ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೈತಿಕ ಸಂಕಟದ ಜಗತ್ತಿಗೆ ಬಸವಣ್ಣನವರ ವಚನಗಳೇ ಸಂಜೀವಿನಿ(ಸ್ಮರಣೆ) ಇಂದಿನ ಜಗತ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಬಹಳಷ್ಟು ಮುಂದುವರಿದಿದ್ದರೂ, ನೈತಿಕ ಮೌಲ್ಯಗಳ ವಿಷಯದಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಹಣದ ದಾಹ, ಅತಿಯಾದ ಲಾಭದಾಸೆ, ಮೋಸ, ವಂಚನೆ ಮತ್ತು ಅಸಮಾನತೆಗಳು ಸಮಾಜದ ಪ್ರಮುಖ ಸಮಸ್ಯೆಗಳಾಗಿ ಕಾಣಿಸುತ್ತಿವೆ. ಇಂತಹ ಸಂಕೀರ್ಣ ಕಾಲಘಟ್ಟದಲ್ಲಿ 12ನೇ ಶತಮಾನ ಕಂಡ ಮಹಾನ್ ಸಮಾಜ ಸುಧಾರಕರಾದ ಬಸವಣ್ಣನವರ ವಚನಗಳು ಪ್ರಸ್ತುತಿ. ವಚನಗಳು ಕೇವಲ ಸಾಹಿತ್ಯವಲ್ಲ; ಅವು ಮಾನವೀಯ ಮೌಲ್ಯಗಳ ಆಧಾರದ ಮೇಲೆ ನ್ಯಾಯಯುತ ಸಮಾಜವನ್ನು ನಿರ್ಮಿಸುವ ಮಾರ್ಗದರ್ಶಕಗಳಾಗಿವೆ.
ಬಸವಣ್ಣನವರು ಪ್ರತಿಪಾದಿಸಿದ 'ಕಾಯಕವೇ ಕೈಲಾಸ' ಎಂಬ ತತ್ವವು ಇಂದಿನ ಜಗತ್ತಿನ ಜಟಿಲ ಸಮಸ್ಯೆಗಳಿಗೆ ಅತ್ಯಂತ ಪರಿಣಾಮಕಾರಿ ಮದ್ದಾಗಿದೆ. ಬೆವರು ಸುರಿಸಿ ದುಡಿಯುವ ಕಾಯಕದಲ್ಲಿ ದೈವತ್ವವನ್ನು ಕಂಡ ಅವರು, ಶ್ರಮಜೀವನಕ್ಕೆ ಪರಮೋಚ್ಚ ಗೌರವ ನೀಡಿದರು. ಸ್ವಾರ್ಥಕ್ಕಾಗಿ ಸಂಪತ್ತನ್ನು ಕ್ರೋಢೀಕರಿಸುವ 'ಸಂಗ್ರಹ ಬುದ್ಧಿ'ಯನ್ನು ತೊರೆದು, ಸಮಾಜಕ್ಕೆ ಮರಳಿಸುವ 'ದಾಸೋಹ' ಸಂಸ್ಕೃತಿಯನ್ನು ಅವರು ಪರಿಚಯಿಸಿದರು. ದುಡಿಮೆಯೇ ದೇವರೆಂದು ನಂಬಿದ ಅವರ ಈ ವಿಚಾರಧಾರೆ, ಇಂದಿನ ಅತಿಯಾದ ಆಸೆ ಮತ್ತು ಶ್ರಮವಿಲ್ಲದ ಶ್ರೀಮಂತಿಕೆಯ ಹಪಾಹಪಿಗೆ ದೊಡ್ಡ ಎಚ್ಚರಿಕೆಯಾಗಿದೆ.
ವೈಯಕ್ತಿಕ ನೈತಿಕತೆಯನ್ನು ರೂಪಿಸಲು ಬಸವಣ್ಣನವರು ನೀಡಿದ 'ಸಪ್ತ ಸೂತ್ರಗಳು' ಇಂದಿನ ಸಮಾಜಕ್ಕೆ ದಿಕ್ಸೂಚಿಯಂತಿವೆ. "ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ" ಎಂಬ ಅವರ ಸರಳ ಹಾಗೂ ಕಟ್ಟುನಿಟ್ಟಿನ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಿದರೆ, ಸಮಾಜದಲ್ಲಿ ಪೊಲೀಸ್ ಮತ್ತು ನ್ಯಾಯಾಲಯಗಳ ಅಗತ್ಯವೇ ಇರುವುದಿಲ್ಲ ಎಂಬುದು ಅಕ್ಷರಶಃ ಸತ್ಯ. ಅಂತರಂಗದ ಶುದ್ಧಿ ಮತ್ತು ಬಹಿರಂಗದ ನಡವಳಿಕೆಯ ನಡುವೆ ಸಾಮರಸ್ಯ ಇರಬೇಕು ಎಂದು ಸಾರಿದ ಅವರು, ಅನ್ಯರನ್ನು ಅಸಹ್ಯ ಪಡದೆ ಮತ್ತು ತನ್ನನ್ನು ತಾನು ಹೊಗಳಿಕೊಳ್ಳದೆ ಎಲ್ಲರನ್ನೂ ಪ್ರೀತಿಯಿಂದ ಕಾಣುವ ಮಾನವೀಯತೆಯ ಪಾಠವನ್ನು ಜಗತ್ತಿಗೆ ಕಲಿಸಿಕೊಟ್ಟರು.
ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಅಸಮಾನತೆ ಹೆಚ್ಚುತ್ತಿರುವ ಇಂದಿನ ಕಾಲಕ್ಕೆ ಬಸವಣ್ಣನವರ ಸ್ತ್ರೀ ಸಮಾನತೆಯ ವಿಚಾರಗಳು ಅತ್ಯಂತ ಆವಶ್ಯಕವಾಗಿವೆ. ಅಂದಿನ ಸಂಪ್ರದಾಯಬದ್ಧ ಮತ್ತು ಸಂಕುಚಿತ ಸಮಾಜದಲ್ಲೇ ಮಹಿಳೆಯರಿಗೆ ಧಾರ್ಮಿಕ ಹಾಗೂ ಸಾಮಾಜಿಕವಾಗಿ ಸಮಾನ ಸ್ಥಾನಮಾನ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. "ಆತ್ಮಕ್ಕೆ ಹೆಣ್ಣೆಂದಿಲ್ಲ, ಗಂಡೆಂದಿಲ್ಲ" ಎಂದು ಸಾರುವ ಮೂಲಕ ಲಿಂಗ ಭೇದದ ಗೋಡೆಗಳನ್ನು ಕೆಡವಿದ ಅವರು, ಅನುಭವ ಮಂಟಪದಲ್ಲಿ ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮನಂತಹ ಮಹಿಳೆಯರಿಗೆ ಮುಕ್ತವಾಗಿ ಚರ್ಚಿಸುವ ಹಕ್ಕು ನೀಡಿದರು. ಇದು ವಿಶ್ವದ ಮೊದಲ ಪ್ರಜಾಪ್ರಭುತ್ವದ ಅಡಿಪಾಯವೆಂದರೆ ಅತಿಶಯೋಕ್ತಿಯಲ್ಲ.
ಇಂದು ಸಮಾಜದಲ್ಲಿ ಬಸವಣ್ಣನವರ ಜಯಂತಿಯನ್ನು ಆಚರಿಸುವ ರೀತಿ ಅತ್ಯಂತ ವಿಷಾದನೀಯವಾಗಿದೆ. ಅವರ ಶ್ರೇಷ್ಠ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಬದಲು, ಕೇವಲ ಭಾವಚಿತ್ರಕ್ಕೆ ಹೂಮಾಲೆ ಹಾಕಿ, ಮೆರವಣಿಗೆ ಮಾಡಿ ಸಂಭ್ರಮಿಸುವುದಕ್ಕೆ ನಾವು ಸೀಮಿತವಾಗುತ್ತಿದ್ದೇವೆ. ಬಸವಣ್ಣನವರು ಕಂಡ 'ಕಲ್ಯಾಣ ರಾಜ್ಯ'ದ ಕನಸು ನನಸಾಗಬೇಕೆಂದರೆ, ಅವರ ತತ್ವಗಳು ಕೇವಲ ಲೇಖನಗಳಲ್ಲಿ ಅಥವಾ ವೇದಿಕೆಯ ಭಾಷಣಗಳಲ್ಲಿ ಉಳಿಯಬಾರದು. ಬದಲಾಗಿ, ನಮ್ಮ ದೈನಂದಿನ ಬದುಕಿನ ಪ್ರತಿ ಹೆಜ್ಜೆಯಲ್ಲೂ ಅವರ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. "ಖಡ್ಗದ ಕ್ರಾಂತಿ ರಕ್ತದ ಕಲೆ ಮಾಸುವವರೆಗೆ , ಆದರೆ ಲೇಖನಿಯ ಕ್ರಾಂತಿ ಕಾಲದ ಹಾದಿ ಇರುವವರೆಗೂ ಶಾಶ್ವತ."
ಲೇಖನ: ಡಾ. ಶಿವಪ್ಪ ಎನ್, ಸಹಾಯಕ ಪ್ರಾಧ್ಯಾಪಕರು, ಸಮಾಜಶಾಸ್ತ್ರ ವಿಭಾಗ, ಸಿ.ಜಿ. ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಕ್ಕಿಆಲೂರು.


