Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ಉಡ್ತಾ ಕರ್ನಾಟಕ...... ಎಚ್ಚರ ಎಚ್ಚರ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉಡ್ತಾ ಕರ್ನಾಟಕ...... ಎಚ್ಚರ ಎಚ್ಚರ.....
ಕೆಲವು ವರ್ಷಗಳ ಹಿಂದೆ ಉಡ್ತಾ ಪಂಜಾಬ್ ಎಂಬ ಪಂಜಾಬಿ ಭಾಷೆಯ ಸಿನಿಮಾ ಒಂದು ಬಿಡುಗಡೆಯಾಗಿತ್ತು. ಅದು ಪಂಜಾಬಿನಲ್ಲಿ ನಡೆಯುತ್ತಿರುವ ಡ್ರಗ್ ಮಾಫಿಯಾ ಕುರಿತಾದ ಚಿತ್ರ ಎಂದು ವಿಮರ್ಶೆಗಳಲ್ಲಿ ಓದಿದ್ದೇನೆ. ಡ್ರಗ್ಸ್ ಮಾಫಿಯಾ ಹೇಗೆ ಇಡೀ ಪಂಜಾಬಿನ ಯುವ ಸಮೂಹದ ನಾಶಕ್ಕೆ ಕಾರಣವಾಗಿದೆ ಎಂಬುದನ್ನು ಅದರಲ್ಲಿ ಚಿತ್ರೀಕರಿಸಲಾಗಿದೆ.

 ಇದೀಗ ಕರ್ನಾಟಕ ಸಹ ಅದೇ ಪರಿಸ್ಥಿತಿಯನ್ನು ನಿಜವಾಗಲೂ ಎದುರಿಸುತ್ತಿದೆ. ಮಾದಕ ದ್ರವ್ಯಗಳ ದೊಡ್ಡ ಜಾಲವೇ ಬೆಳೆದಿದೆ. ಎಷ್ಟೋ ತಾಯಂದಿರು, ಪೋಷಕರು ವಿಲವಿಲ ಒದ್ದಾಡುತ್ತಿದ್ದಾರೆ. ಕೆಲವರು ಬಹಿರಂಗವಾಗಿ ಹೇಳಿಕೊಂಡರೆ, ಮತ್ತೆ ಕೆಲವರು ಹೇಳಿಕೊಳ್ಳಲು ಸಾಧ್ಯವಾಗದೆ ಕೊರಗುತ್ತಿದ್ದಾರೆ.

 ಈ ವಿಷಯದಲ್ಲಿ ಸಂಪೂರ್ಣವಾಗಿ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ‌ಅಥವಾ ವಿಫಲವಾಗಿದೆ. ಅತಿ ಮುಖ್ಯವಾಗಿ, ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು, ಗೃಹ ಕಾರ್ಯದರ್ಶಿಗಳು, ಮುಖ್ಯ ಕಾರ್ಯದರ್ಶಿಗಳು, ರಾಜ್ಯ ಪೊಲೀಸ್ ಮುಖ್ಯಸ್ಥರು, ಎಲ್ಲಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು, ಇಂಟಲಿಜೆನ್ಸ್ ಮುಖ್ಯಸ್ಥರು ಇದರ ನೇರ ಹೊಣೆಯನ್ನು ಹೊರಬೇಕಾಗುತ್ತದೆ.

 ವಾಸ್ತವದಲ್ಲಿ ಈಗಿನ ಆಧುನಿಕ ತಂತ್ರಜ್ಞಾನದ ಸಂದರ್ಭದಲ್ಲಿ ಈ ಡ್ರಗ್ಸ್ ಮಾಫಿಯಾವನ್ನು ಬೇರು ಸಮೇತ ಕಿತ್ತು ಹಾಕಲು ಅಂತಹ ದೊಡ್ಡ ಸಮಸ್ಯೆ ಏನು ಇಲ್ಲ. ಏಕೆಂದರೆ ಕೊಲೆ, ಅತ್ಯಾಚಾರ, ದರೋಡೆ, ಭ್ರಷ್ಟಾಚಾರ ಇದು ಹೆಚ್ಚು ಕಡಿಮೆ ಖಾಸಗಿಯಾಗಿ ನಡೆದು ಹೋಗುತ್ತದೆ. ಅದನ್ನು ಅಷ್ಟು ಸುಲಭವಾಗಿ ನಿಯಂತ್ರಿಸುವುದು ಸಾಧ್ಯವಿಲ್ಲ. ಇದು ಸಮಾಜದ ಪ್ರತಿಬಿಂಬ. ಆದರೆ ಈ ಡ್ರಗ್ಸ್ ಮಾಫಿಯಾ ಹಾಗಲ್ಲ. ಇದೊಂದು ವ್ಯವಸ್ಥಿತ ಜಾಲವನ್ನು ಹೊಂದಿರುತ್ತದೆ. ತುಂಬಾ ಕ್ರಮಬದ್ಧವಾಗಿ ಹಣಕಾಸಿನ ಮೂಲಗಳನ್ನು ಹೊಂದಿ ಒಂದು ಚೈನ್ ಲಿಂಕ್ ರೀತಿಯಲ್ಲಿ ಕೆಲಸ ಮಾಡುತ್ತಿರುತ್ತದೆ.

 ನಿಜವಾಗಲೂ ಇಚ್ಛಾಶಕ್ತಿ ಇರುವ ಸರ್ಕಾರ ಇದಕ್ಕಾಗಿ ಒಂದು ಬಲಿಷ್ಠ ಡ್ರಗ್ ನಿರ್ಮೂಲನಾ ಪೊಲೀಸ್ ತಂಡವನ್ನು ಸ್ಥಾಪಿಸಿ ಅದನ್ನು ಚೈನ್ ರೀತಿಯಲ್ಲಿ ಹುಡುಕಿಕೊಂಡು ಇಡೀ ಜಾಲವನ್ನೇ ಭೇದಿಸಿ, ಬಂಧಿಸಿ  ವಿಶೇಷ ಕೋರ್ಟ್ ಮುಖಾಂತರ ಅದಕ್ಕೆ ಸಂಬಂಧಿಸಿದ ಎಲ್ಲರನ್ನೂ ಬೇಗ ನ್ಯಾಯಾಲಯದ ಪರಿಧಿಗೆ ಒಪ್ಪಿಸಿ ಶಿಕ್ಷೆ ಕೊಡಿಸಿದರೆ ಶೇಕಡಾ 80% ಕ್ಕೂ ಹೆಚ್ಚು ಡ್ರಗ್ ಮಾಫಿಯಾ ನಿಂತು ಹೋಗುತ್ತದೆ.

 ಇದು ನಿಜಕ್ಕೂ ಸುಲಭವಾಗಿ ಮಾಡಬಹುದಾದ ಕೆಲಸ. ಏಕೆಂದರೆ ಡ್ರಗ್ ನಿಂದ ಸರ್ಕಾರಕ್ಕೆ ಆದಾಯವೂ ಇಲ್ಲ, ಜೊತೆಗೆ ಸಮಾಜದ ಅತ್ಯಂತ ಮಾರಕ ರೋಗ ನಿವಾರಣೆಯಾಗುತ್ತದೆ. ಇಂತಹ ಘಟನೆಗಳನ್ನು ಸಹ ನಿಯಂತ್ರಿಸಲು ಸರ್ಕಾರಿ ವ್ಯವಸ್ಥೆಗೆ ಸಾಧ್ಯವಿಲ್ಲ ಎನ್ನುವುದಾದರೆ ಇನ್ನು ದೊಡ್ಡ ದೊಡ್ಡ ಕೃತ್ಯಗಳನ್ನು ಹೇಗೆ ರಕ್ಷಿಸುತ್ತಾರೆ.

 ಜೊತೆಗೆ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿರುವವರ ಸಂಖ್ಯೆ ಕೆಲವೇ ಸಾವಿರಗಳಲ್ಲಿ ಮಾತ್ರವಿದೆ. ಇದೇನು ಭಯೋತ್ಪಾದಕರಂತೆ, ಧಾರ್ಮಿಕ ಮೂಲಭೂತವಾದಿಗಳಂತೆ ಆಳವಾದ ಜಾಲವನ್ನು ಹೊಂದಿರುವುದಿಲ್ಲ. ಕೇವಲ ಹಣಕಾಸಿನ ವ್ಯವಹಾರಕ್ಕಾಗಿ, ಯುವಜನರಲ್ಲಿ ಈ ಡ್ರಗ್ಸ್ ಮಾರಾಟ ಮಾಡಲಾಗುತ್ತದೆ. ಹೃದಯವಂತಿಕೆ ಇರುವ ಯಾರೇ ಅಧಿಕಾರಿಗಳು ಈ ವಿಷಯದಲ್ಲಿ ಕಾನೂನು ಮೀರಿ ಒಂದು ಹೆಜ್ಜೆ ಮುಂದೆ ಹೋದರೆ ಖಂಡಿತವಾಗಲೂ ತಪ್ಪೇನು ಇಲ್ಲ.

 ಏಕೆಂದರೆ ನಮ್ಮ ಯುವಕರಿಗೆ ವಿಷ ಉಣಿಸುತ್ತಿರುವವರ ಬಗ್ಗೆ ಸಹಾನುಭೂತಿ ಏಕೆ ? ಗೃಹ ಸಚಿವರು ಕೇವಲ ಹೇಳಿಕೆಗಳನ್ನು ನೀಡುತ್ತಾ, ಯಾವುದೋ ಮೆಡಿಕಲ್ ಸ್ಟೋರ್ ಗಳ ಮೇಲೆ ದಾಳಿ ಮಾಡಿದರೆ ಪ್ರಯೋಜನವೇನು ?. ಮೆಡಿಕಲ್ ಸ್ಟೋರ್ ಅಲ್ಲದಿದ್ದರೆ ಬೀಡ ಅಂಗಡಿ, ಅದು ಅಲ್ಲದಿದ್ದರೆ ಇನ್ನೊಂದು ಹೀಗೆ ಎಲ್ಲೋ ಅವರು ತಮ್ಮ ಮಾರಾಟ ಜಾಲವನ್ನು ವಿಸ್ತರಿಸಿಕೊಳ್ಳುತ್ತಲೇ ಇರುತ್ತಾರೆ.

 ಈಗ ಮುಖ್ಯವಾಗಿ ಆಗಬೇಕಾಗಿರುವುದು ಇದರ ಮೂಲೋಚ್ಚಾಟನೆಯೇ ಹೊರತು ಕೇವಲ ದಾಳಿ ಮತ್ತು ಬಂಧನವಲ್ಲ. ಅವರನ್ನು ಬಂಧಿಸಿ, ಮುಂದೆ ಶೀಘ್ರ ವಿಚಾರಣೆಗೆ ಒಳಪಡಿಸಿ, ಆರು ತಿಂಗಳ ಒಳಗಾಗಿ ಇವರಿಗೆ ಕನಿಷ್ಠ 10 ವರ್ಷಗಳ ಅವಧಿಗಾದರೂ ಜೈಲು ಶಿಕ್ಷೆಯನ್ನ ವಿಧಿಸಬೇಕು. ಅದಕ್ಕಾಗಿ ಕಾನೂನಿನ ತಿದ್ದುಪಡಿ ಮಾಡುವುದಾದರೆ ವಿಶೇಷ ಅಧಿವೇಶನ ಕರೆದು ತಕ್ಷಣವೇ ಮಾಡಬೇಕು.

ಈ ವಿಷಯದಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪವೂ ಇರುವುದಿಲ್ಲ. ಏಕೆಂದರೆ ಯಾವ ರಾಜಕಾರಣಿಗಳು ಇದನ್ನು ಬೆಂಬಲಿಸುವುದಿಲ್ಲ. ರಾಜಕಾರಣಿಗಳು ಭ್ರಷ್ಟಾಚಾರ ಮಾಡಬಹುದು, ಆದರೆ ಈ ವಿಷ ಉಣಿಸುವ ಕೆಲಸಕ್ಕೆ ಹೃದಯವಿರುವ ಯಾರೂ ಪ್ರೋತ್ಸಾಹ ನೀಡುವುದಿಲ್ಲ.

 ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳೇ ಮತ್ತು ಅದಕ್ಕೆ ಸಂಬಂಧಿಸಿದವರೇ ದಯವಿಟ್ಟು ನಿಮ್ಮ ಪ್ರಾಮುಖ್ಯತೆ ಈ ಡ್ರಗ್ ಮಾಫಿಯಾ ನಿಯಂತ್ರಣಕ್ಕೆ ನೀಡಿ. ನೀವೇನು ದಾಳಿ ಮಾಡಬೇಕಾಗಿಲ್ಲ. ಒಂದು ಒಳ್ಳೆಯ, ದಕ್ಷ, ಪ್ರಾಮಾಣಿಕ ಅಧಿಕಾರಿಗಳ ತಂಡ ರಚಿಸಿ ಅದಕ್ಕೆ ವಿಶೇಷ ಸ್ಥಾನಮಾನ ನೀಡಿ. ಅವರು ಈ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಡ್ರಗ್ಸ್ ಮಾಫಿಯಾವನ್ನು ಮೂಲೋಚ್ಚಾಟನೆ ಮಾಡೋಣ.

 ಹಾಗೆಯೇ ಈ ರೇವ್ ಪಾರ್ಟಿ ಅಥವಾ ಈ ರೀತಿಯ ದೊಡ್ಡ ದೊಡ್ಡ ಜನಪ್ರಿಯ ವ್ಯಕ್ತಿಗಳ ಪಾರ್ಟಿಗಳ ಮೇಲೆ ನೇರವಾಗಿ ದಾಳಿ ಮಾಡಿ, ಮುಲಾಜಿಲ್ಲದೆ ಅವರ ಮೇಲೆಯೂ ಕೇಸ್ ಹಾಕಿ ಜೈಲಿಗೆ ಕಳುಹಿಸಿ. ಏಕೆಂದರೆ ಈ ಬಹು ಬೆಲೆಯ ಡ್ರಗ್ಸ್ ಬಡವರು, ಸಾಮಾನ್ಯ ಜನರು ಕೊಳ್ಳಲು ಸಾಧ್ಯವಿಲ್ಲ. ಇದೇನಿದ್ದರೂ ಶ್ರೀಮಂತರ ಶೋಕಿ. ಅದು ಯುವ ಜನಾಂಗಕ್ಕೂ ಹಬ್ಬುತ್ತಿದೆ. ದಯವಿಟ್ಟು ಇದಕ್ಕೆ ಇಡೀ ಕರ್ನಾಟಕದ ಎಲ್ಲ ಹೃದಯವಂತ ಪೋಷಕರು ಧ್ವನಿಗೂಡಿಸಿ.

 ಸಾಮಾಜಿಕ ಜಾಲತಾಣವೋ, ಮಾಧ್ಯಮವೋ, ಮಠಗಳೋ, ಧಾರ್ಮಿಕ ಕೇಂದ್ರಗಳೋ ಯಾವುದೇ ಇರಲಿ ಧೈರ್ಯವಾಗಿ ಧ್ವನಿ ಎತ್ತಿ. ಎಷ್ಟೋ ಸಮಸ್ಯೆಗಳನ್ನು ನಿವಾರಣೆ ಮಾಡಲು ನಮ್ಮಿಂದ ಸಾಧ್ಯವಾಗಿಲ್ಲ. ಆದರೆ ಈ ಡ್ರಗ್ ಮಾಫಿಯವನ್ನು ಕೆಲವೇ ದಿನಗಳಲ್ಲಿ ಸಂಪೂರ್ಣ ನಾಶ ಮಾಡಬಹುದು ಸ್ವಲ್ಪ ರಾಜಕೀಯ ಮತ್ತು ಆಡಳಿತಾತ್ಮಕ ಇಚ್ಛಾಶಕ್ತಿ ಇದ್ದಲ್ಲಿ. ಅದನ್ನಾದರೂ ನಮ್ಮ ಕಾಲಘಟ್ಟದಲ್ಲಿ ಮಾಡೋಣ.

 ಈಗಾಗಲೇ ಗಾಳಿ ನೀರು ಆಹಾರ ಮಲಿನವಾಗಿ ಅನಾರೋಗ್ಯ, ಆತ್ಮಹತ್ಯೆ, ಅಪಘಾತಗಳು ನಮ್ಮನ್ನು ಕಾಡುತ್ತಿರುವಾಗ, ಇದ್ಯಾವುದೋ ಡ್ರಗ್ಸ್ ಮಾಫಿಯಾ ನಮ್ಮ ಮಕ್ಕಳನ್ನು ಬಲಿ ತೆಗೆದುಕೊಳ್ಳುವ ಮುನ್ನ ಎಚ್ಚೆತ್ತುಕೊಳ್ಳೋಣ. ನಿಮ್ಮ ಶಾಸಕರು, ಸಂಸತ್ ಸದಸ್ಯರು, ಜನಪ್ರತಿನಿಧಿಗಳು, ಮಂತ್ರಿಗಳು ವಿರೋಧ ಪಕ್ಷದವರು ಎಲ್ಲೇ ಸಿಗಲಿ ಮೊದಲು ಅವರಿಗೆ ಇದರ ಬಗ್ಗೆ ಧೈರ್ಯವಾಗಿ ಪ್ರಶ್ನಿಸಿ, ಛೀಮಾರಿ ಹಾಕಿ. ಮಾಧ್ಯಮಗಳು ಸಹ ಯಾವ ಯಾವುದೋ ವಿಷಯದ ಬೆನ್ನು ಬೀಳುವುದನ್ನು ಬಿಟ್ಟು ಕನಿಷ್ಠ ಎರಡು ಮೂರು ತಿಂಗಳಲ್ಲಿ ಈ ಡ್ರಗ್ಸ್ ಮಾಫಿಯಾ ನಿರ್ಮೂಲನೆ ಮಾಡಲು ಸಹಕರಿಸಿ......ಮಾದಕ ವಸ್ತು ವ್ಯಸನ ಮತ್ತು ದುಷ್ಪರಿಣಾಮ
*******

 ಗಾಂಜಾ, ಅಫೀಮು, ಕೊಕೇನ್, ಬ್ರೌನ್ ಶುಗರ್ ಮುಂತಾದವುಗಳನ್ನು ಮಾದಕ ವಸ್ತುಗಳೆಂದು ಪರಿಗಣಿಸಲಾಗುತ್ತದೆ, ಸಿಗರೇಟು ಮಧ್ಯಪಾನ ಮುಂತಾದವುಗಳನ್ನು ದುಶ್ಚಟಗಳು ಎಂದು ಕರೆಯಲಾಗುತ್ತದೆ, ಪೆಪ್ಸಿ, ಕೋಕ್, ಫಾಂಟಾಗಳನ್ನು ಅನಾರೋಗ್ಯಕಾರಿ ಪಾನೀಯಗಳು ಎಂದು ಹೇಳಲಾಗುತ್ತದೆ, ಎಳನೀರು, ಕಬ್ಬಿನ ಹಾಲು, ರಾಗಿ ಗಂಜಿ ಮುಂತಾದವುಗಳನ್ನು ಆರೋಗ್ಯವಂತ ಪಾನೀಯಗಳು ಎಂದು ಪರಿಗಣಿಸಲಾಗುತ್ತದೆ..

 ಈಗ ಈ ಪಟ್ಟಿಯಲ್ಲಿ ಅತ್ಯಂತ ಎತ್ತರದಲ್ಲಿ, ಮೊದಲನೆಯ ಸ್ಥಾನದಲ್ಲಿರುವುದು ಡ್ರಗ್ಸ್ ಅಥವಾ ಮಾದಕ ವಸ್ತುಗಳು. ಇದು ಅತ್ಯಂತ ಅಪಾಯಕಾರಿ ಮತ್ತು ಅನಾರೋಗ್ಯಕಾರಿ.

 ಮಾದಕ ವಸ್ತುಗಳಾದ ಈ ಗಾಂಜಾ, ಅಫೀಮು, ಚರಸ್, ಬ್ರೌನ್‌ಶುಗರ್, ಕೊಕೇನ್ ಮುಂತಾದವುಗಳ ಮಾದಕ  ಗುಣವೆಂದರೆ ಅದನ್ನು ಸೇವಿಸಿದಾಗ ಆ ಕ್ಷಣದಲ್ಲಿ ನಿಮ್ಮ ಮನಸ್ಸಿನಲ್ಲಿದ್ದ ದುಃಖ, ನೋವು, ಆಕ್ರೋಶ, ಕೋಪ, ಸಂತೋಷ, ಪ್ರೀತಿ, ವಿರಹ, ದ್ವೇಷ,

ಅಸೂಯೆ ಅಥವಾ ಇನ್ನಾವುದೇ ಭಾವನೆಯಿರಲಿ ಅದು ಮತ್ತಷ್ಟು ಉದ್ವೇಗಗೊಂಡು ಆ ಮಾದಕತೆಯ ಪರಿಣಾಮ ಇರುವವರೆಗೂ ಸ್ಥಿರವಾಗಿರುತ್ತದೆ ಮತ್ತು ಆ ಮಾದಕ ವಸ್ತುಗಳೇ ಅವನ ದೇಹ ಮತ್ತು ಮನಸ್ಸನ್ನು ನಿಯಂತ್ರಿಸುತ್ತದೆ. ಆಗಲೇ ಅನೇಕ ಅಸಹಜ, ಅಸಹನೀಯ, ಅನೈತಿಕ ಅಪರಾಧಗಳಾಗುವ ಸಾಧ್ಯತೆಯೇ ಹೆಚ್ಚು....

 ಒಂದು ವೇಳೆ ನೀವು ಅದಕ್ಕೆ ಸಂಪೂರ್ಣ ದಾಸರಾಗಿದ್ದೇ ಆದರೆ ಅದರ ಪರಿಣಾಮ ಊಹಿಸಲೂ ಅಸಾಧ್ಯ. ಸಮಾಜದ ಕೆಲವೇ ಜನರು ಇದಕ್ಕೆ ದಾಸರಾಗಿದ್ದರೂ ಅದರ ಪರಿಣಾಮ ಮಾತ್ರ ಗಂಭೀರವಾದುದು. ನನ್ನ ಪ್ರಕಾರ ದೇಶದ ಸಂಸತ್ತು ಮತ್ತು ರಾಜ್ಯದ ವಿಧಾನಸಭೆಗಳು ವಿಶೇಷ ಅಧಿವೇಶನ ಕರೆದು ಇದರ  ಬಗ್ಗೆ ಚರ್ಚಿಸಿ, ತಜ್ಞರ ಸಮಿತಿ ರಚಿಸಿ, ಹೊಸ ರೀತಿಯ ಕಾರ್ಯಯೋಜನೆ ರೂಪಿಸಬೇಕಿದೆ.

ಬಹುಶಃ ಇದನ್ನು ಮೂಲೋಚ್ಚಾಟನೆ ಮಾಡಲು ಭಯೋತ್ಪಾದನೆ ನಿಗ್ರಹದಂತಹ ಗಂಭೀರ ಇಲಾಖೆಯ ಅವಶ್ಯಕತೆ ಇದೆ. ಬಹುತೇಕ ಕ್ರಿಮಿನಲ್ ಅಪರಾಧಗಳು ಇದರಿಂದಾಗಿಯೇ ನಡೆಯುತ್ತಿದೆ. ಯುವಕರು ತಮ್ಮ ಬದುಕನ್ನೇ ನಾಶಮಾಡಿಕೊಳ್ಳುತ್ತಿದ್ದಾರೆ.

 ಪ್ರಾರಂಭದಲ್ಲಿ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಮತ್ತು ಹೆಚ್ಚು ಕೇಂದ್ರೀಕೃತವಾಗಿದ್ದ ಈ ಡ್ರಗ್ಸ್ ಮಾಫಿಯಾ ಇತ್ತೀಚಿನ ವರ್ಷಗಳಲ್ಲಿ ತಾಲ್ಲೂಕು, ಹೋಬಳಿ ಕೇಂದ್ರಗಳಿಗೂ ಹಬ್ಬಿದೆ. ಅನೇಕ ವಿದೇಶಿಯರು ಕೋಟಿ ಕೋಟಿ ಗಟ್ಟಲೆ ಬೆಲೆಬಾಳುವ ಡ್ರಗ್ಸ್ ಗಳನ್ನು ಚಾಕಲೇಟು, ತಂಪು ಪಾನೀಯ, ಸಿಹಿ ಪದಾರ್ಥಗಳು ಮುಂತಾದವುಗಳ ಮೂಲಕ ನಿಧಾನವಾಗಿ ಅದರ ರುಚಿ ಹತ್ತಿಸಿ, ಮುಖ್ಯವಾಗಿ ಯುವಜನರನ್ನು ಅದಕ್ಕೆ ದಾಸರನ್ನಾಗಿ ಮಾಡುತ್ತಿವೆ...

 ಮೆಕ್ಸಿಕೋ, ಇಟಲಿ, ಆಫ್ರಿಕಾದ ಕೆಲವು ದೇಶಗಳು, ಏಷ್ಯಾದ ಕೆಲವು ದೇಶಗಳು ಅದರಲ್ಲೂ ಬಡತನದ ದೇಶಗಳಲ್ಲಿ ಈ ಜಾಲ ತುಂಬಾ ವ್ಯಾಪಕವಾಗಿದೆ.

 ಸಹಜ ಪರಿಸ್ಥಿತಿಯಲ್ಲಿ ವ್ಯಕ್ತಿಯೊಬ್ಬ ಕೊಲೆ, ಅತ್ಯಾಚಾರ, ದರೋಡೆ ಅಥವಾ ಇನ್ಯಾವುದೇ ಅಪರಾಧ ಮಾಡಲು ಸಾವಿರ ಬಾರಿ ಯೋಚಿಸುತ್ತಾನೆ ಮತ್ತು ತನ್ನ ಭವಿಷ್ಯ, ಕಾನೂನಿನ ಶಿಕ್ಷೆ, ಸಮಾಜದ ತಿರಸ್ಕಾರ ಇವುಗಳ ಬಗ್ಗೆ ಯೋಚಿಸಿ ಭಯಪಡುತ್ತಾನೆ.

ಆದರೆ ಈ ಡ್ರಗ್ ಸೇವನೆ ಅದಕ್ಕೆಲ್ಲ ಪರಿಹಾರ ರೂಪದಲ್ಲಿ ಆತನ ಯೋಚನೆಯನ್ನು ನಿಯಂತ್ರಿಸುತ್ತದೆ. ತದನಂತರ ತುಂಬಾ ಸಹಜವಾಗಿ ಮತ್ತು ಅತ್ಯಂತ ಕ್ರೌರ್ಯವಾಗಿ ಅಪರಾಧಗಳನ್ನು ಮಾಡಲು ಆತ ಸಿದ್ದನಾಗುತ್ತಾನೆ. ಇದು ಡ್ರಗ್ಸ್ ಬಗ್ಗೆ ಕಳವಳ ವ್ಯಕ್ತಪಡಿಸಲು ಇರುವ ಮುಖ್ಯ ಕಾರಣ.

 ಈ ಮಾದಕ ವಸ್ತುಗಳ ಪ್ರಚೋದನೆಗೆ ಮತ್ತೊಂದು ಸಾಧನವೆಂದರೆ ಚಲನಚಿತ್ರವೆಂಬ ವಾಣಿಜ್ಯ - ಮನರಂಜನಾ ಉದ್ಯಮ. ಅಲ್ಲಿನ ಕೆಲವು ಪಾತ್ರಗಳು ಯಾವಾಗಲೂ ಈ ಡ್ರಗ್ಸ್ ಅಮಲಿನಲ್ಲಿಯೇ ತೇಲುತ್ತಿರುತ್ತವೆ. ಆ ಪಾತ್ರಗಳು ವಿಲನ್ ಆಗಿದ್ದರೂ ಸಹ ಅದನ್ನು ಮನರಂಜನೆಯ ದೃಷ್ಟಿಯಿಂದ ಅತಿರಂಜಿಸಿ ಆಕರ್ಷಿಕವಾಗಿ ಚಿತ್ರಿಕರಿಸಲಾಗುತ್ತದೆ. ಅದು 18/20 ವರ್ಷದ ಯುವ ಜನರಲ್ಲಿ ಏನೋ ಒಂದು ರೀತಿಯ ಆಕರ್ಷಣೆ ಉಂಟುಮಾಡಿ ಅವರು ಅದರ ದಾಸ್ಯಕ್ಕೆ ಒಳಗಾಗುವುದನ್ನು ಗಮನಿಸಬಹುದು....

 ಹಿಂದೆ ಒಬ್ಬ ಪ್ರಖ್ಯಾತ ನಟ ತುಂಬಾ ವಿಭಿನ್ನ ಶೈಲಿಯಲ್ಲಿ ಸಿಗರೇಟ್ ಸೇದುವುದನ್ನು ನೋಡಿ ಅನೇಕ ಜನ ಸಿಗರೇಟ್ ಅನ್ನು ಕಲಿತು ಅದಕ್ಕೆ ದಾಸರಾಗಿರುವುದನ್ನು ಕಾಣುತ್ತೇವೆ. ಇದು ವೈಯಕ್ತಿಕ ಸಮಸ್ಯೆಯಲ್ಲ. ಭಾರತವನ್ನು ಮಾದಕ ದ್ರವ್ಯ ಮುಕ್ತ ರಾಷ್ಟ್ರ ಮಾಡಲು ಉಪಾಯ ಹುಡುಕಬೇಕಿದೆ.

ಇದು ವಿವಿಧ ಹಂತಗಳ ಕಾರ್ಯಕ್ರಮವಾಗಿರಬೇಕು. ಕೇವಲ ಕಾನೂನಿನಿಂದ ಇದನ್ನು ತಡೆಯಲು ಸಾಧ್ಯವಾಗುವುದಿಲ್ಲ. ಸಮಾಜದ ನೈತಿಕ ಮೌಲ್ಯಗಳನ್ನು ಹೆಚ್ಚಿಸುವುದು, ಯುವ ಜನಾಂಗವನ್ನು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಅತ್ಯುತ್ತಮ ಕ್ರೀಡಾ ಸಂಕೀರ್ಣ ಮತ್ತು ಸಾಂಸ್ಕೃತಿಕ ಭವನಗಳನ್ನು ನಿರ್ಮಿಸುವುದು,

ಮಾದಕ ವ್ಯವಸನಿಗಳು ಯಾರೇ ಆಗಿದ್ದರು ಯಾರ ಅನುಮತಿಯ ಅವಶ್ಯಕತೆ ಇಲ್ಲದೆ ಕೊರೋನಾ ವೈರಸ್ ಪೀಡಿತರಂತೆ ನೇರವಾಗಿ ಸರ್ಕಾರವೇ ಅವರನ್ನು ಅರೆ ಜೈಲಿನಂತ ಸುಧಾರಣಾ ಕೇಂದಕ್ಕೆ ಸೇರಿಸಿ ಸಂಪೂರ್ಣ ಗುಣಮುಕ್ತ ಎಂದು ವೈದ್ಯರು ಹೇಳಿದ ನಂತರವೇ ಬಿಡುಗಡೆ ಮಾಡಬೇಕು. ಅದಕ್ಕಿಂತ ಮುಖ್ಯವಾಗಿ ಆ ಮಾದಕ ವಸ್ತುಗಳ ಉತ್ಪಾದಕರನ್ನು ಭಯೋತ್ಪಾದಕರೆಂದೇ ಪರಿಗಣಿಸಬೇಕು.

 ಈ ಇಚ್ಛಾಶಕ್ತಿ ಇಲ್ಲದೆ, ಸುಮ್ಮನೆ ದಾಳಿಗಳು, ತನಿಖೆ, ಬಂಧನ ಎಲ್ಲವೂ ಕೇವಲ ಕಣ್ಣೊರೆಸುವ ತಂತ್ರ ಮಾತ್ರ. ಲೇಖನ:ವಿವೇಕಾನಂದ. ಎಚ್. ಕೆ.9844013068

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು