Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Crime News

ಪುರುಷಾಧಿಪತ್ಯ ಸಮಾಜದ ತುಳಿತಕ್ಕೆ ಒಳಗಾಗುವ ಮಹಿಳೆಯರು!?-ಶಾಂತ ಗುಂಡಪ್ಪ

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ – ಟಿಪ್ಪಣಿ-ಶಾಂತ ಗುಂಡಪ್ಪ...

ನಾವೆಲ್ಲ ಮತ್ತೊಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗಿಯಾಗುತ್ತಿದ್ದೇವೆ.

ಮಹಿಳಾ ಸಮುದಾಯದ ಹಕ್ಕು, ಹೋರಾಟ, ಅಸ್ಮಿತೆಗಳ ಪ್ರತಿಪಾದನೆ ಮತ್ತು ರಕ್ಷಣೆಯ ದೃಷ್ಟಿಯಿಂದ ಈ ಮಹಿಳಾ ದಿನಾಚರಣೆಗೆ ವಿಶೇಷ ಮಹತ್ವ ಇದೆ. ಮಹಿಳೆಯರು ಶತಮಾನಗಳಿಂದ ಎಲ್ಲ ದೇಶ ಕಾಲದಲ್ಲೂ ಪುರುಷಾಧಿಪತ್ಯ ಸಮಾಜದ ತುಳಿತಕ್ಕೆ ಒಳಗಾಗಿ ಎಲ್ಲ ಬಗೆಯ ಹಕ್ಕುಗಳಿಂದ ವಂಚಿತರಾಗುತ್ತಲೇ ಬಂದಿದ್ದಾರೆ. ಆದರೆ, ಆಧುನಿಕ ಪ್ರಜಾತಾಂತ್ರಿಕ ಚಿಂತನೆ, ಸಮಾನತೆಯ ಆಶಯದ ಕಾರ್ಮಿಕ ಹೋರಾಟಗಳ ಫಲವಾಗಿ ಮಹಿಳೆಯರು ಸಹಾ ಪುರುಷರಿಗೆ ಸಮಾನಾಗಿ ಹಕ್ಕುಗಳನ್ನು ಪಡೆದುಕೊಳ್ಳುವ ಅವಕಾಶಗಳು ಒದಗಿ ಬಂದವು.

 ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಏಕಾಏಕಿ ಘೋಷಣೆಯಾಗಿದ್ದಲ್ಲ. ಈ ಪರಿಕಲ್ಪನೆ ಕಾರ್ಮಿಕ ಚಳುವಳಿಯ ಹಿನ್ನೆಲೆಯಲ್ಲಿ ರೂಪುಗೊಂಡಿದೆ ಎಂಬುದನ್ನು ನಾವೆಲ್ಲ ಮನಗಾಣಬೇಕು.  1908 ರಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಬೀಜಗಳು ಮೊಳಕೆಯೊಡದವು. ಕಡಿಮೆ ಗಂಟೆಗಳ ಕೆಲಸದ ಅವಧಿ, ಸೂಕ್ತ ವೇತನ, ಮತ ಚಲಾಯಿಸುವ ಹಕ್ಕು ನೀಡಬೇಕೆಂದು ಆಗ್ರಹಿಸಿ ಸಹಸ್ರಾರು ಮಹಿಳೆಯರು ನ್ಯೂಯಾರ್ಕ್ ಸಿಟಿಯಲ್ಲಿ ಪ್ರತಿಭಟನೆಗಳನ್ನು ನಡೆಸಿದರು.

ಈ ಮಹಿಳೆಯರ ಬೇಡಿಕೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅಲ್ಲಿನ ಸೋಶಿಯಲಿಸ್ಟ್ ಪಾರ್ಟಿ 1909 ರಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಘೋಷಿಸಿತು. ಕಮ್ಯೂನಿಷ್ಟ್ ಹೋರಾಟಗಾರ್ತಿಯಾಗಿದ್ದ ಕ್ಲಾರಾಜೆಟ್ಕಿನ್ ಇದನ್ನು  ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ವಹಿಸಬೇಕು ಎನ್ನುವ ಆಶಯ ಹೊಂದಿದ್ದರು. ಅವರು ಕೂಪನ್ ಹೇಗನ್ ನಗರದಲ್ಲಿ 1910 ರಲ್ಲಿ ನಡೆದ ಅಂತಾರಾಷ್ಟ್ರೀಯ ದುಡಿಯುವ ಮಹಿಳಾ ಸಮಾವೇಶದಲ್ಲಿ ಇದನ್ನು ಪ್ರತಿಪಾದಿಸಿದರು. 17 ದೇಶಗಳಿಂದ ಹಾಜರಾಗಿದ್ದ 100 ಮಹಿಳಾ ಪ್ರತಿನಿಧಿಗಳು ಇದನ್ನು ಒಮ್ಮತದಿಂದ ಅನುಮೋದಿಸಿದರು. ನಂತರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮೊದಲ ಬಾರಿಗೆ 1911 ರಲ್ಲಿ ಆಸ್ಟ್ರಿಯಾ, ಡೆನ್ಮಾರ್ಕ್, ಸ್ವಿಜರ್‌ಲ್ಯಾಂಡ್, ಜರ್ಮನಿ ದೇಶಗಳಲ್ಲಿ ನಿರ್ವಹಿಸಲಾಯಿತು.

ವಿಶ್ವ ಸಂಸ್ಥೆಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು 1975 ರಿಂದ ವಿದ್ಯುಕ್ತವಾಗಿ ಆಚರಿಸುತ್ತಾ ಬಂದಿದೆ. ಕೆಲಸ ಮಾಡುವ ಸಾಮರ್ಥ್ಯ ಇರುವ ಮಹಿಳೆಯರಲ್ಲಿ ಶೇ ಅರ್ಧದಷ್ಟು ಮಹಿಳೆಯರು ಮಾತ್ರವೇ ಪ್ರಪಂಚ ಕಾರ್ಮಿಕ ಶಕ್ತಿಯ ಭಾಗವಾಗಿದ್ದಾರೆ ಎಂದು ವಿಶ್ವ ಸಂಸ್ಥೆಯ ಅಂಕಿ ಅಂಶಗಳು ಹೇಳುತ್ತಿವೆ. ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಮಹಿಳೆಯರು ಯಾವ ಸ್ಥಾನದಲ್ಲಿದ್ದಾರೆ? ಅವರ ಭವಿಷ್ಯದ ಮುನ್ನೋಟ ಹೇಗಿರಬೇಕು? ಯಾವ ಸವಾಲುಗಳು ನಮ್ಮ ಮುಂದಿವೆ? ಅವುಗಳನ್ನು ಎದುರಿಸುವ ಅಥವಾ ಪರಿಹರಿಸಿಕೊಳ್ಳುವ ಕಾರ್ಯಸೂಚಿ ಏನಾಗಿರಬೇಕು ಎಂಬುದನ್ನು ಸಮಾಲೋಚಿಸುವ ವೇದಿಕೆಯಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಗುರುತಿಸಲಾಗಿದೆ.

 1917 ರ ಕ್ರಾಂತಿಯ ಸಮಯದಲ್ಲಿ ರಷ್ಯಾದ ಮಹಿಳೆಯರು ಆಹಾರ ಮತ್ತು ಶಾಂತಿಗಾಗಿ ಒತ್ತಾಯಿಸಿ ಮುಷ್ಕರಕ್ಕಿಳಿದರು. ನಾಲ್ಕು ದಿನಗಳ ನಂತರ ಅಂದಿನ ರಷ್ಯಾದ ಚಕ್ರವರ್ತಿ ನಿಕೋಲಸ್ ಜಾರ್ ೨ ಸಿಂಹಾನದಿಂದ ಪದಚ್ಯುತನಾಗಬೇಕಾಯಿತು. ಆಗ ರೂಪುಗೊಂಡ ತಾತ್ಕಾಲಿಕ ಸರಕಾರ ಮಹಿಳೆಯರಿಗೆ ಓಟು ಚಲಾಯಿಸುವ ಹಕ್ಕನ್ನು ಮಂಜೂರು ಮಾಡಿತು. ಮಹಿಳೆಯರು ಚಳುವಳಿಗೆ ಇಳಿದ ದಿನ ಮಾರ್ಚ್ 8 ಆಗಿದ್ದರಿಂದ ಇದನ್ನೇ ಅಂತಾರಾಷ್ಟ್ರೀಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಇಂದಿಗೂ ಮುಂದುವರಿಯುತ್ತಿರುವ ಲಿಂಗ ತಾರತಮ್ಯ, ಪುರುಷ ಪ್ರಧಾನ ಸಮಾಜದ ಧೋರಣೆಗಳ ವಿರುದ್ಧ ಹೋರಾಟಗಳನ್ನು ರೂಪಿಸುವುದು, ಎಲ್ಲ ಬಗೆಯ ದಮನ, ಹಿಡಿತಗಳಿಂದ ಮಹಿಳಾ ಸಮುದಾಯವನ್ನು ಸೂಕ್ತ ಶಿಕ್ಷಣದ ಮೂಲಕ ಜಾಗೃತಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

 ನಮ್ಮ ದೇಶದ ಒಕ್ಕೂಟ ಸರಕಾರ ಸೇರಿದಂತೆ ಎಲ್ಲ ರಾಜ್ಯ ಸರಕಾರಗಳು ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಹಲವು ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಟಾನಗೊಳಿಸುತ್ತಿವೆ. ಮಹಿಳೆಯರ ವಿಮೋಚನೆಯ ಪ್ರಶ್ನೆ ಬಂದಾಗಲೆಲ್ಲ ಮಹಿಳಾ ಸಬಲೀಕರಣದ ಮಾತುಗಳು ಕೇಳಿಬರುತ್ತಿವೆ. ಈ ಸಬಲೀಕರಣ ಎನ್ನುವುದು ಬಹಳ ಆಳವಾದ ಅರ್ಥವನ್ನೊಳಗೊಂಡಿದೆ. ತುಂಬಾ ವಿಸ್ತೃತ ನೆಲೆಯಲ್ಲಿ ಮಹಿಳಾ ಸಬಲೀಕರಣ ಎನ್ನುವ ಪರಿಕಲ್ಪನೆ ಬಳಸಬೇಕಿದೆ. ಗರ್ಭಿಣಿ ಸ್ತ್ರೀಯರಿಗೆ ಪೌಷ್ಟಿಕಾಹಾರ, ಶಕ್ತಿ ಯೋಜನೆ, ಗೃಹಲಕ್ಷ್ಮೀಯಂತ ಆರ್ಥಿಕವಾಗಿ ನೆರವು ನೀಡುವ ಯೋಜನೆಗಳು ಸಂಕಷ್ಟದಲ್ಲಿರುವ ಮಹಿಳೆಯರಿಗೆ ಒಂದಷ್ಟು ಉಸಿರಾಡಲು ಶಕ್ತಿ ನೀಡಿವೆ. ಮಹಿಳಾ ಶಿಕ್ಷಣಕ್ಕೂ ತಕ್ಕ ಮಟ್ಟಿನ ನೆರವು ಸಿಗುತ್ತಿದೆ. ಆದರೆ, ಮಹಿಳಾ ಸಬಲೀಕರಣದ ವಿಷಯವನ್ನು ಕೇವಲ ಬೆರಳೆಣಿಕೆಯ ಸೌಲಭ್ಯಗಳ ಜೊತೆ ತಳುಕು ಹಾಕಿ ನೋಡುವುದು ಸರಿಯಾದ ಕ್ರಮವಲ್ಲ.

 ಇಂದಿಗೂ ಶೇಕಡಾವಾರು ಮಹಿಳೆಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕಳೆದೊಂದು ದಶಕದಲ್ಲಿ ಈ ಪರಿಸ್ಥಿತಿಯಲ್ಲಿ ಸ್ವಲ್ಪ ಬದಲಾವಣೆ ಬಂದಿದ್ದರೂ, ಗ್ರಾಮೀಣ ಪರಿಸ್ಥಿತಿ ಇನ್ನೂ ಮಹಿಳಾ ಶಿಕ್ಷಣಕ್ಕೆ ಹೆಚ್ಚು ತೆರೆದುಕೊಳ್ಳಬೇಕಿದೆ. ವಿಶೇಷವಾಗಿ ಆರೋಗ್ಯ ಮತ್ತು ಪೌಷ್ಟಿಕಾಹಾರದ ಕೊರತೆ ಎದುರಿಸುತ್ತಿರುವವರಲ್ಲಿ ಮಹಿಳೆಯರೇ ಹೆಚ್ಚಾಗಿದ್ದಾರೆ. ಅವರ ಶೈಕ್ಷಣಿಕ ಮತ್ತು ಔದ್ಯೋಗಿಕ, ವೈಯಕ್ತಿಕ ಆಯ್ಕೆಗಳ ವಿಚಾರದಲ್ಲಿ ಇನ್ನೂ ಅವಲಂಬಿತರಾಗಿಯೇ ಇದ್ದಾರೆ. ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಸ್ವಯಂ ನಿರ್ಣಯ ಕೈಗೊಳ್ಳುವ ಸಾಮರ್ಥ್ಯ ಬಂದಾಗಲೇ ನಿಜಾರ್ಥದ ಮಹಿಳಾ ಸಬಲೀಕರಣ ಸಾಧ್ಯವಾಗಲಿದೆ.

 ಸಮಾಜದಲ್ಲಿ ಶೇ 50 ರಷ್ಟು ಪಾಲನ್ನು ಮಹಿಳೆಯರು ಸಂಖ್ಯಾತ್ಮಕವಾಗಿ ಹೊಂದಿದ್ದಾರೆ. ಈ ನೆಲದ ಎಲ್ಲ ಕಾನೂನು, ನೀತಿ ನಿರೂಪಣೆಗಳ ಪ್ರಭಾವ ಮಹಿಳೆಯರ ಮೇಲೂ ಇರುತ್ತದೆ. ಆದರೆ, ಶಾಸನ ರೂಪಿಸುವ ಶಾಸನ ಸಭೆಯಲ್ಲಾಗಲೀ, ಸಂಸತ್ತಿನಲ್ಲಾಗಲೀ  ಇಂತಹ ಸಂದರ್ಭದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ತೀರಾ ನಗಣ್ಯವಾಗಿದೆ. ದೇಶದ ಅಭಿವೃದ್ಧಿ, ರಕ್ಷಣೆಯಂತ ವಿಷಯಗಳಲ್ಲಿ ಮಹಿಳೆಯರ ಅಭಿಪ್ರಾಯಗಳನ್ನು ಒಳಗೊಳ್ಳುವ ಕೆಲಸ ಆಗುತ್ತಿಲ್ಲ. ಎಲ್ಲ ಬಗೆಯ ಶಾಸನಾತ್ಮಕ ನೀತಿ ನಿರ್ಧಾರಗಳಲ್ಲಿ ಮಹಿಳೆಯರನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಾಗಲೇ ನಿಜವಾದ ಸಬಲೀಕರಣ ಆಗಲಿದೆ.

ದೇಶದ ಎಲ್ಲ ಕಡೆ ಮಹಿಳೆಯರ ಮೇಲಿನ ಶೋಷಣೆ, ದೌರ್ಜನ್ಯ, ಕಿರುಕುಳದ ವಿರುದ್ದ ಹೋರಾಟ ರೂಪಿಸುತ್ತಿರುವ ಸಂಘಟನೆಗಳು, ಶಿಕ್ಷಣ ಪಡೆಯುತ್ತಿರುವ ಎಲ್ಲ ಹೆಣ್ಣು ಮಕ್ಕಳು ನಿಜವಾದ ಮಹಿಳಾ ಸಬಲೀಕರಣಕ್ಕೆ ಬೇಕಾಗಿರುವ ಅಂಶಗಳೇನು ಎಂಬುದನ್ನು ಸಮಾಜದ ಮುಂದಿಡಬೇಕು. ವಿಶೇಷವಾಗಿ ರಾಜಕೀಯ ಅಜೆಂಡಾಗಳ ಚರ್ಚೆಗಳಲ್ಲಿ ಇಂತಹ ಅಂಶಗಳನ್ನು ಮುಂಚೂಣಿಗೆ ತರಬೇಕು. ಉದ್ಯೋಗದಲ್ಲಿ ಪುರುಷರಷ್ಟೇ ಸಮಾನ ವೇತನ ಎಲ್ಲ ಕ್ಷೇತ್ರಗಳಲ್ಲೂ ಸಿಗುತ್ತಿಲ್ಲ. ಮಹಿಳೆಯ ಕಾರ್ಮಿಕ ಶಕ್ತಿಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ.

ಸರಕಾರಿ, ಕಾರ್ಪೋರೇಟ್ ವಲಯದಲ್ಲಿ ಇಂತಹ ತಾರತಮ್ಯದ ಪ್ರಮಾಣ ಕಡಿಮೆ ಇದ್ದರೂ, ಸಿಂಹಪಾಲು ಉದ್ಯೋಗ ಒದಗಿಸುವ ಅಸಂಘಟಿತ ಕ್ಷೇತ್ರದಲ್ಲಿ ವೇತನ ತಾರತಮ್ಯ ಮುಂದುವರಿದೆ. ಈಗಲೂ ಮುಂದುವರಿಯುತ್ತಿರುವ ಕೌಟುಂಬಿಕ ಹಿಂಸೆ, ಸಂಪ್ರದಾಯ, ಕಟ್ಟಳೆಗಳ ಹೆಸರಲ್ಲಿನ ಶೋಷಣೆ, ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ಇಡೀ ಮಹಿಳಾ ಸಮುದಾಯ ಧ್ವನಿ ಎತ್ತಬೇಕಿದೆ. ಇಂತಹ ಪ್ರಶ್ನೆಗಳು, ಸವಾಲುಗಳಿಗೆ ಮುಖಾಮುಖಿಯಾಗುತ್ತಾ ಅಂತಾರಾಷ್ಟ್ರೀಯ ದುಡಿಯುವ ಮಹಿಳಾ ದಿನಾಚರಣೆಯ ಸಾರ್ಥಕತೆ, ಘನತೆ ಹೆಚ್ಚಿಸಬೇಕಿದೆ.
ಲೇಖನ:ಶಾಂತ, ಗುಂಡಪ್ಪ, ಚಿತ್ರದುರ್ಗ.

 

Advertisement

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು