ಚಂದ್ರವಳ್ಳಿ ನ್ಯೂಸ್, ಚಿಕ್ಕೋಡಿ:
ಅಥಣಿಯಲ್ಲಿ ತಮ್ಮನ್ನು ಸೋಲಿಸಲು ಸೈಲೆಂಟ್ ರಾಜಕಾರಣ ಮಾಡಬೇಕೆಂಬ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆ ಹಾಗೂ ಬಸವಣ್ಣನವರ ಕುರಿತು ಅವಹೇಳನಕಾರಿಯಾಗಿ ಬರೆದ ಆರೋಪ ಎದುರಿಸುತ್ತಿರುವ ರವಿ ಹಂಜ್ ವಿರುದ್ಧ ಸಚಿವ ಲಕ್ಷ್ಮಣ ಸವದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅಥಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಲಕ್ಷ್ಮಣ ಸವದಿ, ರಮೇಶ್ ಜಾರಕಿಹೊಳಿ ಅವರ ಹೇಳಿಕೆಯ ಕುರಿತ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಅಂತಹವರ ಬಗ್ಗೆ ಚರ್ಚೆ ಮಾಡಬಾರದು ಮತ್ತು ಅವರ ಬಗ್ಗೆ ಏನನ್ನೂ ಕೇಳಬಾರದು ಎಂದು ಅವರು ಹೇಳಿದರು.
ಇದೇ ವೇಳೆ ರವಿ ಹಂಜ್ ಅವರ ವಿವಾದಿತ ಪುಸ್ತಕದ ಕುರಿತು ಮಾತನಾಡಿದ ಸವದಿ, ಈ ಪುಸ್ತಕದ ಹಿಂದೆ ಆರ್ಎಸ್ಎಸ್ ಅಥವಾ ಇನ್ಯಾವುದೇ ಸಂಘಟನೆಗಳ ಕೈವಾಡವಿಲ್ಲ ಎಂದು ಸ್ಪಷ್ಟಪಡಿಸಿದರು. ಕೇವಲ ಪ್ರಚಾರದ ಗೀಳಿನಿಂದ ಕೆಲವರು ವಾಕ್ಯಗಳನ್ನು ತಿರುಚಿ ಬರೆಯುತ್ತಾರೆ. ಅಂತಹವರ ಬಗ್ಗೆ ಮಾಧ್ಯಮಗಳು ಪದೇ ಪದೇ ಚರ್ಚೆ ಮಾಡುವ ಮೂಲಕ ಅವರಿಗೆ ಅನಗತ್ಯ ಪ್ರಾಮುಖ್ಯತೆ ನೀಡಬಾರದು ಎಂದು ಅವರು ಅಭಿಪ್ರಾಯಪಟ್ಟರು.
ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸುವುದಾಗಿ ರವಿ ಹಂಜ್ ನೀಡಿರುವ ಸವಾಲಿಗೆ ಉತ್ತರಿಸಿದ ಸಚಿವರು, ಈಗಾಗಲೇ ಅವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪುಸ್ತಕ ಮುಟ್ಟುಗೋಲಿಗೆ ಸರ್ಕಾರ ತೀರ್ಮಾನಿಸಿದೆ. ಅವರು ಸುಪ್ರೀಂ ಕೋರ್ಟ್ಗೆ ಹೋದರೂ ಕಾನೂನಿನ ಚೌಕಟ್ಟಿನಲ್ಲಿ ಅದನ್ನು ಎದುರಿಸಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.
ಮತ್ತೊಂದೆಡೆ, ಕಳೆದ ಏಳು ದಿನಗಳಿಂದ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಪ್ರತಿಭಟನೆಯ ಕುರಿತು ಪ್ರತಿಕ್ರಿಯಿಸಿದ ಲಕ್ಷ್ಮಣ ಸವದಿ, ಮುಂಬರುವ ಅಧಿವೇಶನದಲ್ಲಿ ಆಶಾ ಕಾರ್ಯಕರ್ತೆಯರ ಸಮಸ್ಯೆಗಳಿಗೆ ಖಂಡಿತವಾಗಿಯೂ ಪರಿಹಾರ ಒದಗಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದರು. ಆದ್ದರಿಂದ ಆಶಾ ಕಾರ್ಯಕರ್ತೆಯರು ತಾಳ್ಮೆಯಿಂದಿದ್ದು ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಸವದಿ ಮನವಿ ಮಾಡಿದರು.




