ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕ್ಷೇತ್ರಕ್ಕೆ ಸ್ಥಳಾಂತರಿಸುತ್ತಿರುವ ಅರಣ್ಯ ಇಲಾಖೆಯ ನಡೆಯನ್ನು ಖಂಡಿಸಿ, ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಸೋಮವಾರ ರಾಜೀನಾಮೆ ಪತ್ರದೊಂದಿಗೆ ವಿಧಾನಸೌಧಕ್ಕೆ ಆಗಮಿಸಿದ ಅವರು, ಕ್ಷೇತ್ರದ ಜನರ ಹಿತರಕ್ಷಣೆಗಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ರಾಜೀನಾಮೆ ಪತ್ರದ ಪ್ರಮುಖ ಅಂಶಗಳು: ಏಕಪಕ್ಷೀಯ ನಿರ್ಧಾರಕ್ಕೆ ಆಕ್ರೋಶ: ಸ್ಥಳೀಯ ಶಾಸಕರೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ, ಬೇಲೂರು ಭಾಗದ 50-60 ಕಾಡಾನೆಗಳ ಹಿಂಡನ್ನು ಮೂಡಿಗೆರೆ ಕ್ಷೇತ್ರದ ತಕ್ಕೋಳ ಮೀಸಲು ಅರಣ್ಯಕ್ಕೆ (ಈಗಾಗಲೇ 36 ಆನೆಗಳನ್ನು ಕಾರ್ಬೈಲ್ ವರೆಗೆ) ಓಡಿಸಲಾಗುತ್ತಿದೆ. ಇಲಾಖೆಯ ಈ ಏಕಪಕ್ಷೀಯ ನಡೆ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳೆ ಹಾಗೂ ಪ್ರಾಣಹಾನಿಯ ಭೀತಿ: ಮೂಡಿಗೆರೆ ಭಾಗದಲ್ಲಿ ಈಗಾಗಲೇ ಕಾಡಾನೆ ಮತ್ತು ಕಾಡುಕೋಣಗಳ ಹಾವಳಿಯಿಂದ ಸಾವು-ನೋವುಗಳು ಸಂಭವಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಹೊರಗಿನಿಂದ ಮತ್ತಷ್ಟು ಆನೆಗಳನ್ನು ತಂದು ಬಿಡುವುದು 'ಗಾಯದ ಮೇಲೆ ಬರೆ ಎಳೆದಂತಾಗುತ್ತದೆ'. ಆನೆಗಳು ಚದುರಿ ಹೋದರೆ ಕಾಫಿ, ಅಡಿಕೆ ತೋಟಗಳು, ಭತ್ತದ ಗದ್ದೆಗಳು ನಾಶವಾಗುವುದರ ಜೊತೆಗೆ ಪ್ರವಾಸೋದ್ಯಮಕ್ಕೂ ಹೊಡೆತ ಬೀಳಲಿದೆ ಮತ್ತು ಸಾರ್ವಜನಿಕರ ಪ್ರಾಣಕ್ಕೆ ಕುತ್ತು ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅಂಗೀಕಾರಕ್ಕೆ ಮನವಿ: ಈ ಹಿಂದೆ ಭದ್ರಾ ಅಭಯಾರಣ್ಯಕ್ಕೆ ಆನೆಗಳನ್ನು ಬಿಡುವ ನಿರ್ಧಾರಕ್ಕೆ ವಿರೋಧ ವ್ಯಕ್ತವಾದಾಗ ಅದನ್ನು ತಾತ್ಕಾಲಿಕವಾಗಿ ತಡೆಯಲಾಗಿತ್ತು. ಈಗ ಮತ್ತೆ ಕ್ಷೇತ್ರದ ಜನರಿಗೆ ಮಾರಕವಾಗುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸರ್ಕಾರ ಮತ್ತು ಅರಣ್ಯ ಇಲಾಖೆಯ ಈ ಜನವಿರೋಧಿ ನಡೆಯನ್ನು ಖಂಡಿಸಿ, ತೀವ್ರ ನೋವಿನಿಂದ ಸಲ್ಲಿಸುತ್ತಿರುವ ತಮ್ಮ ರಾಜೀನಾಮೆಯನ್ನು ತಕ್ಷಣವೇ ಅಂಗೀಕರಿಸುವಂತೆ ಅವರು ಪತ್ರದಲ್ಲಿ ಕೋರಿದ್ದಾರೆ.




