ಚಂದ್ರವಳ್ಳಿ ನ್ಯೂಸ್, ಬೆಂಗಳೂರು : ಹಾಸನ ಜಿಲ್ಲೆ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಜೆಡಿಎಸ್‌ನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಪ್ರಕರಣದ ವಿಚಾರಣೆಯನ್ನು ನಡೆಸಿದ್ದು, ಗೌಪ್ಯ ವಿಚಾರಣೆಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿಗಳಿಂದ ಆದೇಶ ಪಡೆಯಲಾಗುವುದು ಎಂದು ತಿಳಿಸಿದೆ.
ಸಂತ್ರಸ್ತೆಯರ ಖಾಸಗಿತನ ಕಾಪಾಡುವ ದೃಷ್ಟಿಯಿಂದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿಗಳನ್ನು ಗೌಪ್ಯವಾಗಿ ವಿಚಾರಣೆ ನಡೆಸುವಂತೆ ರಾಜ್ಯ ಸರ್ಕಾರ ಕಳೆದ ವಿಚಾರಣೆಯಲ್ಲಿ ಕೋರಿತ್ತು. ಇದನ್ನು ಪರಿಶೀಲಿಸುವುದಾಗಿ ನ್ಯಾಯಾಲಯ ಹೇಳಿತ್ತು.
ಪ್ರಜ್ವಲ್ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದಾರೆ. “ನಮಗೆ ಆರೋಪ ಪಟ್ಟಿ ನೀಡಿಲ್ಲ. ಆರೋಪ ಪಟ್ಟಿ ನೀಡಬೇಕು” ಎಂದು ಹೇಳಿದ್ದಾರೆ. “ವಿಚಾರಣಾಧೀನ ನ್ಯಾಯಾಲಯ ಸಂಜ್ಞೇ ಪರಿಗಣಿಸಿದ ಬಳಿಕ ನಿಮಗೆ ಆರೋಪ ಪಟ್ಟಿ ನೀಡಲಿದೆ” ಎಂದು ಪೀಠ ಹೇಳಿದೆ.
“ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿರುವುದೇ ಸರಿಯಲ್ಲ. ಮೊದಲಿಗೆ ದೂರಿನಲ್ಲಿ ಅತ್ಯಾಚಾರ ಆರೋಪ ಇರಲಿಲ್ಲ. ವಿಚಾರಣಾ ಹಂತದಲ್ಲಿ ಅತ್ಯಾಚಾರ ಆರೋಪ ಮಾಡಲಾಗಿದೆ” ಎಂದು ಅವರ ಪರ ವಕೀಲರು ವಾದಿಸಿದ್ದಾರೆ.