ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
108 ಆ್ಯಂಬುಲೆನ್ಸ್ ಸೇವೆ ಮತ್ತು ನಿರ್ವಹಣೆಯನ್ನು ಸರ್ಕಾರವೇ ಮಾಡಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದ ಶೇಷಾದ್ರೀಪುರಂ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಏಜೆನ್ಸಿ ಮೂಲಕ 108 ಆ್ಯಂಬುಲೆನ್ಸ್ ಸೇವೆ ಮತ್ತು ನಿರ್ವಹಣೆ ನಡೆಯುವುದಿಲ್ಲ. ಈಗಾಗಲೇ ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ. ಸಂಪೂರ್ಣ ಸರ್ವಿಸ್ ಹಾಗೂ ನಿರ್ವಹಣೆ ಸರ್ಕಾರವೇ ನಡೆಸಲು ಮುಂದಾಗಿದೆ. ಆರೋಗ್ಯ ಇಲಾಖೆಯಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
108 ಆ್ಯಂಬುಲೆನ್ಸ್ ಸಿಬ್ಬಂದಿ ಮೂರು ಶಿಫ್ಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಏಜೆನ್ಸಿ ಮೂಲಕ ನಡೆಯುತ್ತದೆ. ಹೀಗಾಗಿ ಸಿಬ್ಬಂದಿಗಳು ಏಜೆನ್ಸಿ ಜೊತೆ ಮಾತನಾಡಬೇಕು ಎಂದರು.
30 ಸಾವಿರ ಸಿಬ್ಬಂದಿ ವೇತನವಾಗದ ವಿಚಾರವಾಗಿ ಪ್ರತಿಕ್ರಿಯಿಸಿದ್ದು, 2023-24 ರಲ್ಲಿ ಓಪನಿಂಗ್ ಬ್ಯಾಲೆನ್ಸ್ ಇರುತ್ತಿತ್ತು. ಆದರೆ ಕಳೆದ ಸರ್ಕಾರದಿಂದ ಓಪನಿಂಗ್ ಬ್ಯಾಲೆನ್ಸ್ ಕಡಿಮೆಯಾಗಿದೆ. ಹೀಗಾಗಿ ನಾವು ರಾಜ್ಯ ಸರ್ಕಾರದಿಂದ ಕೊಡಲು ಆಗುತ್ತಿಲ್ಲ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡದ ಹಿನ್ನಲೆ ಕೊಂಚ ವಿಳಂಬವಾಗಿದೆ. ಇನ್ನೇರಡು ಮೂರು ದಿನಗಳಲ್ಲಿ ವೇತನ ಆಗಲಿದೆ. ನಾವು ಯಾವುದೇ ವೇತನ ತಡೆ ಹಿಡದಿಲ್ಲ ಎಂದು ಸಚಿವರು ತಿಳಿಸಿದರು.
ಎಂಬಿಬಿಎಸ್ ವೈದ್ಯರು, ತಜ್ಞ ವೈದ್ಯರು ಹಾಗೂ ಎಸ್ಎನ್ಸಿಯು ಮತ್ತು ಐಸಿಯುದಲ್ಲಿ ಕಾರ್ಯ ನಿರ್ವಹಿಸುವ ಸ್ಟಾಫ್ ನರ್ಸ್ಗಳ ವೇತನ ಪರಿಷ್ಕರಿಸಿ ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಕುಕ್ಕೆ ಸುಬ್ರಮಣ್ಯದ ವ್ಯವಸ್ಥಾಪನಾ ಆಡಳಿತ ಮಂಡಳಿ ಅಧ್ಯಕ್ಷನಾಗಿ ಹರೀಶ್ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ಚುನಾವಣೆ ಮೂಲಕ ಹರೀಶ್ ಇಂಜಾಡಿ ಆಯ್ಕೆಯಾಗಿದ್ದು ಇದು ಒಳ್ಳೆ ಬೆಳವಣಿಗೆ ಅಲ್ಲ. ಮುಜರಾಯಿ ಇಲಾಖೆ ಸಚಿವರ ಜತೆ ಮಾತನಾಡುತ್ತೇನೆ. ಆದರೂ ಕಾನೂನಿನ ಪ್ರಕಾರ ಹರೀಶ್ ಬದಲಾವಣೆ ಅಸಾಧ್ಯ. 3 ವರ್ಷ ಅಧಿಕಾರಾವಧಿ ಇರುತ್ತೆ ಎಂದು ಅವರು ತಿಳಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮೇ-15 ರಿಂದ ಅಸ್ತಿತ್ವಕ್ಕೆ ಬರುವ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬಿಬಿಎಂಪಿಗೆ ಹೊಸ ಕಾಯಕಲ್ಪ ಕೊಟ್ಟಿದೆ. ಅಧಿವೇಶನದಲ್ಲಿ ಕೂಡ ಚರ್ಚೆ ಆಗಿ ಶಾಸಕರ ಸಮಿತಿ ವರದಿ ಕೊಟ್ಟು, ಸಾರ್ವಜನಿಕರ ಜೊತೆ ಚರ್ಚೆ ಆಗಿ ರಾಜ್ಯ ಪಾಲರು ಅನುಮೋದನೆ ಕೊಟ್ಟು ಮಾನ್ಯತೆ ಸಿಕ್ಕಿದೆ ಎಂದರು.
ಬೆಂಗಳೂರು ವಿಶ್ವ ದರ್ಜೆ ನಗರ. ಇದರ ಬೆಳವಣಿಗೆ ಮತ್ತು ಮುಖ್ಯ ವಿಷ್ಯ ಏನಂದರೆ, ಆಡಳಿತ ವ್ಯವಸ್ಥೆ ಸುಧಾರಣೆ ಮಾಡುವ ಅವಶ್ಯಕತೆ ಇದೆ ಎಂದು ತಿಳಿಸಿದರು.