ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ಅತ್ಯಂತ ಜನಪ್ರಿಯ ಹಾಗೂ ಪ್ರಮುಖ ಐಷಾರಾಮಿ ಪ್ರವಾಸಿ ರೈಲು ‘ಗೋಲ್ಡನ್ ಚಾರಿಯಟ್’ 2026-27ರ ನೂತನ ಪ್ರವಾಸಿ ಋತುವಿನ ಯಾತ್ರೆಗಳನ್ನು ಅಕ್ಟೋಬರ್ 24ರಿಂದ ಹೊಸ ಮೆರುಗಿನೊಂದಿಗೆ ಆರಂಭಿಸಲಿದೆ. ವನ್ಯಜೀವಿ, ರಾಜವೈಭವ, ವಿಶ್ವ ಪರಂಪರೆ, ಕಾಫಿನಾಡು ಹಾಗೂ ಕರಾವಳಿಯ ವಿಶಿಷ್ಟ ಅನುಭವಗಳನ್ನು ಒಂದೇ ಐಷಾರಾಮಿ ಪಯಣದಲ್ಲಿ ಪ್ರವಾಸಿಗರಿಗೆ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಆತಿಥ್ಯದ ಗುಣಮಟ್ಟವನ್ನು ಹೆಚ್ಚಿಸುವುದು ಹಾಗೂ ದೇಶೀಯ ಮತ್ತು ಅಂತಾರಾಷ್ಟ್ರೀಯ ಐಷಾರಾಮಿ ಪ್ರವಾಸ ಮಾರುಕಟ್ಟೆಯಲ್ಲಿ ರೈಲಿನ ಸ್ಥಾನಮಾನವನ್ನು ಬಲಪಡಿಸುವುದಕ್ಕೆ ಈ ಬಾರಿ ವಿಶೇಷ ಆದ್ಯತೆ ನೀಡಲಾಗಿದೆ.
ಶೇಕಡಾ 100ರಷ್ಟು ಬುಕ್ಕಿಂಗ್ – 75 ಅತಿಥಿಗಳು ಭಾಗಿ: ಐದು ರಾತ್ರಿ ಹಾಗೂ ಆರು ದಿನಗಳ ಸುದೀರ್ಘ 'ಪ್ರೈಡ್ ಆಫ್ ಕರ್ನಾಟಕ' ಮೊದಲ ಐಷಾರಾಮಿ ಯಾತ್ರೆಗೆ ಶೇ. 100ರಷ್ಟು ಬುಕ್ಕಿಂಗ್ ದೊರೆತಿದೆ. ಈ ಯಾತ್ರೆಯಲ್ಲಿ ಒಟ್ಟು 75 ಅತಿಥಿಗಳು ಭಾಗವಹಿಸಲಿದ್ದು, ಅವರಿಗೆ ಅತ್ಯುತ್ತಮ ಆತಿಥ್ಯ ಹಾಗೂ ಸೇವೆಗಳನ್ನು ಒದಗಿಸಲು ರೈಲಿನಲ್ಲಿ ಸುಮಾರು 60 ಸಿಬ್ಬಂದಿ ಕಾರ್ಯಾಚರಿಸಲಿದ್ದಾರೆ.
ಒಂದೇ ಯಾತ್ರೆಯಲ್ಲಿ ಐದು ವೈವಿಧ್ಯಮಯ ಅನುಭವಗಳು: 'ಪ್ರೈಡ್ ಆಫ್ ಕರ್ನಾಟಕ' ಯಾತ್ರೆಯು ಪ್ರವಾಸಿಗರಿಗೆ ಅತ್ಯಪೂರ್ವ ಅನುಭವ ನೀಡಲಿದೆ.
ಬಂಡೀಪುರ: ವನ್ಯಜೀವಿ ಪ್ರಪಂಚದ ನಿಕಟ ಪರಿಚಯ
ಮೈಸೂರು: ಸಾಂಸ್ಕೃತಿಕ ರಾಜವೈಭವ,
ಬೇಲೂರು-ಹಳೇಬೀಡು: ವಿಶ್ವವಿಖ್ಯಾತ ಹೊಯ್ಸಳ ವಾಸ್ತುಶಿಲ್ಪ ಪರಂಪರೆ
ಚಿಕ್ಕಮಗಳೂರು: ಹಸಿರು ಕಂಗೊಳಿಸುವ ಕಾಫಿ ತೋಟಗಳ ಸೌಂದರ್ಯ
ಹಂಪಿ: ಯುನೆಸ್ಕೋ ವಿಶ್ವ ಪರಂಪರೆಯ ತಾಣ:
ಗೋವಾ: ಸುಂದರ ಕರಾವಳಿ ಮತ್ತು ಇಂಡೋ-ಪೋರ್ಚುಗೀಸ್ ಸಂಸ್ಕೃತಿ "ಗೋಲ್ಡನ್ ಚಾರಿಯಟ್ನ ವೈಶಿಷ್ಟ್ಯವು ಕೇವಲ ರೈಲಿನ ಐಷಾರಾಮಿ ಸೌಲಭ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಕಾಡಿನಿಂದ ಕರಾವಳಿಯವರೆಗೆ ವೈವಿಧ್ಯಮಯ ಅನುಭವಗಳನ್ನು ಒಂದೇ ಯಾತ್ರೆಯಲ್ಲಿ ನೀಡುವುದು ಇದರ ಮುಖ್ಯ ಶಕ್ತಿಯಾಗಿದೆ" ಎಂದು ಸಚಿವ ಕೆ.ಜೆ. ಜಾರ್ಜ್ ವಿವರಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಹ ಈ ಯೋಜನೆಯನ್ನು ರಾಜ್ಯದ ಪ್ರಮುಖ ಐಷಾರಾಮಿ ಪ್ರವಾಸೋದ್ಯಮ ಉತ್ಪನ್ನವಾಗಿ ಬೆಳೆಸಲು ವಿಶೇಷ ಆಸಕ್ತಿ ವಹಿಸಿದ್ದಾರೆ.
ಆಧುನಿಕ ಸ್ಪರ್ಶ ಮತ್ತು ತಾಂತ್ರಿಕ ಸುಧಾರಣೆ: ಹೊಸ ಋತುವಿನ ಪ್ರಾರಂಬಕ್ಕೂ ಮುನ್ನ 2026ರ ಮೇ ತಿಂಗಳಿಂದ ಆಗಸ್ಟ್ವರೆಗೆ ಮೈಸೂರು ವರ್ಕ್ಶಾಪ್ನಲ್ಲಿ ರೈಲಿನ ನಿಗದಿತ ತಾಂತ್ರಿಕ ನಿರ್ವಹಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
ರೈಲಿನ ಹೊರಾಂಗಣಕ್ಕೆ ಆಕರ್ಷಕ ರೂಪ ನೀಡಲಾಗಿದೆ. ಅಡುಗೆ ವಿಭಾಗದಲ್ಲಿ ಅತ್ಯಾಧುನಿಕ 'ಕಾಂಬಿ ಓವನ್', ಹೆಚ್ಚಿನ ಸಾಮರ್ಥ್ಯದ 'ಇಂಡಕ್ಷನ್ ವ್ಯವಸ್ಥೆ' ಹಾಗೂ ಸುಧಾರಿತ 'RO ನೀರು ಶುದ್ಧೀಕರಣ ಘಟಕ'ಗಳನ್ನು ಅಳವಡಿಸಲಾಗಿದೆ. ಅತಿಥಿ ಸೇವೆ ಮತ್ತು ಆತಿಥ್ಯ ವ್ಯವಸ್ಥೆಯನ್ನು ಆಧುನೀಕರಿಸಲಾಗಿದೆ.
2026-27ರ ಋತುವಿನಲ್ಲಿ ಒಟ್ಟು 13 ಐಷಾರಾಮಿ ಯಾತ್ರೆಗಳನ್ನು ಆಯೋಜಿಸಲಾಗಿದ್ದು, ವಿವರಗಳು ಹೀಗಿವೆ.
Pride of Karnataka: 7 ಯಾತ್ರೆಗಳು, Glimpses of Karnataka: 3 ಯಾತ್ರೆಗಳು, Jewels of South: 3 ಯಾತ್ರೆಗಳು.
ಅಧಿಕಾರಿಗಳ ಪ್ರತಿಕ್ರಿಯೆ: ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್: "ಮೊದಲ ಯಾತ್ರೆಗೆ ಸಿಕ್ಕಿರುವ 100% ಬುಕ್ಕಿಂಗ್ ಅತ್ಯುತ್ತಮ ಆರಂಭವಾಗಿದೆ. ಇದೇ ಉತ್ಸಾಹ ಮತ್ತು ಬೇಡಿಕೆಯನ್ನು ಇಡೀ ಋತುವಿನವರೆಗೆ ಕಾಯ್ದುಕೊಳ್ಳುವುದು ನಮ್ಮ ಗುರಿ. ಆತಿಥ್ಯ, ಬುಕ್ಕಿಂಗ್ ವ್ಯವಸ್ಥೆ ಹಾಗೂ ಸ್ಥಳೀಯ ಅನುಭವಗಳನ್ನು ಇನ್ನಷ್ಟು ಸುಧಾರಿಸಲಾಗುವುದು."
KSTDC ಅಧ್ಯಕ್ಷ ಎಂ. ಶ್ರೀನಿವಾಸ್: "ಆರಂಭಿಕ ಸ್ಪಂದನೆ ಬಹಳ ಪ್ರೋತ್ಸಾಹದಾಯಕವಾಗಿದೆ. ಇದೇ ಯಶಸ್ಸನ್ನು ಮುಂದಿನ ಎಲ್ಲಾ ಯಾತ್ರೆಗಳಿಗೂ ವಿಸ್ತರಿಸಿ, ಕರ್ನಾಟಕದ ಪ್ರವಾಸೋದ್ಯಮ ವೈವಿಧ್ಯತೆಯನ್ನು ಹೆಚ್ವು ಹೆಚ್ಚು ದೇಶೀಯ ಮತ್ತು ವಿದೇಶಿ ಪ್ರವಾಸಿಗರಿಗೆ ತಲುಪಿಸಲು ಶ್ರಮಿಸುತ್ತೇವೆ.




