ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದಿನ ಬೆಳಗಾದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಆತ್ಮವಿಶ್ವಾಸವನ್ನು ಸಿದ್ದರಾಮಯ್ಯ ಬಣದವರು ಕುಗ್ಗಿಸುತ್ತಿದ್ದಾರೆ. ಸಿಎಂ ಆಗಿಯೇ ಸಿದ್ಧ ಎಂದು ತೊಡೆ ತಟ್ಟಿರುವ ಡಿಕೆಶಿ ವಿರುದ್ಧ ಸಚಿವರನ್ನು ಛೂ ಬಿಡಲಾಗಿದೆ ಎಂದು ಬಿಜೆಪಿ ಆರೋಪ ಮಾಡಿದೆ.
ವಲಸೆ ಕಾಂಗ್ರೆಸ್ಸಿಗ ಸಿದ್ದರಾಮಯ್ಯ ಅವರು ಸಿಎಂ ಆಗಿರುವುದು ಮೂಲ ಕಾಂಗ್ರೆಸ್ಸಿಗರಿಗೆ ಒಪ್ಪಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ಸಿಗೆ ವಲಸೆ ಬಂದ ಸಿದ್ದರಾಮಯ್ಯ ಅವರೇ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ನಿರಂತರವಾಗಿ ಮುಖ್ಯಮಂತ್ರಿ ಆಗುತ್ತಿರುವುದನ್ನು ಡಿಕೆಶಿ ಬಣಕ್ಕೆ ಸಹಿಸಲಾಗುತ್ತಿಲ್ಲ ಎಂದು ಬಿಜೆಪಿ ತಿಳಿಸಿದೆ.
ಪಕ್ಷಕ್ಕೆ ತನು-ಮನ-ಧನ ಅರ್ಪಿಸಿರುವ ಮೂಲ ಕಾಂಗ್ರೆಸ್ಸಿಗ ಡಿಕೆಶಿ ಅವರು ಈ ಬಾರಿಯಾದರೂ ಮೂಲ ಕಾಂಗ್ರೆಸ್ಸಿಗರು ಸಿಎಂ ಆಗಬೇಕು ಎಂಬ ಜಿದ್ದಿಗೆ ಬಿದ್ದಿದ್ದಾರೆ. ಡಿಕೆಶಿಯ ಜಿದ್ದಿಗೆ ಬೆದರಿರುವ ಸಿದ್ದರಾಮಯ್ಯ ತನ್ನ ಬಣದ ಸಚಿವರನ್ನು ಮುಂದೆ ಬಿಟ್ಟು ಡಿಕೆಶಿಯನ್ನು ಕಟ್ಟಿ ಹಾಕುತ್ತಿದ್ದಾರೆ.
ಹೀಗಾಗಿಯೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಎರಡೆರಡು ಹುದ್ದೆಯ ಬೇಡಿಕೆಯನ್ನು ಹೈಕಮಾಂಡ್ ಮುಂದಿಟ್ಟು ಡಿಕೆಶಿಯವರನ್ನು ಅಸಹಾಯಕರನ್ನಾಗಿ ಮಾಡಲಾಗುತ್ತಿದೆ. ಕಾಂಗ್ರೆಸ್ಸಿನ ಬಣ ಬಡಿದಾಟದಿಂದಾಗಿ ರಾಜ್ಯದ ಅಭಿವೃದ್ಧಿ ಸ್ಥಗಿತವಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಎನ್ನುವ ಪದವೇ ಮರಿಚೀಕೆಯಾಗಿದೆ ಎಂದು ಬಿಜೆಪಿ ದೂರಿದೆ.