ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಶ್ರೀಮಾತೆ ಶಾರದಾದೇವಿ ಅವರು ಭಗವತ್ ತತ್ವದ ಮಾತೃ ಸ್ವರೂಪವೇ ಆಗಿದ್ದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯಿ ಅಭಿಪ್ರಾಯಪಟ್ಟರು.
ನಗರದ ಬೆಂಗಳೂರು ರಸ್ತೆಯ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಶ್ರೀಮಾತೆ ಶಾರದಾದೇವಿ ಅವರ 172ನೇ ಜಯಂತೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು “ಶ್ರೀಮಾತೆ ಶಾರದಾದೇವಿ ಅವರ ಜೀವನ ಮತ್ತು ಚಾರಿತ್ರ್ಯವು ಅನೇಕ ವಿಶೇಷ ಗುಣಗಳಿಂದ ಕೂಡಿದೆ.
ಅವರು ತಮ್ಮ ನಿರಹಂಕಾರ, ಸದಾ ಕರ್ಮಶೀಲತೆ, ಸರಳತೆ, ಸಹಿಷ್ಣುತೆ ಇತ್ಯಾದಿ ಸದ್ಗುಣಗಳಿಂದ ಸಮಸ್ತ ಸ್ತ್ರೀ–ಪುರುಷರು ಗೃಹಸ್ಥರು–ಸಂನ್ಯಾಸಿಗಳು ಸಾಧಕರು–ಸಂಸಾರಿಗಳು ಎಲ್ಲರಿಗೂ ಅನುಕರಣೇಯವಾದ ಸರ್ವೋನ್ನತ ಆದರ್ಶ ತೋರಿಸಿಕೊಟ್ಟಿದ್ದಾರೆ. ಆದರೆ ವಿಶ್ವದ ಎಲ್ಲ ಜೀವರಾಶಿಗಳ ಕುರಿತಾದ ಅವರ ಮಾತೃತ್ವವು ಎಲ್ಲಕಿಂತ ಅಧಿಕವಾಗಿ ಎಲ್ಲರನ್ನೂ ಆಕರ್ಷಿಸುವಂತಹ ಪ್ರಭಾವಿತಗೊಳಿಸುವಂತಹ ಅವರ ಒಂದು ವಿಶೇಷ ಗುಣ ಎಂದು ಹೇಳಬಹುದು ಎಂದು ತಿಳಿಸಿದರು.
ತಾವು ಎಲ್ಲರ ತಾಯಿ ಎಂದು ಅವರೇ ಹೇಳಿರುವರು. ಮನುಷ್ಯರಿಗಷ್ಟೇ ಅಲ್ಲ, ದೇವರ ಸೃಷ್ಟಿಯ ಸಕಲ ಜೀವರಾಶಿಗಳಿಗೂ ಅವರು ತಾಯಿಯಾಗಿದ್ದರು. ಅವರ ಈ ವಿಶ್ವವ್ಯಾಪಕ ಮಾತೃತ್ವವು ಶ್ರೀಮಾತೆಯವರ ನಡೆನುಡಿಯಲ್ಲೂ ಸ್ಪಷ್ಟವಾಗಿ ಗಮನಕ್ಕೆ ಬರುತ್ತಿತ್ತು. ಅವರು ಈ ಯುಗದ ಸಮಸ್ತ ನಾರಿ ವರ್ಗದ ಆದರ್ಶವಾಗಿದ್ದರು.
ಅವರು ಮಾನವ ದೇಹವನ್ನು ಧರಿಸಿ, ಸಾಮಾನ್ಯ ಗೃಹಿಣಿಯಂತೆ ಇರುತ್ತಿದ್ದರು. ಆದರೆ ಅವರು ಸಾಕ್ಷಾತ್ ಜಗಜ್ಜಗನಿಯಾಗಿದ್ದರು ಎಂದು ಶ್ರೀಮಾತೆ ಶಾರದಾದೇವಿ ಅವರ ಮಾತೃ ವಾತ್ಸಲ್ಯದ ವಿವಿಧ ಮುಖಗಳನ್ನು ಬಣ್ಣಿಸಿದರು.
ಪ್ರವಚನ ಕಾರ್ಯಕ್ರಮಕ್ಕೆ ಮೊದಲು ಶ್ರೀಶಾರದಾಶ್ರಮದ ಸದ್ಭಕ್ತರಿಂದ “ಶಾರದಾದೇವಿ” ಅವರ ಕುರಿತ ಸಾಮೂಹಿಕ ಭಜನಾ ಕಾರ್ಯಕ್ರಮ,108 ಶ್ರೀರಾಮಕೃಷ್ಣ ನಾಮದ ಅರ್ಚನೆ ಮತ್ತು ಶ್ರೀಶಾರದಾಶ್ರಮದ ಯುವಕ ಯುವತಿಯರಿಂದ “ನಮ್ಮ ಪ್ರಶ್ನೆಗೆ ಶ್ರೀಮಾತೆಯವರ ಉತ್ತರ” ಎಂಬ ವಿಷಯದ ಕುರಿತು ವಿಶೇಷ ನಾಟಕ ಪ್ರದರ್ಶನ ಕಾರ್ಯಕ್ರಮವು ನಡೆಯಿತು.
ಈ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ನೇತಾಜಿ ಪ್ರಸನ್ನ, ಸಂಧ್ಯಾ, ಯಶೋಧಾ ಪ್ರಕಾಶ್, ಪಿ.ಎಸ್ ಮಾಣಿಕ್ಯ, ವನಜಾಕ್ಷಿ ಮೋಹನ್, ಕವಿತಮ್ಮ, ಗೀತಾ ನಾಗರಾಜ್, ಗೀತಾ ವೆಂಕಟೇಶರೆಡ್ಡಿ, ಯತೀಶ್ ಎಂ ಸಿದ್ದಾಪುರ, ಪ್ರವೀಣ್, ಸುಮನ, ರಮೇಶ್, ರವಿಚಂದ್ರ, ಸಂತೋಷ್, ಚೇತನ್, ಡಾ.ಭೂಮಿಕ, ಸುಕೃತಿ, ಪುಷ್ಪ, ಕಾವ್ಯ, ಮಾನ್ಯ, ಮಂಜುಳ ಉಮೇಶ್, ಶ್ರೀಧರ್, ರಶ್ಮಿ ವಸಂತ, ಕೃಷ್ಣವೇಣಿ, ಶೈಲಜ ಸೇರಿದಂತೆ ಶ್ರೀಶಾರದಾಶ್ರಮದ ಸದ್ಭಕ್ತರು ಭಾಗವಹಿಸಿದ್ದರು.