ಸಿದ್ದರಾಮಯ್ಯ ಎಂದರೆ ದೇಹವೊಂದು, ನಾಲಿಗೆ ಎರಡು!!

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಪ್ರಧಾನಮಂತ್ರಿ ಹೆಚ್.ಡಿ ದೇವೇಗೌಡರ
ಗರಡಿಯಲ್ಲೇ ಬೆಳೆದು ರಾಜಕೀಯ ಬದುಕು ಕಟ್ಟಿಕೊಂಡ ಸಿದ್ದರಾಮಯ್ಯನವರು ಇಬ್ಬಗೆಯ ನೀತಿ ಬಗ್ಗೆ ಆಣಿಮುತ್ತು ಉದುರಿಸಿದ್ದಾರೆ! ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.

 ಆಣಿಮುತ್ತು ಉದುರಿಸುವ ಭರದಲ್ಲಿ ತಾವೇನು? ತಮ್ಮ ನಿಜಬಣ್ಣವೇನು ಎಂಬುದನ್ನು ಮತ್ತೊಮ್ಮೆ ಲೋಕಾರ್ಪಿತ ಮಾಡಿದ್ದಾರೆ! ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಸಿದ್ದರಾಮಯ್ಯನವರು ಎಂದರೆ ಹಾಗೆಯೇ.. ದೇಹವೊಂದು, ನಾಲಿಗೆ ಎರಡು!! ದೇವೇಗೌಡರು ಸಕ್ರಿಯ ರಾಜಕಾರಣದಲ್ಲಿದ್ದಾರೆ. ಅವರ ಬಗ್ಗೆ ಸಿದ್ದರಾಮಯ್ಯನವರು ಸಹಜ, ಸಕಾರಾತ್ಮಕ ಟೀಕೆ ಮಾಡಲಿ. ಬೇಡ ಎಂದವರು ಯಾರು? ಆದರೆ, ಅದೇ ನಿತ್ಯಕೃಷಿ ಎಂಬಂತೆ ನಿರಂತರವಾಗಿ ರಾಜಕೀಯ ಜನ್ಮಕೊಟ್ಟ ಮೇರು ನಾಯಕನ ಬಗ್ಗೆಯೇ ವಿಷಕಾರುವುದು ಎಷ್ಟು ಸರಿ? ಎಂದು ಖಾರವಾಗಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯನವರು ಜನತಾ ಪರಿವಾರದಲ್ಲಿದ್ದಾಗ ಇಂದಿರಾ ಗಾಂಧಿ ಅವರ ಬಗ್ಗೆ ಉದುರಿಸಿದ್ದ ಭಾರೀ ಭಾರೀ ಆಣಿಮುತ್ತುಗಳನ್ನು ಜೀರ್ಣಿಸಿಕೊಳ್ಳಲು ಕಾಂಗ್ರೆಸ್ ನಾಯಕರಿಂದ ಸಾಧ್ಯವಿದೆಯಾ
?

ಇಂದಿರಾ ಗಾಂಧಿ ಅವರು ನಮ್ಮ ನಡುವೆ ಇಲ್ಲ. ಹೀಗಾಗಿ ಅವರ ಬಗ್ಗೆ ಸಿದ್ದರಾಮಯ್ಯನವರು ಉದುರಿಸಿದ್ದ ಆಣಿಮುತ್ತುಗಳನ್ನು ಉಲ್ಲೇಖಿಸುವುದು ಅಪ್ರಸ್ತುತ.

ಕೊನೆಪಕ್ಷ, ಹುದ್ದೆಯ ಶಿಷ್ಟಾಚಾರಕ್ಕಾದರೂ ಕಟ್ಟುಬಿದ್ದು ಸಿಎಂ ಅವರು ತಮ್ಮ ನಾಲಿಗೆಗೆ ಆಚಾರ ಕಲಿಸಿಕೊಳ್ಳದಿದ್ದರೆ ಅವರು ಹಿಂದೆ ಉದುರಿಸಿದ್ದ ಎಲ್ಲಾ ಆಣಿಮುತ್ತುಗಳನ್ನು ಹೆಕ್ಕಿಹೆಕ್ಕಿ ಇಡಲಾಗುವುದು ಎಂದು ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ಹೌದು.. ನರೇಂದ್ರ ಮೋದಿ ಅವರ ನಿರ್ಣಯದ ಜಾತಿ ಗಣತಿಯನ್ನು ಜೆಡಿಎಸ್ ಸ್ವಾಗತಿಸಿದೆ. ಸಿದ್ದರಾಮಯ್ಯನವರೇ, ನಿಮ್ಮ ಜಾತಿಗಣತಿಯನ್ನು ಜೆಡಿಎಸ್ ವಿರೋಧಿಸಿಲ್ಲ, ನೆನಪಿರಲಿ. ಆದರೆ; ನಿಮ್ಮ ಗಣತಿ ಕ್ರಮಬದ್ಧವಾಗಿಲ್ಲ ಎಂಬ ಕಾರಣಕ್ಕೆ ವಿರೋಧಿಸಿದೆ. ಅದು ಸುಳ್ಳು ಅಂಕಿ-ಅಂಶಗಳ ಕಾಗಕ್ಕಗುಬ್ಬಕ್ಕನ ಕಥೆ ಎಂಬುದನ್ನು ಜನರಿಗೆ ತಿಳಿಸಿದೆ.

ನಿಮ್ಮ ಗಣತಿಗಾರುಡಿ ಎಲ್ಲರಂತೆ ನಮಗೂ ಅರ್ಥವಾಗಿದೆ. ನಿಮ್ಮದೇ ಪಕ್ಷದ ಶಾಸಕರು, ಸಚಿವರು ನಿಮ್ಮ ಗಣತಿಯ ಬಾಲ-ಬುಡ ಹಿಡಿದು ಬೀದಿಬೀದಿಯಲ್ಲಿ ಅಲ್ಲಾಡಿಸುತ್ತಿದ್ದಾರೆ. ನಿಮ್ಮ ಸರ್ಕಾರದ ಬುಡವನ್ನೂ ಸಹ..ಏನಂತೀರಿ..? ಎಂದು ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

 

 

Share This Article
error: Content is protected !!
";