ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯುತ್ತಿದ್ದ ಶಿವಮೊಗ್ಗ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಭದ್ರಾವತಿ ಕಾಂಗ್ರೆಸ್‌ಶಾಸಕ ಬಿ.ಕೆ.ಸಂಗಮೇಶ್‌ಅವರ ಪುತ್ರ, ಕಾಂಗ್ರೆಸ್ ಪಕ್ಷದ ನೀಚ ಸಂಸ್ಕೃತಿ ಎಂಥದ್ದು, ಮಹಿಳೆಯರ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಇರುವ ಧೋರಣೆ ಎಂಥದ್ದು ಎನ್ನುವುದನ್ನ ಮತ್ತೊಮ್ಮೆ ಪ್ರದರ್ಶನ ಮಾಡಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರೇ, ತಮ್ಮ ಭ್ರಷ್ಟ ಸರ್ಕಾರದ ಕಿರುಕುಳಕ್ಕೆ ಈಗಾಗಲೇ ರಾಜ್ಯದಲ್ಲಿ 4-5 ಪ್ರಾಮಾಣಿಕ ಅಧಿಕಾರಿಗಳು, ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿಮ್ಮ ಭ್ರಷ್ಟಾಚಾರದ ದಾಹಕ್ಕೆ ರಾಜ್ಯದಲ್ಲಿ ಇನ್ನೆಷ್ಟು ಬಲಿಯಾಗಬೇಕು? ಎಂದು ಅಶೋಕ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಇಷ್ಟಕ್ಕೂ ಶಾಸಕರ ಪುತ್ರನಿಗೆ ಅಧಿಕಾರಿಯೊಂದಿಗೆ ಮಾತನಾಡಲು ಯಾವ ಹಕ್ಕಿದೆ? ಭದ್ರಾವತಿ ಕ್ಷೇತ್ರಕ್ಕೆ ಸಂಗಮೇಶ್ ಅವರು ಶಾಸಕರೋ ಅಥವಾ ಪಾಳೆಗಾರರೋ? ಅಥವಾ ರಾಹುಲ್ ಗಾಂಧಿ ಅವರು ತೋರಿಸುವ ಸಂವಿಧಾನದ ಪುಸ್ತಕದಲ್ಲಿ ಶಾಸಕರ ಮಕ್ಕಳಿಗೆ, ಕುಟುಂಬಸ್ಥರಿಗೂ ಅಧಿಕಾರವಿದೆಯೋ? ಎಂದು ಖಾರವಾಗಿ ಅಶೋಕ್ ಪ್ರಶ್ನಿಸಿದ್ದಾರೆ.
ಮಹಿಳೆಯರ ಮೇಲೆ ಕರ್ನಾಟಕ ಕಾಂಗ್ರೆಸ್ ಪಕ್ಷದ ಈ ದಬ್ಬಾಳಿಕೆ, ದೌರ್ಜನ್ಯವನ್ನ ನಾಡಿನ ಜನತೆ ಗಮನಿಸುತ್ತಿದ್ದಾರೆ. ಇದಕ್ಕೆಲ್ಲ ನಾಡಿನ ಮಹಿಳೆಯರು ತಕ್ಕ ಉತ್ತರ ಕೊಡುವ ದಿನ ಬಹಳ ದೂರವಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.