ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗುತ್ತಿಗೆದಾರರಿಗೆ ನೀಡಬೇಕಿದ್ದ ಬಾಕಿ 32,000 ಕೋಟಿ ರೂಪಾಯಿಯನ್ನು ಮುಂದಿನ ಎರಡು-ಮೂರು ತಿಂಗಳಲ್ಲಿ ಸರ್ಕಾರದಿಂದ ಪಾವತಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ (KSCA) ಜೊತೆ ಬೆಂಗಳೂರಿನ ಅವರ ಸರ್ಕಾರಿ ನಿವಾಸದಲ್ಲಿ ಸಭೆ ನಡೆಸಿ ಮಾತನಾಡಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಮಂಜುನಾಥ್, ಗುತ್ತಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಉಪಮುಖ್ಯಮಂತ್ರಿಗಳಿಗೆ ವಿವರಿಸಿದ್ದೇವೆ. ಸಣ್ಣ ಗುತ್ತಿಗೆದಾರರ ಬಾಕಿ ಬಿಲ್‌ಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಸಣ್ಣ ಗುತ್ತಿಗೆದಾರರಲ್ಲಿ ಹಿರಿತನದ ಆಧಾರದ ಮೇಲೆ ಬಾಕಿ ಪಾವತಿಸುವುದಾಗಿ ಡಿಕೆ ಶಿವಕುಮಾರ್ ಅವರು ಭರವಸೆ ನೀಡಿದ್ದಾರೆ. ಬಿಲ್‌ಗಳನ್ನು ಪಾವತಿ ಮಾಡುವಾಗ ಸಂಬಂಧಿಸಿದ ಅಧಿಕಾರಿಗಳು ಮಾಡುವ ತಪ್ಪುಗಳು ಸಿಎಂ ಅಥವಾ ಸಚಿವರಿಗೆ ತಿಳಿದಿಲ್ಲ. ನಾವು ಇದನ್ನು ಉಪಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಬಾಕಿ ಬಿಲ್‌ಗಳನ್ನು ಪಾವತಿ ಮಾಡುವುದಾಗಿ ಡಿಸಿಎಂ ಶಿವಕುಮಾರ್ ಅವರು ಭರವಸೆ ನೀಡಿದ್ದಾರೆಂದು ಅಧ್ಯಕ್ಷ ಮಂಜುನಾಥ್ ತಿಳಿಸಿದರು.
ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಡಿಸಿಎಂ ಜೊತೆ ನಡೆಸಿದ ಸಭೆ ಫಲಪ್ರದವಾಗಿದೆ. ಯಾವುದೇ ಸಮಸ್ಯೆ ಇದ್ದರೆ ತಮ್ಮನ್ನು ಸಂಪರ್ಕಿಸುವಂತೆ ಉಪ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಬಿಜೆಪಿ ಆಡಳಿತಾವಧಿಯಲ್ಲಿ ಅಧಿಕಾರಿಗಳು ಮಾಡಿದ ತಪ್ಪುಗಳು ಶಿವಕುಮಾರ್ ಅವರಿಗೆ ತಿಳಿದಿದೆ. ಇದನ್ನು ಸರಿಪಡಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಸಣ್ಣ ಗುತ್ತಿಗೆದಾರರಿಗೆ ಪರಿಹಾರ ಸಿಗಬೇಕೆಂದು ನಾವು ಬಯಸುತ್ತೇವೆಂದು ಅಧ್ಯಕ್ಷ ಮಂಜುನಾಥ್ ತಿಳಿಸಿದರು.