, ಗ್ರಹಗಳನ್ನು ಬರೀಗಣ್ಣಿನಿಂದಲೇ ನೋಡಬಹುದಾಗಿದ್ದು ಇನ್ನೆರಡು ಗ್ರಹಗಳಾದ ನೆಪ್ಚೂನ್ ಮತ್ತು ಯುರೇನಸ್   ಭೂಮಿಯಿಂದ ಅತ್ಯಂತ ದೂರವಿರುವುದರಿಂದ ಈ ಗ್ರಹಗಳನ್ನು ನೋಡಲು ದೂರದರ್ಶಕದ ಸಹಾಯ ಬೇಕಾಗುತ್ತದೆ. 

ವೈಜ್ಞಾನಿಕ ಹಿನ್ನಲೆ:
ಇದೊಂದು ಅಪರೂಪದ ವಿದ್ಯಮಾನವಾಗಿದ್ದು. ಸೌರ ಮಂಡಲದ ಎಲ್ಲ ಗ್ರಹಗಳು ಸೂರ್ಯನ ಒಂದು ಕಡೆಗೆ ಬರುವುದರಿಂದ ಭೂಮಿಯಿಂದ ನೋಡುವ ನಮಗೆ ಎಲ್ಲ ಗ್ರಹಗಳು ಒಂದೇ ಸಾಲಿನಲ್ಲಿ ಸಾಲುಗಟ್ಟಿ ನಿಂತಿರುವಂತೆ ಭಾಸವಾಗುತ್ತವೆ. ಸಾಮಾನ್ಯವಾಗಿ ಸೌರ ಮಂಡಲದ ಎಲ್ಲ ಗ್ರಹಗಳು ಸೂರ್ಯನ ಸುತ್ತ ತಮ್ಮ ತಮ್ಮ ಕಕ್ಷೆಗಳಲ್ಲಿ ಸುತ್ತುತಿರುತ್ತವೆ. ಎಲ್ಲ ಗ್ರಹಗಳು ವಿಭಿನ್ನ ಕಕ್ಷೆ ಹಾಗೂ ದೂರದಲ್ಲಿರುವುದರಿಂದ ಅವುಗಳು ಸೂರ್ಯನ ಸುತ್ತ ಸುತ್ತುವ ಅವಧಿಯಲ್ಲಿಯೂ ಸಾಕಷ್ಟು ವ್ಯತ್ಯಾಸವಿದೆ. ಹಾಗಾಗಿ ದಿನ ನಿತ್ಯ ಎಲ್ಲ ಗ್ರಹಗಳನ್ನು ಒಂದೇ ಸಾಲಿನಲ್ಲಿ ನೋಡುವ ಅವಕಾಶ ನಮಗೆ ಸಿಗುವುದಿಲ್ಲ. ಆದರೆ ೨೦೨೫ ರ ಜನೇವರಿ ೨೧ ರಿಂದ ಫೆಬ್ರುವರಿ ೨೧ ರ ಅವಧಿಯಲ್ಲಿ ಈ ಎಲ್ಲ ಗ್ರಹಗಳು ಸೂರ್ಯನ ಒಂದು ಬದಿಯಲ್ಲಿ ಸಂಚರಿಸುತ್ತಿರುವುದರಿಂದ ಭೂಮಿಯಿಂದ ನೋಡುವ ನಮಗೆ ಈ ಎಲ್ಲ ಗ್ರಹಗಳು ಒಂದೇ ಸಾಲಿನಲ್ಲಿ ನಿಂತಿರುವಂತೆ ಕಾಣಿಸುತ್ತದೆಯೇ ಹೊರತು ನಿಜ ಅರ್ಥದಲ್ಲಿ ಗ್ರಹಗಳು ಸಾಲಾಗಿ ಒಂದೇ ರೇಖೆಯಲ್ಲಿ ಬರುವುದಿಲ್ಲ.

ಗ್ರಹಗಳು ಸೂರ್ಯನಿಂದ ದೂರ
ಬುಧ 57 ಮಿಲಿಯನ್ ಕಿ.ಮೀ.
ಶುಕ್ರ 108 ಮಿಲಿಯನ್ ಕಿ.ಮೀ.
ಭೂಮಿ 149 ಮಿಲಿಯನ್ ಕಿ.ಮೀ.
ಮಂಗಳ 227 ಮಿಲಿಯನ್ ಕಿ.ಮೀ.
ಗುರು 778 ಮಿಲಿಯನ್ ಕಿ.ಮೀ.
ಶನಿ 1427 ಮಿಲಿಯನ್ ಕಿ.ಮೀ.
ಯುರೇನೆಸ್ 2873ಮಿಲಿಯನ್ ಕಿ. ಮೀ.
ನೆಪ್ಚೂನ್ 4497 ಮಿಲಿಯನ್ ಕಿ.ಮೀ.

ಗ್ರಹಗಳ ವೀಕ್ಷಣೆ:
ಈ ಅಚ್ಚರಿಯ ವಿದ್ಯಮಾನವನ್ನು ನೀವು ನೋಡಬೇಕೆಂದರೆ, ನೀವು ವಾಸಿಸುವ ಜಾಗ ಬೆಳಕಿನ ಮಾಲಿನ್ಯ ರಹಿತವಾಗಿದ್ದರೆ ಬಹಳ ಅನುಕೂಲಕರ. ವಾಯು ಮಾಲಿನ್ಯ ಅತಿಯಾಗಿರುವ ಪ್ರದೇಶಗಳಲ್ಲಿ ರಾತ್ರಿ ಆಕಾಶವು ದಟ್ಟ ಹೊಗೆಯಿಂದ ಕೂಡಿರುವುದರಿಂದ ಆಕಾಶ ವೀಕ್ಷಣೆಗೆ ಅಡಚಣೆ ಉಂಟಾಗುತ್ತದೆ. ಅಲ್ಲದೇ ಮೋಡ ಕವಿದಿರುವ ವಾತಾವರಣ ವಿದ್ದರಂತೂ ಆಕಾಶ ವೀಕ್ಷಣೆ ಬಲು ಕಷ್ಟ. ರಾತ್ರಿ ಆಕಾಶವು ಶುಭ್ರ ವಾತಾವರಣ ದಿಂದ ಕೂಡಿದ್ದರೆ  ಆಕಾಶ ವೀಕ್ಷಣೆಗೆ ಅನುಕೂಲಕರವಾಗಿರುತ್ತದೆ. ನಿಮ್ಮ ಬಳಿ ದೂರದರ್ಶಕ ಯಂತ್ರವಿದ್ದರಂತೂ ಎಲ್ಲ ಗ್ರಹಗಳ ಮೇಲ್ಮೈಯನ್ನು ಸುಲಭವಾಗಿ ನೋಡಿ ಬಿಡಬಹುದಾದಂತಹ ಅವಕಾಶ ನಿಮ್ಮದಾಗುತ್ತದೆ.

ಗ್ರಹಗಳ ಗುರುತಿಸುವಿಕೆ ಹೇಗೆ:
ಸಾಮಾನ್ಯವಾಗಿ ಪ್ರತಿ ದಿನ ರಾತ್ರಿಯಲ್ಲೂ ನೀವು ಎಲ್ಲ ಗ್ರಹಗಳನ್ನೂ ನೋಡಬಹುದಾಗಿದೆ.    ಆದರೆ ಅವುಗಳ ಗುರುತಿಸುವಿಕೆ ಅವುಗಳಿರುವ ದಿಕ್ಕುಗಳ ಬಗೆಗೆ ಸ್ಪಷ್ಟ ಮಾಹಿತಿ ಇದಕ್ಕೆ ಬೇಕಾಗುವುದು. ಸಾಮಾನ್ಯರಿಗೆ ಇದು ಸ್ವಲ್ಪ ಕಷ್ಟದ ವಿಷಯ. ಒಟ್ಟಿಗೆ ಆಕಾಶದತ್ತ ನೋಡಿದರೆ ನಕ್ಷತ್ರಗಳು, ಗ್ರಹಗಳು ಎರಡು ಕಾಣುವುದರಿಂದ ಅದರಲ್ಲಿ ನಕ್ಷತ್ರ ಯಾವುದು ಗ್ರಹ ಯಾವುದು ಎಂದು ಗುರುತಿಸಲು ಕಷ್ಟ ಎನಿಸಬಹುದು. ಇದಕ್ಕೆ ಸರಳ ಉಪಾಯವೆಂದರೆ ಪಳ ಪಳನೇ ಹೊಳೆಯುವ ಆಕಾಶಕಾಯವನ್ನು ನಕ್ಷತ್ರವೆಂದು ಗುರುತಿಸಬಹುದು. ಅದೇ ರೀತಿಯಾಗಿ ಯಾವ ಆಕಾಶಕಾಯ ಹೊಳೆಯುವುದಿಲ್ಲವೋ ಅದನ್ನು ಗ್ರಹ ಎಂದು ನೀವು ಸುಲಭವಾಗಿ ಗುರುತಿಸಬಹುದು. ಇದೀಗ ಎಲ್ಲ ಗ್ರಹಗಳು ಒಂದೇ ಕಡೆಗೆ ಒಂದೇ ದಿಕ್ಕಿನಲ್ಲಿ ನೋಡಲು ಸಿಗುತ್ತಿರುವುದರಿಂದ ಜನ ಸಾಮಾನ್ಯರೂ ಕೂಡ ಈ ಗ್ರಹಗಳನ್ನು  ಯಾವ ಸಾಧನಗಳಿಲ್ಲದೆಯೇ ಗುರುತಿಸಿ ನೋಡಿ ಆನಂದಿಸಬಹುದಾಗಿದೆ.

ಮೊಬೈಲ್ ಆ್ಯಪ್ ಗಳು:
ಹಾಗೊಂದು ವೇಳೆ ವಿಶಾಲವಾದ ಆಕಾಶದಲ್ಲಿ ಹರಡಿಕೊಂಡಿರುವ ನಕ್ಷತ್ರಗಳ ಮಧ್ಯ ಗ್ರಹಗಳನ್ನು ಗುರುತಿಸುವುದು ಕಷ್ಟವಾದರೇ ನಿಮ್ಮ ಸಹಾಯಕ್ಕೆಂದು ಅನೇಕ ತಂತ್ರಾಂಶಗಳೂ ಕೂಡ ಮೊಬೈಲ್ ನಲ್ಲಿ ಲಭ್ಯ ಇವೆ. star walk, Star Tracker, and Sky Map ನಂತಹ ಆ್ಯಪ್ ಗಳ ಮೂಲಕ ಆಕಾಶದಲ್ಲಿರುವ ಗ್ರಹಗಳು ಹಾಗೂ ನಕ್ಷತ್ರಗಳನ್ನು ಗುರುತಿಸಬಹುದು ಮತ್ತು ಅದಕ್ಕೆ ಸಂಬಂಧಿತ ವಿವರಗಳನ್ನು ಕೂಡ ಪಡೆಯಬಹುದು.
ಲೇಖನ-ಡಾ. ಉಮರ ಫಾರೂಕ್‌ ಜೆ. ಮೀರಾನಾಯಕ, ಹೊಸದುರ್ಗ.

 

 

 

 

 

 

 

                     ಚಿತ್ರ:  ಆ್ಯಪ್ ಗಳ ಮೂಲಕ ಗ್ರಹಗಳ ಗುರುತಿಸುವಿಕೆ.

Share This Article
error: Content is protected !!
";