ಚಂದ್ರವಳ್ಳಿ ನ್ಯೂಸ್, ಟೋಕಿಯೊ / ಬೆಂಗಳೂರು:
ಜಪಾನ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಅವರೊಂದಿಗೆ ಜಪಾನ್ನ ಮೊಟೊಮಾಚಿ ಘಟಕಕ್ಕೆ ಭೇಟಿ ನೀಡಿ, ಟೊಯೋಟಾ ಮೋಟಾರ್ ಕಾರ್ಪೊರೇಷನ್ನ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮಸಕಾಜು ಯೋಶಿಮುರಾ ಮತ್ತು ಸಂಸ್ಥೆಯ ಹಿರಿಯ ನಾಯಕತ್ವದೊಂದಿಗೆ ಮಹತ್ವದ ಚರ್ಚೆ ನಡೆಸಿದರು.
ವಿಸ್ತರಣಾ ಯೋಜನೆಗೆ ಸರ್ಕಾರದ ಅಭಯ: ಟೊಯೋಟಾ ಸಂಸ್ಥೆಯು ತನ್ನ ವಾಹನ ಉತ್ಪಾದನಾ ಸಾಮರ್ಥ್ಯವನ್ನು ಹತ್ತು ಲಕ್ಷಕ್ಕೆ (ಒಂದು ಮಿಲಿಯನ್) ಹೆಚ್ಚಿಸಲು ಯೋಜಿಸಿರುವ ಹಿನ್ನೆಲೆಯಲ್ಲಿ, ಕಂಪನಿಯ ಈ ವಿಸ್ತರಣಾ ಯೋಜನೆಗಳಿಗೆ ಕರ್ನಾಟಕ ಸರ್ಕಾರದ ಸಂಪೂರ್ಣ ಸಹಕಾರ ಮತ್ತು ಬೆಂಬಲವಿರಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಹೈಬ್ರಿಡ್ ಟ್ಯಾಕ್ಸಿ ಮತ್ತು ಫ್ಲೆಕ್ಸ್-ಫ್ಯೂಯಲ್ ವಾಹನಗಳ ಕುರಿತು ಚರ್ಚೆ:
ಸಭೆಯಲ್ಲಿ ಸುಸ್ಥಿರ ಸಂಚಾರ ವ್ಯವಸ್ಥೆಯ ಕುರಿತು ವಿಶೇಷ ಒತ್ತು ನೀಡಲಾಯಿತು. ಕರ್ನಾಟಕದಲ್ಲಿ ಟೊಯೋಟಾದ ಕೈಗೆಟುಕುವ ದರದ ಹೈಬ್ರಿಡ್ ಎಲೆಕ್ಟ್ರಿಕ್ ಟ್ಯಾಕ್ಸಿ ಮಾದರಿಯನ್ನು ಪರಿಚಯಿಸುವಂತೆ ಸಿಎಂ ಉತ್ತೇಜಿಸಿದರು.
ಇದರಿಂದ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಉತ್ತಮ ಟ್ಯಾಕ್ಸಿ ಸೇವೆ ಲಭ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ, ಪರ್ಯಾಯ ಇಂಧನ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಫ್ಲೆಕ್ಸ್-ಫ್ಯೂಯಲ್ ವಾಹನಗಳ ಕ್ಷೇತ್ರದಲ್ಲಿನ ಅವಕಾಶಗಳ ಕುರಿತೂ ಉಭಯ ನಾಯಕರು ವಿಸ್ತೃತವಾಗಿ ಚರ್ಚಿಸಿದರು.
ಘಟಕ ವೀಕ್ಷಣೆ ಹಾಗೂ ಕನ್ನಡಿಗ ಐಟಿಐ ವಿದ್ಯಾರ್ಥಿಗಳೊಂದಿಗೆ ಸಂವಾದ: ಚರ್ಚೆಯ ಬಳಿಕ ನಿಯೋಗವು ಮೊಟೊಮಾಚಿ ಉತ್ಪಾದನಾ ಘಟಕ ಮತ್ತು ಟೊಯೋಟಾ ಕೈಕನ್ ಮ್ಯೂಸಿಯಂಗೆ ಭೇಟಿ ನೀಡಿ, ಅಲ್ಲಿನ ಸುಧಾರಿತ ಉತ್ಪಾದನಾ ಪ್ರಕ್ರಿಯೆ, ತಾಂತ್ರಿಕ ನಾವೀನ್ಯತೆ ಹಾಗೂ ಫ್ಯೂಚರ್ ಮೊಬಿಲಿಟಿ (ಭವಿಷ್ಯದ ಸಂಚಾರ ತಂತ್ರಜ್ಞಾನ) ಕುರಿತು ಮಾಹಿತಿ ಪಡೆಯಿತು. ಇದೇ ಸಂದರ್ಭದಲ್ಲಿ, ಟೊಯೋಟಾದ 'ಗ್ಲೋಬಲ್ ಸ್ಕಿಲ್-ಅಪ್' ಕಾರ್ಯಕ್ರಮದಡಿ ಜಪಾನ್ನಲ್ಲಿ ವಿಶೇಷ ತರಬೇತಿ ಪಡೆಯುತ್ತಿರುವ ಕರ್ನಾಟಕದ 20ಕ್ಕೂ ಹೆಚ್ಚು ಐಟಿಐ ಪದವೀಧರರೊಂದಿಗೆ ಮುಖ್ಯಮಂತ್ರಿಗಳು ಸಂವಾದ ನಡೆಸಿ ಹುರಿದುಂಬಿಸಿದರು.
ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನ: ಮುಂಬರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಟೊಯೋಟಾ ಸಂಸ್ಥೆಯ ಹಿರಿಯ ನಾಯಕತ್ವವನ್ನು ಆಹ್ವಾನಿಸಿದ ಮುಖ್ಯಮಂತ್ರಿಗಳು, ರಾಜ್ಯದ ಉತ್ಪಾದನಾ ವಲಯವನ್ನು ಮತ್ತಷ್ಟು ಬಲಪಡಿಸಲು, ಹೆಚ್ಚಿನ ವಿದೇಶಿ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ರಾಜ್ಯದ ಯುವಜನತೆಗೆ ಕೌಶಲ್ಯಯುತ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕರ್ನಾಟಕ ಸರ್ಕಾರ ಸದಾ ಬದ್ಧವಾಗಿದೆ ಎಂದು ತಿಳಿಸಿದರು.




