ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪರ್ವಾಗಿಲ್ಲ ವೀರು ಪಡಿಬೇಕು ಅನ್ನೋ ಹಠವೂ ನನಗಿಲ್ಲ. ಆದ್ರೆ ಚಿಕ್ಕಮ್ಮನಾಗಿ, ನಿಮ್ಮ ತಂದೆಗೆ ನೆಪಕ್ಕೆ ಹೆಂಡತಿಯಾಗಿ, ಅಂತರಂಗದ ಬಯಕೆಗಳಿಗೆ ಕೊಳ್ಳಿ ಇಟ್ಕೊಳ್ಳೋದಕ್ಕೆ ನಾನು ತಯಾರಿಲ್ಲ ನನ್ನ ಹೆದರಿಸಿ ಪಡಿಬೇಕು ಅಂತಿದಿರಲ್ವಾ.
ಇಲ್ಲ ಹಾಗಂತ ಮಾತ್ರ ಅನ್ಕೋಬೇಡ, ಈ ಮನೆಗೆ ಇನ್ನೊಂದು ಹೆಣ್ಣು ತಂದು ನನ್ನ ಬೀದಿಗೆ ಬಿಡೋದ್ರಲ್ಲಿ ಯಾವ ಅರ್ಥವಿದೆ. ವಯಸ್ಸಲ್ಲಿ ನಿಮಗಿಂತಲೂ ಚಿಕ್ಕವಳು ನಿಮ್ಮಪ್ಪ ಮಾಡಿದ ತಪ್ಪನ್ನ ನೀನು ಸರಿ ಮಾಡ್ಕೋ. ಮೊನ್ನೆ ಜಗಳೂರಲ್ಲಿ ಪರಿಚಯಸ್ತರು ಮಾತಾಡ್ತನೇ, ಮಗಳು ಕರ್ಕೊಂಡು ಎಲ್ಲಿಗೋ ಹೊರಟರಲ್ರೀ ಅಂತ ಕೇಳ್ತಿದ್ರು, ಮುದುಕನ ಜೊತೆ ಓಡಾಡ್ತಿದ್ರೆ ತಂದೆ ಮಗಳು ಅಂತ ಜನ ನಗ್ತಾರೆ, ಹೆಣ್ಣಾಗಿದ್ದಕ್ಕೆ ಹೆತ್ತವರು ಈತನಿಗೆ ಕಟ್ಟಿ ಕೈ ತೊಳ್ಕೊಂಡ್ರು, ಎಲ್ರಿಗೂ ಸಿಗುವಂತಹ ಪ್ರೀತಿಯ ಆಸರೆ ನನಗೂ ಬೇಕಾಗುತ್ತಲ್ವಾ ವೀರೂ. ಮಡಿವಂತಿಕೆಯ ಹಿಡಿತಗಳು ಲಲಿತೆಯನ್ನ ಬಂಧಿಸುವಲ್ಲಿ ವಿಫಲವಾಗುತ್ತಲೇ ಇದ್ದವು.
ಮುಂದಾಗುವ ಅಪಾಯವು ಸಹ ಎದುರಾಗಿ ಗಹಿಸಿದಂತಿತ್ತು ವೀರೇಶನಿಗೆ. ರಾತ್ರಿ ಆಯ್ತು ಡ್ಯಾಡಿ ಬರ್ತಾರೆ ಪ್ಲೀಸ್, ನಿಮ್ಮ ವರ್ತನೆ ಅವರ ಕಣ್ಣಿಗೆ ಬಿದ್ರೆ ಖಂಡಿತ ಅನಾಹುತಾನೇ.
ಅಂತ ಯಾವ ಪ್ರಯತ್ನನೂ ಮಾಡ್ತಿಲ್ವಲ್ಲ, ಸಹಕರಿಸಿ ಅಂತಾನೂ ಕೇಳ್ತಿಲ್ಲಾ. ಮ್ಯಾರೇಜ್ ಪ್ರಸ್ತಾಪ ಆದಾಗಿನಿಂದ ನಾನು ಬಯಸಿದ್ದು ನಿಮ್ಮನ್ನೇ, ಹಣ ಕೊಟ್ಟು ಮಂಟಪಕ್ಕೆ ಕರೆಸಿ ನಾಲ್ಕು ಜನ್ರ ಕೈಗೆ ಆಕ್ಷತೆ ಕೊಟ್ಟು ತಾಳಿ ಕಟ್ಟಿಬಿಟ್ಟರೆ, ಅದು ಸಂಪ್ರದಾಯದ ಮದ್ವೆನಾ? ಹಾಗಂತ ನಿಮ್ಗೆ ತಾಯಿ ಆಗ್ಬಿಡ್ತಿನಾ, ಹೇಳುವ ಆದರ್ಶಗಳೇ ಬೇರೆ, ಒಳಮನೆಯಲ್ಲಿ ನಡೆಯುವ ನೈಜತೆಗಳೇ ಬೇರೆ, ಆದ್ದರಿಂದಲೇ ನೈಜತೆಗಳು,ಆದರ್ಶಗಳ ಮೇಲೆ ಸದಾ ಸವಾರಿ ಮಾಡ್ತಿರುತ್ತವೆ.
ಇದು ಸಮಯ, ಸಂದರ್ಭವೂ ಅಲ್ಲ. ಜೀವನವನ್ನ ಮಕ್ಕಳ ಆಟ ಅಂದ್ಕೊಂಡು ಚೇಷ್ಠೆ ಮಾಡ್ತಿದಿರಾ ಅಷ್ಟೇ. ವೀರೇಶ್ ಸಿಟ್ಟಿನಿಂದಲೇ ಸಿಡಿಮಿಡಿಯಾದ. ಎಷ್ಟು ಪ್ರಶ್ನೆಗಳನ್ನ ನನ್ನ ಮೇಲೆ ಸುರಿತಿರಾ ವೀರೂ, ಜೀವನದುದ್ದಕ್ಕೂ ನೋವು ಅನುಭವಿಸೋ ಬದಲು, ಸಂಪ್ರದಾಯದ ತಪ್ಪುಗಳನ್ನ ಧಿಕ್ಕರಿಸಿ, ಒಮ್ಮೆ ಸರಿ ಮಾಡಿ ನೋಡಿ, ಇಬ್ಬರ ಬಾಳಲ್ಲೂ ಸಂಭ್ರಮದ ಬೆಸುಗೆ, ಬದುಕ ಬಂಡಿಗೆ ನೊಗ ಕಟ್ಟಿ ಜೊತೆಯ ಬಾನಾಡಿಗಳಂತೆ ಅನುಭವಿಸುತ್ತಾ ವಸಂತಕ್ಕೆ ಮುನ್ನುಡಿ ಬರೆಯೋಣ.
ಲಲಿತೆಯ ಮಾತುಗಳು ಹಾಗೆಯೇ ಮುಂದುವರೆದಿದ್ದವು, ವೇಣು ಅವರ ಸ್ಕೂಟರ್, ಹಾರ್ನ್ ಮಾಡ್ತಾ ಬಂದ ಸುದ್ದಿ ಕೊಟ್ಟಿತ್ತು, ವೀರೇಶ್ ಮೇಲೆದ್ದವನೇ ಒಳ ಬಾಗಿಲಿಗೆ ಸರಿದು, ಹೆಜ್ಜೆಗಳಾಕುತ್ತಾ ತನ್ನ ರೂಮ್ ನ ಮಂಚಕ್ಕೆ ಮೈ ಹಾಸಿದ, ಮನಸ್ಸೂ ಅಷ್ಟೇ, ಸರಿ ತಪ್ಪುಗಳ ಲೆಕ್ಕದಲ್ಲಿ ಗುಣಿಸಿ ಭಾಗಿಸುತಿತ್ತು.
ಲೇಖನ: ಕುಮಾರ ಬಡಪ್ಪ, ಚಿತ್ರದುರ್ಗ. ನಾಳೆಗೆ………..

