Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

"ಬಸವಣ್ಣ ಹಾಗೂ ಶರಣರ ತತ್ವಾದರ್ಶಗಳು"

Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"ಬಸವಣ್ಣ ಹಾಗೂ ಶರಣರ ತತ್ವಾದರ್ಶಗಳು"
-ಹನ್ನೆರಡನೆಯ ಶತಮಾನವು ಒಂದು ಕ್ರಾಂತಿಯುಗ" ಈ ಸಮಯದಲ್ಲಿ ವೀರಶೈವ ಪಂಥವು ತಲೆಯೆತ್ತಿದ್ದು ಸಮಾಜದಲ್ಲಿನ ಕೀಳರಿಮೆ, ಜಾತಿ, ಲಿಂಗಬೇಧ, ಮೌಢ್ಯಗಳ, ತಾರತಮ್ಯಗಳನ್ನು ಬೇರು ಸಹಿತ ಕಿತ್ತೊಗೆಯಲು, ಅಸ್ಪೃಶ್ಯರು, ಹಿಂದುಳಿದವರು ಅನೇಕ ಕಟ್ಟುಪಾಡುಗಳಿಗೆ ಸಿಲುಕಿ ನಲುಗುತ್ತಿದ್ದವರನ್ನು ಮೇಲೆತ್ತಲು ವಚನಗಳೆಂಬ ಆಯುಧಗಳ ಮೂಲಕ ಶರಣರು ಕಣ್ತೆರೆಸಿದ್ದು,ಸಮಾಜವನ್ನು ಬಡಿದೆಚ್ಚರಿಸಿದ್ದು ಬಸವಯುಗದಲ್ಲಿ ಎಂದರೆ ತಪ್ಪಾಗಲಾರದು.

       ಬಸವಾದಿ ಶರಣ ಪ್ರಮಥರೆಲ್ಲ ಒಟ್ಟುಗೂಡಿ-
ಜ್ಞಾನದ ಬೆಳಕನ್ನು ಚೆಲ್ಲಿ ಅಜ್ಞಾನದ  ಅಂಧಕಾರವನ್ನು ಹೋಗಲಾಡಿಸಲು ಶತಶತಮಾನಗಳಿಂದ ಬಂದ ತನುಮನದ ಕೊಳೆಯನ್ನು ತೊಡೆದು ಸಮಾನತೆ  ಭ್ರಾತೃತ್ವ
, ಭಾವೈಕ್ಯತೆ, ಸಹಾನುಭೂತಿ,ಪರಸ್ಪರ ಹೊಂದಾಣಿಕೆಗಳೆಂಬ ವಿಚಾರಗಳನ್ನು ಮಂಡಿಸಿದರು.ಅದರಲ್ಲೂ "ಕಾಯಕವೇ ಕೈಲಾಸ" ಎಂಬ ತತ್ವವನ್ನು ಬಿತ್ತರಿಸಿದ ಪವಾಡ ಪುರುಷ, ಭಕ್ತ ಭಂಡಾರಿ,ವಿಶ್ವಗುರು ಬಸವಣ್ಣನವರು ಜಗದ ಕಲ್ಯಾಣಕ್ಕಾಗಿ ಶ್ರಮಿಸಿದರು.

ಬದುಕಿನ ಆದಿ,ಮಧ್ಯ,ಅಂತ್ಯದ ಸಮಗ್ರವಾದಂತಹ ಅರಿವನ್ನು ಹೊಂದಿದ ಶರಣರು ತಮ್ಮ ಆಳವಾದ ಚಿಂತನೆಗಳ  ಮೂಲಕ ಶರಣ ತತ್ವಗಳನ್ನು ವಚನಗಳ ಮೂಲಕ ಬಿತ್ತರಿಸಿದ್ದು ಚರಿತ್ರಾರ್ಥ ಸಂಗತಿ. ಬಸವಣ್ಣನವರು "ಅನುಭವ ಮಂಟಪ"ವೆಂಬ ಸಂಸತ್ತನ್ನು ಕಟ್ಟಿದ್ದು ಇದು ಇಡೀ ಜಗತ್ತಿನಲ್ಲಿಯೇ ಪ್ರಪ್ರಥಮ ಸಂಸತ್ತು ಎನ್ನಿಸಿಕೊಂಡಿದೆ. ಇದರ ಅಧ್ಯಕ್ಷರಾಗಿ ಶೂನ್ಯಪೀಠದ ಸಿಂಹಾಸನಾಧೀಶ್ವರ ಬೆರಗಿನ ಬೆಡಗಿನ ವಚನಗಳನ್ನು ರಚಿಸಿದ ನೇರ,ನಿಷ್ಠುರವಾದಿ ದಿಟ್ಟ ನಿಲುವಿನ ಅಲ್ಲಮಪ್ರಭುಗಳು ಅಧ್ಯಕ್ಷರಾದರು.

ಇಲ್ಲಿ ಎಲ್ಲ ಜಾತಿ ಧರ್ಮದ ವ್ಯಕ್ತಿಗಳು, ಸಾಮಾನ್ಯ ಜನರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಚರ್ಚಿಸುತ್ತಿದ್ದರು.ಚಿನ್ಮಯ ಜ್ಞಾನಿಯಾದ ಅಲ್ಲಮಪ್ರಭು ಇವರ ವಚನಗಳ ಅಂಕಿತ ನಾಮ "ಗುಹೇಶ್ವರಾ" ದೇವರು, ಕಾಯಕತತ್ವ ,ದಾಸೋಹದ ಮಹತ್ವವನ್ನು ತಿಳಿಸಿಕೊಟ್ಟರು.ಬಸವಣ್ಣನವರು ಸಮಾಜ ಸುಧಾರಕರು, ಪವಾಡ ಪುರುಷರು,ನಡೆ ನುಡಿಗಳೊಂದಾಗಿ ನಡೆದವರು, ಸ್ತ್ರೀ ಪುರಷರಿಗೆ ಸಮಾನತೆಯನ್ನು ಕಲ್ಪಿಸಿದ ಮಹಾನ್ ಚೇತನ ಸ್ವರೂಪಿಗಳು, ಆಡು ಭಾಷೆಯಲ್ಲಿ ತಮ್ಮ ತತ್ವ  ಆದರ್ಶಗಳನ್ನು  ವಚನಗಳ ಮೂಲಕ ಬೆಳಗಿದ್ದಲ್ಲದೆ ಬ್ರಾಹ್ಮಣನಾದ ಮದುವರಸನ ಮಗಳು ಹಾಗೂ ಚಮ್ಮಾರ ಹರಳಯ್ಯನವರ ಮಗನಿಗೂ ಮದುವೆಯನ್ನು ಮಾಡಿಸಿ ಮಹಾ ಕ್ರಾಂತಿಯನ್ನುಂಟು ಮಾಡಿದ ಕಾರ್ಯವು ಅತ್ಯಂತ ಶ್ಲಾಘನೀಯವಾದದ್ದು.ಇವರ ಆರಾಧ್ಯದೈವವಾದ ಕೂಡಲ ಸಂಗಮೇಶ್ವರನನ್ನೇ ವಚನಗಳ ಅಂಕಿತ ನಾಮವನ್ನಾಗಿಟ್ಟು ಕೊಂಡಿದ್ದಾರೆ. ಜನರಲ್ಲಿ ಧರ್ಮ ಧಾರ್ಮಿಕ ಜಾಗೃತಿಯನ್ನುಂಟು ಮಾಡಿ, ಸ್ವಾಭಿಮಾನದ ಪ್ರತೀಕವಾಗಿ ಸಾಮಾಜಿಕ ಸಮಾನತೆಗಾಗಿ "ದೇವರು, ಆಧ್ಯಾತ್ಮ"  ಕೇವಲ ಕೆಲವೇ ಜನರಿಗೆ ಸೀಮಿತವಾಗಿದ್ದನ್ನು ವಿರೋಧಿಸಿ ಸಮಾಜ ಸುಧಾರಣೆಗಾಗಿ ಪ್ರಮುಖ ಪಾತ್ರವನ್ನು ವಹಿಸಿದರು.

      ಸಮಾಜದ ಕಟ್ಟಳೆಗಳನ್ನು ವಿರೋಧಿಸಿದ ಇನ್ನೊಬ್ಬ ಶರಣೆ, ವೈರಾಗಿಣಿ ಅಕ್ಕ ಮಹಾದೇವಿ, ಕನ್ನಡದ ಪ್ರಪ್ರಥಮ ಕವಯತ್ರಿಯಾಗಿದ್ದಾರೆ ರಾಜ ಕೌಶಿಕನ ಮೋಹವನ್ನು ಧಿಕ್ಕರಿಸಿ ಚನ್ನಮಲ್ಲಿಕಾರ್ಜುನನೇ ಎನ್ನ ಪತಿಯೆಂದು ಈ ಸಾವ ತರುವ ಗಂಡರನೊಯ್ದು ಒಲೆಯೊಳಗಿಕ್ಕಯ್ಯ ಎಂದಿದ್ದಾರೆ.ಅನುಭವ ಮಂಟಪದಲ್ಲಿ ಅಲ್ಲಮಪ್ರಭುವಿನಿಂದ ಪರೀಕ್ಷೆಗೊಳಗಾಗಿ ಈ ದೇಹದ ಮೋಹವಿರದೆ

ಹೀಗೇಕೆ ಮುಚ್ಚಿಕೊಂಡಿದ್ದೀಯೆ? ಹಾಗಾದರೆ ಈ ನಿರ್ವಾಣದ ರೂಪದಲ್ಲಿ ಏಕೆ ಬಂದಿದ್ದೀಯೆ? ಇನ್ನು ಈ ಸೌಂದರ್ಯದ ಮೋಹವು ಹೋಗಿಲ್ಲವೆ ಎಂದಾಗ ಅಕ್ಕನವರು"ಕಾಯ ಕರ್ರನೆ ಕಂದಿದರೇನು ಕಾಯ ಮಿರ್ರನೆ ಮಿಂಚಿದರೇನು ಎನ್ನ ಚೆಲುವ ಚೆನ್ನಮಲ್ಲಿಕಾರ್ಜುನನಿಗೆ ಒಲಿದಿದ್ದೇನೆ ಹಾಗಾದರೆ ಬೂಟಾಟಿಕೆಯ ವೇಷವೇಕೆಂದಾಗ ಇದು ನಿಮಗೆಲ್ಲರಿಗೋಸ್ಕರ, ಕಾಮದ ಕಣ್ಣುಗಳು ಕೆರಳಬಾರದೆಂಬ ಉದ್ದೇಶದಿಂದ,ಎನ್ನ ಚನ್ನಮಲ್ಲಿಕಾರ್ಜುನನಿಗಲ್ಲದೆ ಅನ್ಯರಿಗೆ ಮೀಸಲಾಗಿಲ್ಲವೆಂದು ಹೇಳುತ್ತಾರೆ.ಆಗ ಅಲ್ಲಮಪ್ರಭುಗಳೇ ಕ್ಷಮಿಸಕ್ಕ ಲೋಕದ ದೃಷ್ಠಿಯಲ್ಲಿ ನಿಮ್ಮನ್ನು ತರುವ ಉದ್ದೇಶದಿಂದ ಈ ರೀತಿ ಪರೀಕ್ಷೆಗೊಳಪಡಿಸಿದೆನೆಂದು ಹೇಳುತ್ತಾರೆ.ದಿಗಂಬರಳಾದ ವೈರಾಗ್ಯಿಣಿಯಾದ ಅಕ್ಕ ನಿಮಗೆ ನಮ್ಮೆಲ್ಲರ ಶರಣು ಶರಣಾರ್ಥಿಗಳು.

ಚನ್ನಬಸವಣ್ಣನವರು, ಆಕ್ಕ ನಾಗಲಾಂಬಿಕೆ, ಅಂಬಿಗರ ಚೌಡಯ್ಯ, ದೇವರ ದಾಸಿಮಯ್ಯ, ಆಯ್ದಕ್ಕಿ ಲಕ್ಕಮ್ಮ, ಮೋಳಗೆ ಮಾರಯ್ಯ ಮಹಾದೇವಿಯರು, ಶಾಂತರಸ, ಮಡಿವಾಳ ಮಾಚಯ್ಯ, ಸಿದ್ಧರಾಮೇಶ್ವರರು, ಕಿನ್ನರಿ ಬೊಮ್ಮಯ್ಯ,  ಹಡಪದ ಅಪ್ಪಣ್ಣ, ಆತನ ಸತಿ ಲಿಂಗಮ್ಮ ಇನ್ನು ಮುಂತಾದವರೆಲ್ಲರೂ ಅಂತರಂಗ ಬಹಿರಂಗಗಳ ಸತ್ಯ ಶೋಧನೆಗಾಗಿ

ಧರ್ಮ, ದೇವರು, ಸತ್ಯ ಅಸತ್ಯ,ನ್ಯಾಯ ಅನ್ಯಾಯಗಳ ವಿಶ್ಲೇಷಣೆಗಳನ್ನು ಮಾಡುತ್ತಾ ಜನಮಾನಸರಲ್ಲಿ ಜ್ಞಾನದ ಬೀಜವನ್ನು ಬಿತ್ತಿದರು.. ಬಸವಣ್ಣನವರ ಮನೆಗೆ ಒಮ್ಮೆ ಕಳ್ಳರು ಬಂದಾಗ ಹಸುಗಳನ್ನು ಮಾತ್ರ ಊಟ ಬಿಟ್ಟು ಕಳುಹಿಸುತ್ತಾರೆ. ಇದರಿಂದ ಅವರ ಮನ ಪರಿವರ್ತನೆಯಾಗುತ್ತದೆ.ಇವರು ಬಿಜ್ಜಳನ ಆಸ್ಥಾನದಲ್ಲಿ ಖಜಾಂಚಿಯಾಗಿ (ಕರಣಿಕನಾಗಿ) ವೃತ್ತಿಯನ್ನು ಕೈಗೊಂಡರು.ಅಲ್ಲಿ ನಡೆಯುವ ತಂತ್ರ ಕುತಂತ್ರ, ಹಿಂಸೆ ವಂಚನೆ,ಆಚಾರ ಅನಾಚಾರ ಅತ್ಯಾಚಾರಗಳ ಬಗ್ಗೆ ಅವರಿಗೆ ಲಕ್ಷ್ಯವಿರಲಿಲ್ಲ ಎಲ್ಲರನ್ನು ತಮ್ಮಂತೆಯೇ ಎಂದು ಭಾವಿಸಿದ್ದರು.ಬಿಜ್ಜಳನ ಆಸ್ಥಾನದಲ್ಲಿದ್ದ ಲೆಕ್ಕ ಪತ್ರದೊಳಗಿನ ತಪ್ಪುಗಳನ್ನು ಕಂಡು ಹಿಡಿದಿದ್ದರಿಂದ ರಾಜ ಬಿಜ್ಜಳನ ಮೆಚ್ಚುಗೆಯನ್ನು ಸಂಪಾದಿಸಿದರು.ಇದರಿಂದ ಮಂತ್ರಿಗಳು, ಮಾಂಡಲೀಕರಿಗೆ ಹೊಟ್ಟೆ ಉರಿಯತೊಡಗಿತು.ಅಲ್ಲದೆ ಬಸವಣ್ಣನವರು ಸಮಾಜದ ತಾರತಮ್ಯಗಳು, ನಡವಳಿಕೆಗಳು, ಮೌಢ್ಯಗಳನ್ನು ತಿದ್ದಿ ಜನರಲ್ಲಿ ಧಾರ್ಮಿಕ ಮನೋಭಾವವನ್ನುಂಟು ಮಾಡಲು "

"ಲೋಕದ ಡೊಂಕನ್ನು ನೀವೇಕೆ ತಿದ್ದುವಿರಯ್ಯ-
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿರಯ್ಯ ನೆರೆಯ ಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲ ಸಂಗಮದೇವಯ್ಯ" ಎಂದು  ಬಸವಣ್ಣನವರು ಹೀಗೆ ಅನೇಕ ವಚನಗಳಲ್ಲಿ ಹೇಳಿದ್ದಾರೆ.
 

ಕಳಬೇಡ ಕೊಲಬೇಡ
ಹುಸಿಯ ನುಡಿಯಲು ಬೇಡ
ಅನ್ಯರಿಗೆ ಅಸಹ್ಯ ಬೇಡ
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ
ನಮ್ಮ ಕೂಡಲ ಸಂಗನೊಲಿಸುವ ಪರಿ ಹೀಗೆ ಪ್ರತಿಯೊಬ್ಬರು ಅಂತರಂಗ ಶುದ್ಧಿ ಬಹಿರಂಗ ಶುದ್ಧಿಯಿಂದಲೂ ನಡೆನುಡಿಗಳೊಂದಾಗಿ ನಡೆಯೆ..
ಸಮಾಜವು ಹಸನಾಗುತ್ತದೆ. ಬಸವಣ್ಣನವರಿಗೆ "ಭಾರತದ ಮಾರ್ಟಿನ್ ಲೂಥರ್" ಎಂದು ಕರೆದಿದ್ದಾರೆ.1967 ಮತ್ತು 1992ರಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದಾರೆ. ದೆಹಲಿ ಪಾರ್ಲಿಮೆಂಟಿನ 28  ಏಪ್ರಿಲ್‍2013ರಲ್ಲಿ ಅಶ್ವಾರೂಢಾ ಬಸವಣ್ಣನವರ ಮೂರ್ತಿಯನ್ನು ಸ್ಥಾಪಿಸಿದರು.  ಇತ್ತೀಚೆಗೆ ಇವರಿಗೆ "ಸಾಂಸ್ಕೃತಿಕ ನಾಯಕ" ಎಂಬ ಬಿರುದನ್ನು ಕೊಟ್ಟು ಗೌರವಿಸಿದ್ದಾರೆ. ಕೇವಲ ನಮ್ಮ ದೇಶದಲ್ಲಿಯೇ ಗೌರವಿಸದೆ ವಿದೇಶಗಳಲ್ಲೂ ಇವರ ಮೂರ್ತಿಯನ್ನು ಲಂಡನ್ನಿನ "ಥೇಮ್ಸ್"ನದಿಯ ದಡದ ಮೇಲೂ ಪ್ರತಿಷ್ಠಾಪಿಸಿದ್ದಾರೆ.ಇವರು ಇಡೀ ಜನ ಸಂಕುಲವನ್ನೇ ಬೇರೆಯವರೆಂದು ಭಾವಿಸದೆ.

ಇವನಾರವ ಇವನಾರವ ಇವ ನಮ್ಮವರೆಂದೆನಿಸಯ್ಯ ಎಂದು ಭಾವಿಸುವುದರೊಂದಿಗೆ ಕಂದಾಚಾರಗಳನ್ನು ಹೋಗಲಾಡಿಸಿ ಆತ್ಮೀಯತೆ, ಭ್ರಾತೃತ್ವ, ಸಮಾನತೆ, ಹೊಂದಾಣಿಕೆಯನ್ನು ಅಳವಡಿಸಿಕೊಂಡು ದಾರ್ಶನಿಕರ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಸೂಚಿಸುತ್ತಾರೆ. ಪರತತ್ವ, ಪಾರಮಾರ್ಥಿಕವಾಗಿ ವಿವೇಚಿಸಿ ಶರಣ ಸತಿ ಲಿಂಗ ಪತಿಯಾಗಿ ಭಗವಂತ ಕೂಡಲ ಸಂಗಮೇಶ್ವರನಲ್ಲಿ ಐಕ್ಯವಾಗುತ್ತಾರೆ. ಬಸವಣ್ಣನವರು ಇಂದಿಗೂ ವಚನಗಳು ಜಗದುದ್ದಗಲಕ್ಕೂ ಅನನ್ಯ ಕೊಡುಗೆಯನ್ನು ನೀಡುವುದರ ಮೂಲಕ  ಚಿರಾಯುವಾಗಿ ಉಳಿದಿದ್ದಾರೆ.
ಲೇಖನ
: ಕೆ.ಎಸ್.ತಿಪ್ಪಮ್ಮ ನಾಗರಾಜ್, ಚಿತ್ರದುರ್ಗ.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST