ಚಂದ್ರವಳ್ಳಿ ನ್ಯೂಸ್, ರಾಮನಗರ :
ಜೆಡಿಎಸ್ ರಾಜ್ಯಾಧ್ಯಕ್ಷ, ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಇತರರ ವಿರುದ್ಧದ ಭೂ ಒತ್ತುವರಿ ಆರೋಪ ಸಂಬಂಧ ಕೋರ್ಟ್ ಆದೇಶದ ಬೆನ್ನಲ್ಲೇ ಕಂದಾಯ ಇಲಾಖೆಯ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಹೈಕೋರ್ಟ್ ಖಡಕ್ ಸೂಚನೆ ಮೇರೆಕೆ ಒತ್ತುವರಿ ತೆರವು ಮಾಡಲು ಕಾರ್ಯಾಚರಣೆಗೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡುತ್ತಿದ್ದಾರೆ.
ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಿರುವ ಹೆಚ್.ಡಿ. ಕುಮಾರಸ್ವಾಮಿ ಅವರ ಬಿಡದಿ ಬಳಿಯ ಕೇತಗಾನಹಳ್ಳಿಯ ತೋಟಕ್ಕೆ ರಾಮನಗರ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಕೋರ್ಟ್ ಆದೇಶ ಹಾಗೂ ಒತ್ತುವರಿ ಸರ್ವೇ ವರದಿಯೊಂದಿಗೆ ಬೆಳಗ್ಗೆ ಆಗಮಿಸಿದರು. ಈ ವೇಳೆ ಉಪ ವಿಭಾಗಾಧಿಕಾರಿ ಬಿನೋಯ್ ಪಿ.ಕೆ, ತಹಶೀಲ್ದಾರ್ ತೇಜಸ್ವಿನಿ, ಸರ್ವೇ ಅಧಿಕಾರಿ ಹನುಮೇಗೌಡ, ಪೊಲೀಸರು ಸೇರಿದಂತೆ ಇತರ ಅಧಿಕಾರಿಗಳು ಕೂಡ ಹಾಜರಿದ್ದರು.
ಕೋರ್ಟ್ ಆದೇಶದ ಮೇರೆಗೆ ಕುಮಾರಸ್ವಾಮಿ ಸೇರಿ ಇತರರ ಭೂಮಿ ತೆರವು ಕಾರ್ಯಾಚರಣೆ ನಡೆಸಲು ಮುಂದಾಗಿದ್ದೇವೆ. ಹಲವರಿಗೆ ಸೇರಿರುವ 12 ಸರ್ವೇ ನಂಬರ್‌ಗಳ 15 ಎಕರೆಯಷ್ಟು ಜಾಗ ಒತ್ತುವರಿ ತೆರವು ಮಾಡಲಾಗುವುದು. ಒತ್ತುವರಿ ಬಳಿಕ ಕೋರ್ಟ್ಗೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಪ್ರಕರಣ ಸಂಬಂಧ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್ಐಟಿ ತಂಡ ರಚನೆ ಮಾಡಿ ತನಿಖೆಗೆ ಆದೇಶ ಕೂಡ ಮಾಡಿದ್ದರು. ಅದರಂತೆ ಬಿಡದಿಯ ಕೇತಗಾನಹಳ್ಳಿಯ ಸರ್ವೇ ನಂಬರ್ 7, 8, 9, 10, 16, 17 ಮತ್ತು 79ರಲ್ಲಿ ಸರ್ವೇ ಕಾರ್ಯ ಕೂಡ ಮಾಡಿ ವರದಿ ನೀಡಿದ್ದರು.
ಸರ್ವೇಯಲ್ಲಿ ಸುಮಾರು 15 ಎಕರೆ ಸರ್ಕಾರಿ ಭೂಮಿ ಒತ್ತುವರಿ ಆಗಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕಂದಾಯ ಹಾಗೂ ಸರ್ವೇ ಇಲಾಖೆಯಿಂದ ಜಂಟಿ ಸರ್ವೇ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಇಂದು ಒತ್ತುವರಿ ತೆರವು ಕಾರ್ಯಕ್ಕೆ ಮುಂದಾದ ಕಂದಾಯ ಇಲಾಖೆ ಅಧಿಕಾರಿಗಳು ಹೆಚ್.ಡಿ. ಕುಮಾರಸ್ವಾಮಿ ತೋಟದ ಮನೆಯ ಸುತ್ತಮುತ್ತಲಿನ ಒತ್ತುವರಿ ಜಾಗ ತೆರವಿಗೆ ಸಿದ್ಧತೆ ನಡೆಸಿದ್ದಾರೆ. ಹೆಚ್ಡಿ ಕುಮಾರಸ್ವಾಮಿ ಅವರ ತೋಟದ ಮನೆ ಮುಂದೆ ಜೆಸಿಬಿ ನಿಂತಿರುವುದು ಕಂಡುಬಂದಿದೆ.
“ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರಿಂದ ಕೇತಗಾನಹಳ್ಳಿಯಲ್ಲಿ ಒತ್ತುವರಿಯಾಗಿರುವ ಜಮೀನು ತೆರವುಗೊಳಿಸಿ ಅಂತ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೀಡಿರುವ ಆದೇಶ ಕುರಿತು ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಕುಮಾರಸ್ವಾಮಿ ಮಾಧ್ಯಮಗಳೊಂದಿಗೆ ಮಾತಾಡಿದ ಅವರು ತನ್ನಿಂದ ಯಾವುದೇ ಅಕ್ರಮ ನಡೆದಿಲ್ಲ, ಎರಡು ಸಲ ಮುಖ್ಯಮಂತ್ರಿಯಾಗಿದ್ದ ತನಗೆ ಕಾನೂನು ಬಾಹಿರ ಕೆಲಸ ಮಾಡುವ ಅವಶ್ಯಕತೆಯಿಲ್ಲ. 40 ವರ್ಷಗಳ ಹಿಂದೆ ತೆಗೆದುಕೊಂಡ ಜಮೀನು ಅದು, ಇದುವರೆಗೆ ನೂರಾರು ಬಾರಿ ತನಿಖೆ, ವಿಚಾರಣೆ ಆಗಿದೆ, ಸರ್ಕಾರದ ದಬ್ಬಾಳಿಕೆ ವಿರುದ್ಧ ಕಾನೂನಿನ ಚೌಕಟ್ಟನೊಳಗೆ ಹೋರಾಡುತ್ತೇನೆ”.
ಹೆಚ್.ಡಿ ಕುಮಾರಸ್ವಾಮಿ, ಕೇಂದ್ರ ಸಚಿವರು, ರಾಮನಗರ.