ಚಂದ್ರವಳ್ಳಿ ನ್ಯೂಸ್, ವಿಜಯನಗರ(ಹೊಸಪೇಟೆ):
ಕವಿತೆ ಶೋಷಿತರ ನೋವು, ನಲಿವುಗಳ ಪರ ನಿಲ್ಲುವಂತಿರಬೇಕು. ಕವಿ ಅವರ ಧ್ವನಿಯಾಗಬೇಕು. ಇಂದಿನ ಕವಿಗಳು ಚಾರಿತ್ರಿಕವಾಗಿ ಶೋಷಿತರಿಗೆ ಉಂಟಾದ ಅನ್ಯಾಯ ಪ್ರಶ್ನಿಸಿ, ಕವಿತೆಗಳ ಮೂಲಕ ಈ ಅನ್ಯಾಯವನ್ನು ಸರಿ ಮಾಡುವ ಮಾರ್ಗಗಳನ್ನು ಹುಡುಕುವ ಕೆಲಸ ಮಾಡಬೇಕು ಎಂದು ಕವಿ ಹಾಗೂ ವಿಮರ್ಶಕ ಕನ್ನಡ ಹಂಪಿ ವಿಶ್ವವಿದ್ಯಾಲಯದ ಡಾ. ವೆಂಕಟಗಿರಿ ದಳವಾಯಿ ಯುವಕವಿಗಳಿಗೆ ಸಲಹೆ ನೀಡಿದರು.
ಭಾನುವಾರ ಹಂಪಿ ಉತ್ಸವ- 2025 ರ ಅಂಗವಾಗಿ ಶ್ರೀ ವಿರೂಪಾಕ್ಷೇಶ್ವರ ದೇವಾಲಯ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ 3ನೇ ದಿನದ ಯುವ ಕವಿಗೋಷ್ಠಿ ಕಾರ್ಯಕ್ರಮವನ್ನು ಸ್ವರಚಿತ ಬುಡಕಟ್ಟು ಮಹಿಳೆ ಕಾವ್ಯ ಓದುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕವಿಯ ವಿಚಾರಧಾರೆ ಎಂದಿಗೂ ಪೂರ್ಣಗೊಳ್ಳುವುದಿಲ್ಲ. ನಿತ್ಯವು ಹೊಸತನವನ್ನು ಕವಿ ಹುಡುಕುತ್ತಿರಬೇಕು. ಅಂತಃದೃಷ್ಠಿ ಕಾಪಾಡಿಕೊಳ್ಳಬೇಕು. ಇನ್ನೊಬ್ಬರನ್ನು ದೂರುವ ಮುನ್ನ ಮೊದಲು ನಮ್ಮನ್ನು ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕು, ಅಂದಾಗಲೇ ನಮ್ಮ ಕವಿತೆಗೆ ಸಾರ್ವತ್ರಿಕತೆ ದೊರಕಿ ಬಹಳ ದಿನ ಉಳಿಯುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಎಂ. ಎಸ್. ದಿವಾಕರd ಮಾತನಾಡಿ, ಕವಿತೆ ಶ್ರೀಮಂತಿಕೆ ಜೀವನ ಇದ್ದಾಗ ಹುಟ್ಟುವದಿಲ್ಲ. ಅದು ಕಷ್ಟ ಇದ್ದಾಗ ಜನ್ಮತಾಳುತ್ತದೆ. ಯುವ ಕವಿತೆಗಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಹಂಪಿ ಉತ್ಸವದಲ್ಲಿ ಯುವ ಕವಿಗೋಷ್ಠಿಯನ್ನು ಆಯೋಜನೆ ಮಾಡಲಾಗಿದೆ. ಉತ್ಸವಕ್ಕೆ ಆಗಮಿಸಿದ ಲಕ್ಷಾಂತರ ಜನರನ್ನು ಚಿಂತನೆ ಹಚ್ಚುವ, ಅವರಲ್ಲಿ ಬದಲಾವಣೆ ತರುವ ಶಕ್ತಿ ಕವಿತೆಗಿದೆ. ಯುವ ಕವಿಗಳು ಈ ನಿಟ್ಟಿನಲ್ಲಿ ಕವಿತೆಗಳನ್ನು ರಚಿಸಬೇಕು ಎಂದು ಹೇಳಿದರು.
ಸಾಮಾಜಿಕ ಚಿಂತಕ ಮಧುರಚನ್ನಶಾಸ್ತ್ರಿ ಮಾತನಾಡಿ, ಹಂಪಿ ಉತ್ಸವದ ಕವಿಗೋಷ್ಠಿಗೆ ಹೆಸರು ಕೊಟ್ಟ ಎಲ್ಲಾ ಕವಿಗಳನ್ನು ಕವಿತೆ ವಾಚನಕ್ಕೆ ಆಯ್ಕೆ ಮಾಡಲಾಗಿದೆ. ಕರ್ನಾಟಕದ ಸಾಹಿತ್ಯದಲ್ಲಿ ವಚನ ಸಾಹಿತ್ಯಕ್ಕೆ ದೊಡ್ಡ ಸ್ಥಾನ ಇದೆ. 12 ಶತಮಾನದಿಂದ ಶರಣರು ತಮ್ಮ ಕಾಯಕ ಹಾಗೂ ವಚನಗಳ ಮೂಲಕ ಜಗತ್ತಿಗೆ ಒಳ್ಳೆಯ ಸಂದೇಶ ನೀಡಿದರು. ಅಂದಿನ ವಚನಗಳು ಇಂದಿಗೂ ಬಹಳ ಪ್ರಸ್ತುತವಾಗಿವೆ ಎಂದರು.
ಕವಿ ಡಾ. ಅಕ್ಕಿ ಬಸವೇಶ ಆಶಯ ನುಡಿಗಳನ್ನಾಡಿದರು. ಬಳ್ಳಾರಿ ವಿಶ್ವವಿದ್ಯಾಲಯದ ಡೀನ್ ಡಾ. ಮಂಜುನಾಥ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಚಿಂತಕ ಬಾಣದ ಮುರಳೀಧರ. ಶಾಲಾ- ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕರುಗಳಾದ ವೆಂಕಟೇಶ್ ರಾಮಚಂದ್ರಪ್ಪ, ಡಾ. ದಯಾನಂದ ಕಿನ್ನಾಳ. ಕವಿಗಳಾದ ಅಬ್ದುಲ್ ಹೈದರ್ ಸೇರಿದಂತೆ ಇತರೆ ಹಲವಾರು ಯುವ ಕವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಳ್ಳಾರಿ ಬಾಣಂತಿಯರ ಸಾವಿಗೆ ಸ್ಪಂದನೆ :
ಹಂಪಿ ಉತ್ಸವದಲ್ಲಿ ಯುವಕವಿ ಡಾ.ರವಿಚಂದ್ರ ‘ಹೆಸರಿಲ್ಲದ ಅನಾಥ’ ಎಂಬ ಶೀರ್ಷಿಕೆಯ ಕವಿತೆಯಲ್ಲಿ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಸಂಭವಿಸಿದ ಸರಣಿ ಬಾಣಂತಿಯರ ಸಾವಿಗೆ ಸ್ಪಂದನೆ ತೋರಿದರು.’ಜೀವ ಉಳಿಸುವ ಔಷಧಗಳೇ ವಿಷವಾಗಿ ಬದಲಾಗಿವೆ ಇಂದು’ ಎನ್ನುವ ಮೂಲಕ ಬೇಸರ ವ್ಯಕ್ತಪಡಿಸಿದರು. ಅನಾಥ ಮಗುವೊಂದು ಏಕಲವ್ಯನಂಥೆ ಶಿಲ್ಪಕಲೆಯ ಪ್ರಾವಿಣ್ಯ ಪಡೆದು, ನಾಡಿನ ಹೆಸರಾಂತ ದೇವಸ್ಥಾನಗಳ ವಿಗ್ರಹ , ಮಸೀದಿಗಳಲ್ಲಿ ಕಲ್ಲಿನ ಚಿತ್ತಾರ, ಚೆರ್ಚಗಳಲ್ಲಿ ಕಲಾಕೃತಿಗಳನ್ನು ಕೆತ್ತಿ ಸಾಧನೆ ತೋರಿದನ್ನು ಬಿಂಬಿಸಿತು.
ಎಡ ಚಿಂತಕರ ಲೇವಡಿ:
ಯುವ ಕವಿಯತ್ರಿ ಹೆಚ್.ಡಿ.ತೇಜವತಿ ವಾಚಿಸಿದ ‘ಪರಮಾತ್ಮನ ನುಡಿ’ ಕವಿತೆ ಎಡ ಚಿಂತಕರ ದಂದ್ವ ನಿಲುವು ಪ್ರಶ್ನಿಸಿ, ನಡೆ ನುಡಿಯಲ್ಲಿನ ಬೂಟಾಟಿಕೆ ಎತ್ತಿ ತೋರಿಸಿತು. ಎಡ ಚಿಂತಕರನ್ನು ನಕ್ಷತ್ರಿಕರ ದಂಡು ಎಂದು ಲೇವಡಿ ಮಾಡಿತು. ಶೋಷಿತರ ಸೋಗಿನಲ್ಲಿರುವ ಹಡೆ ಮುದಿರಿಕೊಂಡು ನಟಿಸುತ್ತಿರುವ ಘಟ ಸರ್ಪಗಳು ಎಂದು ಟೀಕಿಸಿತು.
ಹೆಣ್ಣಿನ ತಲ್ಲಣ ತೆರೆದಿಟ್ಟ ಫರ್ವಿನ್ ಬೇಗಂ:
ಕನಕಗಿರಿ ಪಟ್ಟಣ ಫರ್ವಿನ್ ಬೇಗಂ ರಚಿಸಿದ ಕವನ ಮದುವೆಯಾಗಿ ಸಂಸಾರ ತೂಗಿಸುತ್ತಿರುವ ಹೆಣ್ಣಿನ ತಲ್ಲಣವನ್ನು ಸಹೃದಯಿಗಳ ಮುಂದೆ ತೆರದಿಟ್ಟಿತು. ಗಂಡನ ಮುಂದೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಚಡಪಡಿಸುವ ಹೆಣ್ಣಿನ ಸ್ವಗತ ಕವನದಲ್ಲಿ ಮೂಡಿಬಂದಿದೆ. ನಿತ್ಯವು ಮದ್ಯದಮಲಿನಲಿ ಬಂದು ಮೇಲೆರಗುವ ಗಂಡನ ಸಹಿಸಿ, ತಣಿಸಿ ಅವಳ ದೇಹದ ಗರ್ಭವೇ ಗಾಯವಾಗಿದೆ. ಗಂಡನ ಗಂಡಸ್ತನದ ಹೂಂಕಾರಕೆ ಹೆಂಡತಿಯ ಶೋಕ ಕೇಳದಾಗಿದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿನ ಕೋಮಲ ಮನಸ್ಸು ಸಂಕಟದಲ್ಲಿ ಜೀವನ ಸಾಗಿಸುತ್ತಿದೆ. ಬದಲಾವಣೆ ಹಾಗೂ ಬಿಡುಗಡೆಗೂ ಎಡೆ ಇಲ್ಲದ ಸ್ಥಿತಿಯಲ್ಲಿ ಕನಸುಗಳೆ ಹೆಣ್ಣಿಗೆ ಆಸರೆಯಾಗಿವೆ.
ಕೊಪ್ಪಳದ ಕನ್ನಡ ಎಂ.ಎ. ವ್ಯಾಸಂಗ ಮಾಡುತ್ತಿರುವ ಪವನಕುಮಾರ್ ಮಡಿವಂತಿಕೆ ಆಲೋಚನೆ ತೊರೆದು ರಚಿಸಿದ ‘ಸೂಳೆಯ ಸ್ವಗತ’ ಎಂಬ ಕವನ ವಾಚಿಸುವ ಮೂಲಕ ಜನರ ಚಪ್ಪಾಳೆ ಗಿಟ್ಟಿಸಿದರು. ಶಿವಪ್ರಕಾಶ್ ಕಂಬೂರ್(ನರುಶಿ) ಅವರು ಗಜಲ್ ವಾಚಿಸಿದರು. ಹಂಪಿ ವೈಭವ, ಹಂಪಿ ಸ್ಥಳ ಮಹಿಳೆ, ಪ್ರೇಮ, ಸ್ತ್ರಿ ಪರ ಚಿಂತನೆ ರಚಿಸಿದ ಕವನಗಳನ್ನು ಉಳಿದ ಕವಿಗಳು ವಾಚಿಸಿದರು.