ಸಂಶೋಧನೆ, ಉನ್ನತ ಶಿಕ್ಷಣಕ್ಕೆ ಆದ್ಯತೆ ಅವಶ್ಯ: ಪ್ರೊ.ಶಶಿಧರ

News Desk

ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಆರೋಗ್ಯ, ಆದಾಯ ತೆರಿಗೆ ಮತ್ತು ಆರ್ಥಿಕ ಕ್ಷೇತ್ರಗಳ ಸುಧಾರಣೆಗೆ ಆದ್ಯತೆ ನೀಡಿರುವ ಕೇಂದ್ರ ಸರ್ಕಾರವು ಉನ್ನತ ಶಿಕ್ಷಣ, ಸಂಶೋಧನೆಗೆ ನಿರಾಸಕ್ತಿ ತೋರಿದೆ. ಇದರಿಂದ ಶೈಕ್ಷಣಿಕ ವಲಯದ ಅಭಿವೃದ್ಧಿಗೆ ಹಿನ್ನಡೆಯಾದಂತಾಗಿದೆ.

ಈ ಬಾರಿ ಬಜೆಟ್‌ನಲ್ಲಿ ವಿಕಸಿತ್-ಭಾರತ್ ೨೦೪೭ರ ಪರಿಕಲ್ಪನೆ ಸ್ಪಷ್ಟವಾಗಿ ಕಾಣುತ್ತಿದೆ. ಐಐಟಿಗಳಿಗೆ ನೀಡುವ ಉತ್ತೇಜನವನ್ನು ಗ್ರಾಮೀಣ ಭಾಗದ ಉನ್ನತ ಶಿಕ್ಷಣ ವಲಯಕ್ಕೂ ಅದರಲ್ಲೂ ಮುಖ್ಯವಾಗಿ ಸಮಾಜ ವಿಜ್ಞಾನ ಅಧ್ಯಯನಕ್ಕೆ ಅವಕಾಶ ಹೆಚ್ಚಿಸಬೇಕಾಗಿತ್ತು.

ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಿ, ಉನ್ನತ ತಂತ್ರಜ್ಞಾನ, ಸ್ಟಾರ್ಟ್ಅಪ್ ಹಾಗೂ ಉದ್ಯಮಶೀಲತೆಗೆ ಆದ್ಯತೆ ನೀಡಿದೆ. ಇದಕ್ಕೆ ಪೂರಕವಾಗಿ ಶಿಕ್ಷಣ ಮತ್ತು ಸಂಶೋಧನೆಗೆ ಹೆಚ್ಚಿನ ಅನುದಾನ ಮೀಸಲಿಟ್ಟಿದ್ದರೆ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗುತ್ತಿತ್ತು. ಮಧ್ಯಮ ವರ್ಗದ ಹಿತರಕ್ಷಣೆಗೆ ಒತ್ತು ನೀಡಿದ್ದರೂ ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಅವಕಾಶ ನೀಡಬೇಕಾಗಿತ್ತು ಎಂದು ದಾವಣಗೆರೆ ವಿಶ್ವವಿದ್ಯಾನಿಲಯ ವ್ಯವಹಾರ ನಿರ್ವಹಣಾ ಅಧ್ಯಯನ ವಿಭಾಗಪ್ರಾಧ್ಯಾಪಕರು ಮತ್ತು ಡೀನ್ ಪ್ರೊ.ಆರ್.ಶಶಿಧರ ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ವಲಯವನ್ನು ಅಭಿವೃದ್ಧಿ, ತೆರಿಗೆ ಸುಧಾರಣೆಗಳ ಮೂಲಕ ಮಧ್ಯಮ ವರ್ಗದ ಆದಾಯ ತೆರಿಗೆ ಪಾವತಿದಾರರಿಗೆ ಹೊರೆ ಸ್ವಲ್ಪ ಕಡಿಮೆಯಾಗಲಿದೆ. ಇದಕ್ಕೆ ಪೂರಕವಾಗಿ ಮುಂಬರುವ ಸಂಸತ್ ಅಧಿವೇಶನಲ್ಲಿ ಹೊಸ ಆದಾಯ ತೆರಿಗೆ ಬಿಲ್ ಮಂಡಿಸುವ ಭರವಸೆ ನೀಡಿದ್ದು ಆಶಾದಾಯಕವಾಗಿದೆ. ಆರ್ಥಿಕ ವಲಯ ಅಭಿವೃದ್ಧಿಗೊಳಿಸುವ ದೂರದೃಷ್ಟಿತ್ವ ಮತ್ತು ಜಾಗತಿಕವಾಗಿ ಭಾರತ ಪೈಪೋಟಿಗೆ ಸಜ್ಜುಗೊಳಿಸುವ ಪ್ರಯತ್ನವಾಗಿದೆ.

ಅಲ್ಲದೆ ವಿತ್ತೀಯ ಕೊರತೆಯನ್ನು ಶೇ ೪.೪ರಷ್ಟು ಕಡಿಮೆ ಮಾಡುವ ಗುರಿ ಹೊಂದಿರುವುದು ಅನುಷ್ಠಾನಗೊಂಡರೆ ದಿನನಿತ್ಯದ ಬಳಕೆ ಸಾಮಗ್ರಿಗಳ ಬೆಲೆಯೂ ಕಡಿಮೆಯಾಗುವ ವಿಶ್ವಾಸವಿದೆ.
ಆರೋಗ್ಯ ಕ್ಷೇತ್ರಕ್ಕೆ ಈ ಬಾರಿ ವಿಶೇಷ ಆದ್ಯತೆ ನೀಡಲಾಗಿದೆ. ವೈದ್ಯಕೀಯ ಸಂಶೋಧನೆಗಳಿಗೆ ಮನ್ನಣೆ ನೀಡಿರುವ ಕಾರಣ ಕಾರ್ಮಿಕ ವರ್ಗ, ಮಹಿಳೆಯರು, ದುರ್ಬಲ ವರ್ಗದವರು, ಹಿರಿಯರ ಆರೋಗ್ಯ ರಕ್ಷಣೆಗೆ ಗಮನ ನೀಡಿದ್ದು ಒಳ್ಳೆಯ ನಿರ್ಧಾರ. ಉತ್ಪಾದನೆಯನ್ನು ಪ್ರೇರೇಪಿಸಲು ಉತ್ಪಾದನಾ ಉತ್ತೇಜನಾ ಯೋಜನೆ ಜಾರಿಗೊಳಿಸುವುದು ಉತ್ತಮ ಬೆಳವಣಿಗೆ.

ಮೇಕ್ ಫಾರ್‌ಇಂಡಿಯ, ಮೇಕ್ ಫಾರ್ ವರ್ಲ್ಡ್ಶೀರ್ಷಿಕೆಯಲ್ಲಿ ಕೌಶಲ್ಯಾಭಿವೃದ್ಧಿ ಯೋಜಿಸಲು ಐದು ರಾಷ್ಟ್ರೀಯ ಉತ್ಕೃಷ್ಟತೆ ಕೇಂದ್ರಗಳನ್ನು ಸ್ಥಾಪಿಸುವ ಕುರಿತು ಪ್ರಸ್ತಾಪಿಸಲಾಗಿದೆ. ಸೆಂಟರ್ ಆಫ್ ಎಕ್ಸ್ಲೆನ್ಸ್ ಮೂಲಕ ಕೃತಕ ಬುದ್ಧಿಮತ್ತೆ ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ೫೦೦ ಕೋಟಿ ಅನುದಾನ ನೀಡಿದ್ದು ಉತ್ಪಾದನಾ ವಲಯದಲ್ಲಿ ಹೊಸ ಪರಿವರ್ತನೆ ನಿರೀಕ್ಷಿಸಲಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯ ವ್ಯವಹಾರ ನಿರ್ವಹಣಾ ಅಧ್ಯಯನ ವಿಭಾಗಪ್ರಾಧ್ಯಾಪಕರು ಮತ್ತು ಡೀನ್ ಪ್ರೊ.ಆರ್.ಶಶಿಧರ ಅಭಿಪ್ರಾಯಪಟ್ಟಿದ್ದಾರೆ.

 

 

- Advertisement -  - Advertisement -  - Advertisement - 
Share This Article
error: Content is protected !!
";