ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರಿಗೆ ರಾಜಕೀಯವಾಗಿ ಹಿನ್ನಡೆಯಾಗಿದ್ದು, ಅವರ ಆಪ್ತ ಬೆಂಬಲಿಗರಾದ ಜಿ.ಕೆ. ವೆಂಕಟೇಶ್ ಹಾಗೂ ಕೊಳೆಗೇರಿ ಗಣೇಶ್ ಅವರು ಸೋಮವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಸಮ್ಮುಖದಲ್ಲಿ ಈ ನಾಯಕರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದರು. ಈ ಬೆಳವಣಿಗೆಯ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಪ್ರಯತ್ನ ನಡೆದಿದೆ.
ಡಿ.ಕೆ. ಸುರೇಶ್ ಹೇಳಿಕೆ: ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಂಸದ ಡಿ.ಕೆ. ಸುರೇಶ್, "ಕಾಂಗ್ರೆಸ್ ಪಕ್ಷವು ಯಾವುದೇ ಒಬ್ಬ ವ್ಯಕ್ತಿ ಅಥವಾ ಕುಟುಂಬಕ್ಕೆ ಸೀಮಿತವಾದ ಪಕ್ಷವಲ್ಲ. ಇದು ಬಡವರು, ಕಾರ್ಮಿಕರು ಮತ್ತು ರೈತರ ಧ್ವನಿಯಾಗಿದೆ. ಜಾತಿ, ಧರ್ಮದ ಹೆಸರಿನಲ್ಲಿ ಮತ ಕೇಳದೆ ಜನರ ಬದುಕಿಗಾಗಿ ಹೋರಾಡುವ ಪಕ್ಷ ಇದಾಗಿದೆ" ಎಂದು ಅಭಿಪ್ರಾಯಪಟ್ಟರು. ಮುಂದಿನ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಅವರನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.
ಶಾಸಕ ಮುನಿರತ್ನ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಡಿ.ಕೆ. ಸುರೇಶ್, "ಜಿ.ಕೆ. ವೆಂಕಟೇಶ್ ಮತ್ತು ಗಣೇಶ್ ಅವರು ಮೂಲತಃ ಕಾಂಗ್ರೆಸ್ನವರಾಗಿದ್ದು, ಈಗ ಸ್ವಇಚ್ಛೆಯಿಂದ ಮರಳಿ ಬಂದಿದ್ದಾರೆ. ಇವರು ನಮ್ಮೊಂದಿಗಿದ್ದಾಗ ಉತ್ತಮವಾಗಿದ್ದರು, ಬಿಜೆಪಿಗೆ ಹೋದ ನಂತರ ಕ್ಷೇತ್ರದಲ್ಲಿ ಗಲಾಟೆಗಳು ಶುರುವಾದವು. ಅಲ್ಲಿ ಕೇವಲ ಬಿಲ್ಗಳನ್ನು ಪಡೆಯುವುದರಲ್ಲಿ ಮಾತ್ರ ನಿಸ್ಸೀಮರಾಗಿದ್ದರು. ಕ್ಷೇತ್ರಕ್ಕೆ ಆಗಿರುವ ಅನ್ಯಾಯ ಮತ್ತು ಹಣ ದುರುಪಯೋಗದ ಬಗ್ಗೆ ಮುಂದಿನ ದಿನಗಳಲ್ಲಿ ಬಹಿರಂಗಪಡಿಸುತ್ತೇನೆ" ಎಂದು ಆರೋಪಿಸಿದರು.




