ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬ್ರಿಟಿಷರು ವಸಾಹತು ಕಾಲದ ಆರಂಭದಲ್ಲಿ ಮಿಲಿಟರಿ ಬಳಸಿ ಭಾರತೀಯರನ್ನು ಹತ್ತಿಕ್ಕದೆ ಇಲ್ಲಿಯ ಸಂಸ್ಕೃತಿ, ಇತಿಹಾಸ, ಸಂಪ್ರದಾಯ, ಜಾತಿ ವ್ಯವಸ್ಥೆ ತಿಳಿಯುವ ಹಾಗೂ ರಸ್ತೆ, ಸೇತುವೆ ನಿರ್ಮಿಸುವ ಶಾಲೆ ತೆರೆಯುವ ಇತ್ಯಾದಿ ಸಂವೇದನೆ ಮೂಲಕ ಭಾರತದ ಅಂತರಂಗವನ್ನು ಅರಿಯುವ ಕೆಲಸ ಮಾಡಿದರು ಎಂದು ಇತಿಹಾಸ ಸಂಶೋಧಕ ಪ್ರೊ.ಲಕ್ಷ್ಮಣ್ ತೆಲಗಾವಿ ಅಭಿಪ್ರಾಯಪಟ್ಟರು.
ಸಿವಿಜಿ ಪಬ್ಲಿಕೇಷನ್ಸ್ ಬೆಂಗಳೂರು, ತೇಜಸ್ ಇಂಡಿಯಾ, ಬಾಪೂಜಿ ಸಮೂಹ ವಿದ್ಯಾಸಂಸ್ಥೆಗಳು ಚಿತ್ರದುರ್ಗ, ಅಭಿರುಚಿ ಸಾಹಿತ್ಯಕ-ಸಾಂಸ್ಕೃತಿಕ ವೇದಿಕೆ ಚಿತ್ರದುರ್ಗದ ಆಶ್ರಯದಲ್ಲಿ ಶನಿವಾರ ಸಂಜೆ ನಗರದ ಐಎಂಎ ಹಾಲ್ ನಲ್ಲಿ ಹಿರಿಯೂರಿನ ಪ್ರೊ.ಎಂ.ಜಿ. ರಂಗಸ್ವಾಮಿಯವರ ಐದು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಆಂಗ್ಲ ಅಧಿಕಾರಿ ಆರ್.ಎಸ್.ಡಾಬ್ಸ್‌ರ ಆಡಳಿತದಲ್ಲಿ ಹಿರಿಯೂರು ತಾಲ್ಲೂಕಿನಲ್ಲಿ ಮೂರು ಕಡೆಗಳಲ್ಲಿ ಸೇತುವೆ ನಿರ್ಮಿಸಲಾಯಿತು. ತುಮಕೂರಿನಿಂದ ಸಿರಾ-ಹಿರಿಯೂರು-ಚಿತ್ರದುರ್ಗ-ದಾವಣಗೆರೆ ಮೂಲಕ ರಸ್ತೆ ನಕಾಸೆ ನಿಗದಿಗೊಳಿಸಿ ಹೆದ್ದಾರಿ (ರಾ.ಹೆ.೪೮) ನಿರ್ಮಿಸಲಾಯಿತು. ಹಾಗೂ ಹಿರಿಯೂರಿನಿಂದ ಬಳ್ಳಾರಿವರೆಗೆ ಮತ್ತೊಂದು ಹೆದ್ದಾರಿ ನಿರ್ಮಿಸಲಾಯಿತು.
ಬ್ರಿಟಿಷರ ಆಡಳಿತದ ಅವಧಿಯಲ್ಲಿ ದೇಶದ ಸಂಪತ್ತು ಲೂಟಿಯಾಗಿದ್ದು, ನಿಜವಾದರೂ ಕಬ್ಬನ್, ಬೌರಿಂಗ್, ಆರ್.ಎಸ್.ಡಾಬ್ಸ್ ರಂತಹ ಜನಪರ ಕಾಳಜಿಯ ಅಧಿಕಾರಿಗಳಿಂದ ಸಾಕಷ್ಟು ಸುಧಾರಣೆಗಳನ್ನು ಜಾರಿಗೆ ತರಲಾಯಿತು. ವೃತ್ತಿಪರ ಕಳ್ಳರ ದಮನ, ಕಾಡುಪ್ರಾಣಿಗಳ ಹತೋಟಿ, ಶಿಕ್ಷಣಕ್ಕೆ ಆದ್ಯತೆ ನೀಡಲಾಯಿತು. ಚಿತ್ರದುರ್ಗ ವಿಭಾಗದ ಮೊದಲ ಸೂಪರಿಂಟೆಂಡೆಂಟ್ (ಜಿಲ್ಲಾಧಿಕಾರಿ) ಎಂಬ ಖ್ಯಾತಿಗೆ ಭಾಜನರಾಗಿರುವ ಡಾಬ್ಸ್ ಮಾರಿಕಣಿವೆ ಬಳಿ ವೇದಾವತಿ ನದಿಗೆ ಅಡ್ಡಲಾಗಿ ಒಂದು ಜಲಾಶಯ ನಿರ್ಮಿಸಬೇಕೆಂದು ಆತ ನೀಲನಕ್ಷೆ, ಅಂದಾಜುಪಟ್ಟಿ ಸಿದ್ಧಪಡಿಸಿ ಸತತ ಹತ್ತು ವರ್ಷಗಳ ಕಾಲ ಮದ್ರಾಸ್ ಪ್ರೆಸಿಡೆನ್ಸಿ ಜೊತೆ ಪತ್ರವ್ಯವಹಾರ ನಡೆಸಿದ್ದು ಆತನ ಜನಪರ ಕಾಳಜಿಯ ಪ್ರತೀಕವಾಗಿದೆ. ಈ ಎಲ್ಲಾ ಅಂಶಗಳು ಪ್ರೊ.ಎಂ.ಜಿ. ರಂಗಸ್ವಾಮಿ ಅನುವಾದಿಸಿರುವ ‘ಡಾಬ್ಸ್ ಆಡಳಿತದ ನೋಟಗಳು’ ಕೃತಿಯಲ್ಲಿ ಅಡಕವಾಗಿವೆ. ಇಷ್ಟಾದರೂ ಮೊದಲ ಜಿಲ್ಲಾಧಿಕಾರಿಯ ಪ್ರತಿಮೆಯನ್ನು ಜಿಲ್ಲೆಯ ಯಾವ ಕಡೆಯಲ್ಲೂ ನಿರ್ಮಿಸದಿರುವುದು ಬಹುದೊಡ್ಡ ಲೋಪವಾಗಿದೆ. ಈ ಕೆಲಸ ಮಾಡಲು ಜನಪರ ಚಿಂತಕರು ಮುಂದಾಗಬೇಕು ಎಂದು ತೆಲಗಾವಿ ಕರೆ ನೀಡಿದರು.
ಸಾಹಿತಿ ಡಾ.ದೊಡ್ಡಮಲ್ಲಯ್ಯ ಮಾತನಾಡಿ, ದೇಶವನ್ನು ಸೂರೆ ಮಾಡಲು ಮುಂದಾದ ಆಂಗ್ಲರು ಹತ್ತಾರು ಅಭಿವೃದ್ಧಿ ಕಾರ್ಯಗಳನ್ನೂ ಮಾಡಿದ್ದಾರೆ. ತಂತ್ರಜ್ಞಾನದ ಪರಿಚಯ, ಶಿಕ್ಷಣ ನೀಡುವಂತದ ಕೆಲಸವನ್ನೂ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರೊ.ಎಂ.ಜಿ. ರಂಗಸ್ವಾಮಿಯವರ ಡಾಬ್ಸ್ ಆಡಳಿತದ ನೋಟಗಳು, ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನನ್, ದುರುಗ ಸೀಮೆ ಸಾಧಕರು, ಹಿರಿಯೂರು ಸೀಮೆ ಜನಪದ ದೈವಗಳು ಮತ್ತು ಮಾರಿಕಣಿವೆ ಮಡಿಲಲ್ಲಿ ಎಂಬ ಐದು ಕೃತಿಗಳನ್ನು ಪ್ರೊ.ಲಕ್ಷ್ಮಣ್ ತೆಲಗಾವಿ ಬಿಡುಗಡೆಗೊಳಿಸಿದರು.
ಜಾನಪದ ವಿದ್ವಾಂಸ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಾಪೂಜಿ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ.ಕೆ.ಎಂ.ವೀರೇಶ್, ಪ್ರೊ.ಹೆಚ್.ಲಿಂಗಪ್ಪ, ಕೃತಿಕಾರ ಪ್ರೊ.ಎಂ.ಜಿ. ರಂಗಸ್ವಾಮಿ ಮಾತನಾಡಿದರು. ಸಾಹಿತಿ ಡಾ.ಬಿ.ಎಲ್.ವೇಣು, ಸಾಹಿತಿ ಜಿ.ಎಸ್.ಉಜ್ಜನಪ್ಪ, ಪಿ.ಎನ್.ಕೃಷ್ಣ ಪ್ರಸಾದ್, ಪ್ರಕಾಶಕ ಡಾ.ಚನ್ನವೀರೇಗೌಡ, ಬಿ.ಎಲ್.ಗೌಡ, ಪಿ.ಎಚ್.ಚಿಕ್ಕಣ್ಣ, ಪ್ರೊ.ಪರಮೇಶ್ವರಪ್ಪ, ಯಾದವ ರೆಡ್ಡಿ, ಡಾ.ಅಶೋಕ್ ಕುಮಾರ್, ಡಾ.ಸಿ.ಶಿವಲಿಂಗಪ್ಪ, ಡಾ.ಧರಣೇಂದ್ರಯ್ಯ, ಉಪನ್ಯಾಸಕರಾದ ಎನ್.ದೊಡ್ಡಪ್ಪ, ನಾಗರಾಜ್ ಬೆಳಗಟ್ಟ, ಡಾ.ಎಸ್.ಎನ್.ಹೇಮಂತರಾಜು, ಡಾ.ತಿಪ್ಪೇಸ್ವಾಮಿ, ಡಾ.ಎನ್.ಎಸ್.ಮಹಂತೇಶ್, ಪ್ರೊ.ಕೆಂಚಪ್ಪ, ಎಸ್.ಎಚ್.ಶಫಿಉಲ್ಲಾ, ಜಬಿಉಲ್ಲಾ ಎಂ. ಅಸದ್ ಇತರರು ಉಪಸ್ಥಿತರಿದ್ದರು.